ಶಿವಮೊಗ್ಗ : ಮಹಾಬಳೇಶ್ವರ ಸೈಲ್‌ ರಿಗೆ ಪ್ರಸಕ್ತ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರ

Mahabaleshwar Sail receives this year's Kuvempu National Award
Mahabaleshwar Sail receives this year's Kuvempu National Award

ಶಿವಮೊಗ್ಗ : ವಿಶ್ವಮಾನವ ಸಂದೇಶ, ವೈಚಾರಿಕತೆ ಮತ್ತು ಕನ್ನಡ ಭಾಷಾಭಿಮಾನ ಕುವೆಂಪುರವರ ಸಾಹಿತ್ಯದ ವಿಶೇಷತೆಯಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಬಣ್ಣಿಸಿದರು.

ಅವರು ಇಂದು ತೀರ್ಥಹಳ್ಳಿ ಸಮೀಪದ ಕುಪ್ಪಳಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ 121ನೇ ಜನ್ಮದಿನೋತ್ಸವದ ನಿಮಿತ್ತ ಆಚರಿಸಲಾಗುವ ವಿಶ್ವಮಾನದ ದಿನಾಚರಣೆಯಂದು ಖ್ಯಾತ ಕವಿಗಳಿಗೆ ನೀಡಲಾಗುವ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಇದನ್ನು ಮಿಸ್‌ ಮಾಡದೇ ಓದಿ: ಊರು ಹಬ್ಬ, ಜಾತ್ರೆ-ಉತ್ಸವಗಳಲ್ಲಿ ಆರೋಗ್ಯದ ಕಾಳಜಿ ವಹಿಸಿ: ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು ಸಲಹೆ

ಕನ್ನಡದ ಮೇರು ಕವಿ ಕುವೆಂಪುರವರಿಗೆ ಹಾಗೂ ಹಿರಿಯ ನಟ ಡಾ ರಾಜಕುಮಾರ್ ಅವರಿಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಎಸ್. ಬಂಗಾರಪ್ಪನವರು ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಿದ್ದರು. ಕುವೆಂಪುರವರ ಜನ್ಮಸ್ಥಳ ಕುಪ್ಪಳಿಯಲ್ಲಿ ಪ್ರತಿ ವರ್ಷ ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪ್ರತಿಷ್ಠಾನ ಇಚ್ಚಿಸಿದಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ವಿದ್ವತ್ ಜನರ ಸಮ್ಮುಖದಲ್ಲಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವಂತೆ ಆಚರಿಸಲು ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೂಡಲಾಗುವುದು. ಕುವೆಂಪು ಅವರ ಸ್ಮರಣಾರ್ಥ ಏರ್ಪಡಿಸಲಾಗುವ ಎಲ್ಲಾ ಕಾರ್ಯಕ್ರಮಗಳಿಗೆ ಆಡಳಿತಾರೂಢ ಸರ್ಕಾರಗಳು ಸಕಾಲಿಕವಾಗಿ ಸ್ಪಂದಿಸಿವೆ ಎಂದರು.

ಇದನ್ನು ಮಿಸ್‌ ಮಾಡದೇ ಓದಿ: ಕರ್ನಾಟಕ ವಿಧಾನಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಅಂತಿಮ ಮತದಾರರ ಪಟ್ಟಿ ಪ್ರಕಟ

ಸಂದ್ಯಾಕಾಲದಲ್ಲಿ ಮೈಸೂರಿನಲ್ಲಿದ್ದ ಕವಿ ಕುವೆಂಪು ಅವರು ತಮ್ಮ ಹುಟ್ಟೂರು ಹಿರೇಕೂಡಿಗೆಗೆ ಹೋಗುವ ಇಂಗಿತವನ್ನು ಅಂದಿನ ಮುಖ್ಯಮಂತ್ರಿಗಳಾಗಿದ್ದ ದಿ.ಎಸ್.ಬಂಗಾರಪ್ಪ ಅವರಲ್ಲಿ ಅರುಹಿದರು. ಎಸ್.ಬಂಗಾರಪ್ಪ ಅವರು ಕೂಡಲೇ ವಿಶೇಷ ಹೆಲಿಕ್ಯಾಪ್ಟರ್‌ ಒಂದನ್ನು ಸಿದ್ಧಪಡಿಸಿ, ಹಿರೇಕೂಡಿಗೆಗೆ ಹೋಗಿಬರುವಂತೆ ಹಾಗೂ ತಮ್ಮ ಹೆಸರಿನಲ್ಲಿ ಶಂಕರಘಟ್ಟದಲ್ಲಿ ಆರಂಭಿಸಿರುವ ವಿಶ್ವವಿದ್ಯಾಲಯವನ್ನು ನೋಡಿಬರುವಂತೆ ಮನವಿ ಮಾಡಿದ್ದರು ಎಂಬುದು ಕವಿಗಳ ಮೇಲೆ ಬಂಗಾರಪ್ಪ ಅವರಿಗೆ ಇದ್ದ ಕಾಳಜಿ ಪ್ರೀತಿಯನ್ನು ಎತ್ತಿ ತೋರಿಸುತ್ತದೆ ಎಂದರು.

