ಬೆಂಗಳೂರು: ಮೀನುಗಾರಿಕೆ ಇಲಾಖೆ ಅತ್ಯದ್ಭುತವಾದ ಇಲಾಖೆಯಾಗಿದೆ. ವಿಶ್ವ ಮೀನುಗಾರಿಕೆ ದಿನಾಚರಣೆಯ ಪ್ರಯುಕ್ತ ಮತ್ಸ್ಯ ಮೇಳವನ್ನು ಉದ್ಘಾಟನೆಗೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಆಗಮಿಸಿರುವುದು ಸಂತೋಷದ ವಿಷಯವಾಗಿದ್ದು ಮೀನುಗಾರಿಕೆ ಇಲಾಖೆಗೆ 3000 ಕೋಟಿಗಳ ಅನುದಾನವನ್ನು ನಮ್ಮ ಸರ್ಕಾರ ಮೀಸಲಿಟ್ಟಿದೆ ಅಂತ ಸಚಿವ ಮಂಕಾಳ ಎಸ್ ವೈದ್ಯ(Minister Mankala S Vaidya) ಹೇಳಿದ್ದಾರೆ.
ಪ್ರತಿಯೊಬ್ಬ ಮೀನುಗಾರ ಕುಟುಂಬಕ್ಕೂ ಶಾಶ್ವತ ಸೂರಿರಬೇಕು ಉದ್ದೇಶದಿಂದ ಮತ್ಯಾಶ್ರಯ ಯೋಜನೆ ಮೂಲಕ ವಸತಿ ರಹಿತ 10,000 ಮೀನುಗಾರರಿಗೆ ಮನೆ ನಿರ್ಮಾಣಕ್ಕಾಗಿ ಆರ್ಥಿಕ ನೆರವನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.
ಇದನ್ನು ಮಿಸ್ ಮಾಡದೇ ಓದಿ: ಕೇಂದ್ರ ಸರ್ಕಾರದಿಂದ 2026ನೇ ಸಾಲಿನ `ಸಾರ್ವತ್ರಿಕ ರಜಾದಿನಗಳ ಪಟ್ಟಿ’ ಬಿಡುಗಡೆ
ಸಮುದ್ರ ಅಂಬ್ಯುಲೆನ್ಸ್: “ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ನಮ್ಮ ಕರಾವಳಿಯಲ್ಲಿ ಕರ್ನಾಟಕದ ಮೊಟ್ಟ ಮೊದಲ ಸಮರ್ಪಿತ ಸಮುದ್ರ ಅಂಬ್ಯುಲೆನ್ಸ್ ಅನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. 7 ಕೋಟಿ ರೂ. ವೆಚ್ಚದ ಈ ಯೋಜನೆಯು, ಸಮುದ್ರದಲ್ಲಿ ಮೀನುಗಾರರ ಜೀವ ತುರ್ತು ವೈದ್ಯಕೀಯ ನೆರವಿನಿಂದ ವಂಚಿತವಾಗಬಾರದು ಎಂಬ ನಮ್ಮ ಆಶಯ.” ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರವಾಗಿ ನಮ್ಮ ಕಡಲ ತೀರದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದರು.

ಪರಿಹಾರ ದ್ವಿಗುಣ (ಮತ್ತ್ವ ಆಶಾ ಕಿರಣ): “ಮೀನುಗಾರಿಕಾ ನಿಷೇಧದ ಅವಧಿಯಲ್ಲಿ ನಮ್ಮ ಮೀನುಗಾರರು ಎದುರಿಸುವ ಸಂಕಷ್ಟವನ್ನು ನಾವು ಗುರುತಿಸಿದ್ದೇವೆ. ಹಾಗಾಗಿ, ‘ಮಕ್ಷ್ಯ ಆಶಾ ಕಿರಣ’ ಯೋಜನೆಯಡಿಯಲ್ಲಿ ನೀಡಲಾಗುತ್ತಿದ್ದ ಪರಿಹಾರವನ್ನು 1,500 ರೂ. ಗಳಿಂದ 3,000 ರೂ.ಗಳಿಗೆ ದ್ವಿಗುಣಗೊಳಿಸಿದ್ದೇವೆ. ಇದು ನಮ್ಮ ಮೀನುಗಾರ ಕುಟುಂಬಗಳಿಗೆ ಅತಿ ಮುಖ್ಯವಾದ ಆರ್ಥಿಕ ಬೆಂಬಲವಾಗಿದೆ ಎಂದು ಹೇಳಿದರು,
ಸಾಂಪ್ರದಾಯಿಕ ಮೀನುಗಾರರಿಗೆ ನೇರ ಸಹಾಯಧನ ಬೆಂಬಲ: “ನಮ್ಮ ಸಾಂಪ್ರದಾಯಿಕ ವಲಯವನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ. ನಾಡದೋಣಿಗಳಿಗೆ ಕೈಗಾರಿಕಾ ಸೀಮೆಎಣ್ಣೆಯನ್ನು ಪ್ರತಿ ಲೀಟರ್‌ಗೆ 35 ರೂ. ರಿಯಾಯಿತಿ ದರದಲ್ಲಿ ವಿತರಿಸಲು ನಮ್ಮ ಸರ್ಕಾರವು ತಕ್ಷಣ ಕ್ರಮ ಕೈಗೊಂಡು ಅಗತ್ಯ ಪರಿಹಾರವನ್ನು ಮುಂದುವರೆಸಿದೆ ಎಂದರು.

