ಕೊಪ್ಪಳ : ಕೃಷಿ ಇಲಾಖೆ ಕೊಪ್ಪಳ ಹಾಗೂ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ವತಿಯಿಂದ ಜಿಲ್ಲೆಯ ರೈತರಿಗೆ ಭತ್ತ, ಕಡಲೆ, ತೊಗರಿ ಬೆಳೆಯಲ್ಲಿ ಬರುವ ಕೀಟ ಮತ್ತು ರೋಗ ಬಾಧೆ ನಿಯಂತ್ರಣ ಹಾಗೂ ನಿರ್ವಹಣೆಗೆ ರೈತರಿಗೆ ಸಲಹೆಯನ್ನು ನೀಡಲಾಗಿದೆ.
ಭತ್ತ ಬೆಳೆಯು ನರ್ಸರಿ ಅಥವಾ ನಾಟಿ ಮಾಡುವ ಹಂತದಲ್ಲಿರುವಾಗ ಭತ್ತ ನಾಟಿ ಮಾಡಲು ಒಣ ಸಸಿಮಡಿ ತಯಾರಿಸಬೇಕು. ಪ್ರತಿ ಸಸಿಮಡಿಗೆ ಗೊಬ್ಬರ 10 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರ ಜೊತೆಗೆ 80 ಗ್ರಾಂ ಯೂರಿಯಾ, 280 ಗ್ರಾಂ ಸೂಪರ್ ಫಾಸ್ಪೇಟ್ ಮತ್ತು 75 ಗ್ರಾಂ ಮ್ಯೂರಿಯೇಟ್ ಆಫ್ ಪೊಟ್ಯಾಷ್ ಹಾಕಬೇಕು. ಭತ್ತದ ಸಸಿಮಡಿಯಲ್ಲಿ ಕಣೆನೊಣದ ನಿರ್ವಹಣೆಗಾಗಿ ಕ್ಲೊರೋಪೈರಿಫಾಸ್ 2.0 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅಥವಾ ಹರಳು ರೂಪದ ಶೇ. 3 ರ ಕಾರ್ಬೋಫ್ಯೂರಾನ್ 4.0 ಕೆ.ಜಿ ಪ್ರತಿ ಎಕರೆಗೆ ಹಾಕಬೇಕು.
ಕಡಲೆ ಬೆಳೆಯು ಬೆಳವಣಿಗೆ ಅಥವಾ ಕಾಳು ಕಟ್ಟುವ ಹಂತದಲ್ಲಿದ್ದಾಗ ಕಡಲೆಯಲ್ಲಿ 35-40 ದಿನದ ಬೆಳೆಯಲ್ಲಿ ಕುಡಿ ಚಿವುಟುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕವಲೊಡೆಯಲು ಸಹಾಯವಾಗುವುದಲ್ಲದೇ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಕಡಲೆಯಲ್ಲಿ ಹೂವಾಡುವ ಪ್ರಾರಂಭಿಕ ಹಂತದಲ್ಲಿ ಪೋಷಕಾಂಶಗಳ ಅಗತ್ಯತೆ ಹೆಚ್ಚಾಗಿ ಇರುವುದರಿಂದ ಶೇ.2 ರ ಯೂರಿಯಾ (20 ಗ್ರಾಂ. ಯೂರಿಯಾ) ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಕಡಲೆಯಲ್ಲಿ ಕಾಯಿಕೊರಕದ ನಿರ್ವಹಣೆಗೆ 0.2 ಗ್ರಾಂ ಇಮಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ ಅಥವಾ 0.3 ಮಿ.ಲೀ ಇಂಡಾಕ್ಸಾಕಾರ್ಬ್ 14.5 ಎಸ್.ಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕಡಲೆ ಹೂ ಬಿಡುವ ಸಮಯದಲ್ಲಿ ಚಿಕ್ಪೀ ಮ್ಯಾಜಿಕ್ @ 10 ಗ್ರಾಂ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.