ಮೀನುಗಾರಿಕಾ ಸಂಪರ್ಕ ರಸ್ತೆಗಳು: “ಕರಾವಳಿಯಿಂದ ಮಾರುಕಟ್ಟೆಗೆ ಮೀನಿನ ಸಾಗಾಣಿಕೆಗೆ ಅನುಕೂಲವಾಗಲು, ನಮ್ಮ ಕರಾವಳಿ ಜಿಲ್ಲೆಗಳಲ್ಲಿನ ಪ್ರಮುಖ ಮೀನುಗಾರಿಕಾ ಸಂಪರ್ಕ ರಸ್ತೆಗಳ ತಕ್ಷಣದ ಅಭಿವೃದ್ಧಿಯನ್ನು NABARD ನೆರವಿನೊಂದಿಗೆ ಕೈಗೊಳ್ಳಲು 30 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದರು.
ಮೀನುಗಾರರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು, ಮೀನುಗಾರರಿಗೆ ಜೀವ ರಕ್ಷಕ ಕವಚಗಳನ್ನು ನೀಡಲಾಗುತ್ತಿದೆ. ಒಟ್ಟಾರೆಯಾಗಿ ನಮ್ಮ ಸರ್ಕಾರ ಮೀನುಗಾರರ ಅಭಿವೃದ್ಧಿ, ಬಂದರುಗಳ ಅಭಿವೃದ್ಧಿ, ಕೆರೆ ತುಂಬಿಸುವ ಕೆಲಸ, ಮೀನುಗಾರರಿಗೆ ಪೂರಕವಾದ ಪರಿಕರಗಳನ್ನು ಒದಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಈ ಎಲ್ಲಾ ಉಪಕ್ರಮಗಳಿಗೆ ಆಧಾರವಾಗಿ, ನಮ್ಮ ಸರ್ಕಾರವು ಕರ್ನಾಟಕಕ್ಕಾಗಿ ನೂತನ ಮೀನುಗಾರಿಕೆ ನೀತಿಯನ್ನು ಅಂತಿಮಗೊಳಿಸುವ ಹಂತದಲ್ಲಿದೆ. ಈ ನೀತಿಯು ಪರಿಸರ ಆರೋಗ್ಯ, ಸಂಪನ್ಮೂಲಗಳ ರಕ್ಷಣೆ ಮತ್ತು ಪ್ರತಿಯೊಬ್ಬ ಮೀನುಗಾರ ಕುಟುಂಬದ ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ನೀಲನಕ್ಷೆಯಾಗಲಿದೆ ಎಂದರು.
ಮೀನು ಕೃಷಿ ಕುರಿತು ಉತ್ತೇಜನ ನೀಡುವ 70ಕ್ಕೂ ಹೆಚ್ಚು ಮಳಿಗೆಗಳನ್ನು ಮೇಳದಲ್ಲಿ ತೆರೆಯಲಾಗಿದೆ. ಜೊತೆಗೆ ಬಗೆ ಬಗೆಯ ಮೀನಿನ ಖಾದ್ಯಗಳ ಮಾರಾಟ ಮಳಿಗೆಗಳೂ ಗ್ರಾಹಕರನ್ನು ಸೆಳೆಯುತ್ತಿವೆ ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವರಾದ ಸುರೇಶ ಬಿ.ಎಸ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾಲಾ ಬಿ.ನಾರಾಯಣರಾವ್, ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ.ಶಮ್ಲಾ ಇಕ್ಬಲ್ ಹಾಗೂ ಮೀನುಗಾರಿಕೆ ಇಲಾಖೆಯ ನಿರ್ದೇಶಕರಾದ ದಿನೇಶ್ ಕುಮಾರ್ ಅವರು ಸೇರಿದಂತೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತ್ಸ್ಯ ಪ್ರಿಯರು ಉಪಸ್ಥಿತರಿದ್ದರು.













Follow Me