ತೊಗರಿ ಬೆಳೆಯು ಕಾಳು ಕಟ್ಟುವ ಹಂತದಲ್ಲಿದ್ದಾಗ ತೊಗರಿಯಲ್ಲಿ ಗೊಡ್ಡು ರೋಗದ ನಿರ್ವಹಣೆ ಮಾಡಲು ಡಿಕೋಫಾಲ್ 2. ಮೀ.ಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಮತ್ತು ಬಾಧಿತ ಗಿಡಗಳನ್ನು ಕಿತ್ತು ನಾಶ ಮಾಡಬೇಕು. ತೊಗರಿ ಬೆಳೆಯಲ್ಲಿ ಕಾಯಿಕೊರಕದ ನಿರ್ವಹಣೆಗಾಗಿ 2.0 ಮಿ.ಲೀ ಪ್ರೋಪೆನೊಫಾಸ್ ಅಥವಾ ಕ್ಲೋರ್ಂಟ್ರಿನಿಲಿಪ್ರೋಲ್ 18.5 ಎಸ್.ಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಶೀತ ವಾತಾವರಣದಲ್ಲಿ ಮಣ್ಣಿಗೆ ಪೋಷಕಾಂಶಗಳನ್ನು ಹಾಕಬೇಡಿ. ಏಕೆಂದರೆ ಬೇರುಗಳ ಚಟುವಟಿಕೆ ಕಡಿಮೆಯಾಗುವುದರಿಂದ ಸಸ್ಯವು ಅದನ್ನು ಹೀರಿಕೊಳ್ಳುವುದಿಲ್ಲ. ಬಿತ್ತನೆಯಾದ 20-25 ದಿನದ ಹಿಂಗಾರಿ ಬೆಳೆಗಳಾದ ಜೋಳ, ಕಡಲೆ, ಶೇಂಗಾ, ಸೂರ್ಯಕಾಂತಿ ಹಾಗೂ ಇನ್ನಿತರ ಬೆಳೆಗಳಲ್ಲಿ ಅಂತರ ಬೇಸಾಯ ಕೈಗೊಳ್ಳಬೇಕು, ಇದರಿಂದ ಕಳೆ ನಿಯಂತ್ರಣ ಜೊತೆಗೆ ತೇವಾಂಶ ಸಂರಕ್ಷಣೆಯಾಗುತ್ತದೆ. ಪ್ರಸ್ತುತ ವಾತಾವರಣದಲ್ಲಿ ಕಡಿಮೆ ಉಷ್ಣಾಂಶ ಇರುವುದರಿಂದ ಯಾವುದೇ ಬೆಳೆಯಲ್ಲಿ ಮೊಗ್ಗು ಮತ್ತು ಕಾಯಿ ಉದುರುವುದು ಕಂಡುಬಂದಲ್ಲಿ 0.25 ಮಿ.ಲೀ. ಫ್ಲಾನೋಪಿಕ್ಸ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಮಣ್ಣು ಮತ್ತು ಹವಾಗುಣಕ್ಕನುಗುಣವಾಗಿ ಮರಳು ಮಿಶ್ರಿತ ಮಣ್ಣಿಗೆ 8 ರಿಂದ 10 ದಿನಗಳಿಗೊಮ್ಮೆ ಮತ್ತು ಕಪ್ಪು ಮಣ್ಣಿಗೆ 12 ರಿಂದ 15 ದಿನಗಳಿಗೊಮ್ಮೆ ನೀರು ಹಾಯಿಸಬೇಕು. ಬೆಳೆಗಳಲ್ಲಿ ಸಸ್ಯ ಸಂರಕ್ಷಣಾ ಕ್ರಮವನ್ನು ಬೆಳಗಿನ ಸಮಯದಲ್ಲಿ ಅಂಟು ದ್ರಾವಣವನ್ನು ಸಿಂಪರಣಾ ದ್ರಾವಣದಲ್ಲಿ ಬೆರೆಸಿ ಸಿಂಪಡಿಸಬೇಕು. ಮುಖ್ಯವಾಗಿ ಬೆಳೆ ಎಲೆಗಳ ಮೇಲೆ ಹರಡುವ ಏಕರೂಪದ ಕೀಟನಾಶಕವನ್ನು ಶಕ್ತಗೊಳಿಸುತ್ತದೆ ಮತ್ತು ಕೀಟನಾಶಕದ ಚಟುವಟಿಕೆಯನ್ನು ಹೆಚ್ಚಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ಇವರನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಜಿ.ಡಿ.ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
The Agriculture Department has given the following advice to farmers for managing various crops:













Follow Me