ಇದನ್ನು ಮಿಸ್‌ ಮಾಡದೇ ಓದಿ: ಹಠಾತ್ ಹಣದ ಅಗತ್ಯ ಎದುರಾದರೆ, ತಾಯಿ ಲಕ್ಷ್ಮಿಯ 18 ಪುತ್ರರ ಧ್ಯಾನ ಮಾಡಬೇಕು

ಕುವೆಂಪು ಸಾಹಿತ್ಯದ ವಿಶೇಷ ಮಹತ್ವದ ಸಂಗತಿಗಳನ್ನು ಅವರ ಸಾಹಿತ್ಯ ಕೃತಿಗಳಲ್ಲಿ ಕಾಣಬಹುದಾಗಿದೆ. ಕನ್ನಡ ಸಾಹಿತ್ಯಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ನೀಡಿದ ‘ಶ್ರೀ ರಾಮಾಯಣ ದರ್ಶನಂ’ ಕೃತಿಗೆ ಮೊದಲ ಜ್ಞಾನಪೀಠ ಹಾಗೂ ‘ಜಯ ಭಾರತ ಜನನಿಯ ತನುಜಾತೆ’ ನಾಡಗೀತೆಯ ಮೂಲಕ ಕನ್ನಡಕ್ಕೆ ರಾಷ್ಟ್ರಕವಿ ಬಿರುದು ತಂದುಕೊಟ್ಟಿದ್ದು ಕುವೆಂಪು. ಅವರ ಅವಿರತ ಹಾಗೂ ಮೌಲಿಕ ಸಾಹಿತ್ಯಕೃಷಿಯಿಂದಾಗಿ ಕನ್ನಡ ಸಮೃದ್ಧ ಮತ್ತು ಶ್ರೀಮಂತ ಭಾಷೆಯಾಗಿ ಹೊರಹೊಮ್ಮಿದೆ ಎಂದರು.

ಜಾತಿ, ಮತ, ಧರ್ಮ, ಭೇದಗಳಿಲ್ಲದ ಸರ್ವೋದಯದ ಮಾನವತಾವಾದವನ್ನು ತಮ್ಮ ಸಾಹಿತ್ಯದ ಮೂಲಕ ಸಾರಿದವರು ಕುವೆಂಪು. ಅವರ ‘ವಿಶ್ವಮಾನವ’ ಕಲ್ಪನೆ ಸರ್ವೋತ್ಕೃಷ್ಟವಾದುದು. ಅವರು ಸಾಮಾಜಿಕ ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿ, ಮೌಲ್ಯಗಳನ್ನು ಮರು-ವ್ಯಾಖ್ಯಾನಿಸಲು ಪ್ರೇರೇಪಿಸಿದರು. ಪಾಶ್ಚಾತ್ಯ ಸಾಹಿತ್ಯದ ಪ್ರಭಾವವಿದ್ದರೂ, ಕನ್ನಡತನವನ್ನು ಉಳಿಸಿದವರಲ್ಲಿ ಕುವೆಂಪು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದರು. ಕುವೆಂಪುರವರ ಸಾಹಿತ್ಯವು ಆಧುನಿಕತೆ, ಮಾನವೀಯತೆ ಮತ್ತು ಕನ್ನಡದ ಭಾಷಾ ಸೌಂದರ್ಯದ ಮಹಾನ್ ಸಂಗಮವಾಗಿದೆ ಮಾತ್ರವಲ್ಲ ಕನ್ನಡ ಸಾಹಿತ್ಯವನ್ನು ಉನ್ನತ ಶಿಖರಕ್ಕೆ ಕೊಂಡೊಯ್ದಿದೆ. ಇಂತಹ ಜಗದಕವಿ, ಯುಗದ ಕವಿ, ಕನ್ನಡದ ಮೇರುಕವಿ ಪುಟ್ಟಪ್ಪನವರು ಜನಿಸಿದ ನೆಲದಲ್ಲಿ ನಾವಿದ್ದೇವೆ ಎಂಬುದೇ ಸಂಭ್ರಮದ ಸಂಗತಿ ಎಂದರು.

ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಪ್ರಕೃತಿಯ ಮಹತ್ವ ಸಾರಿದ ಕುವೆಂಪು ಅವರ ಆಶಯದಂತೆ ಮಾನವೀಯತೆ, ಮನುಷ್ಯತ್ವವನ್ನು ಪಠ್ಯದಲ್ಲಿ ಅಳವಡಿಸಲಾಗುತ್ತಿದೆ. ಅಲ್ಲದೇ ನೀತಿ ಶಿಕ್ಷಣವನ್ನು ಪ್ರಸಕ್ತ ಸಾಲಿನಿಂದ ಬೋಧಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಕನ್ನಡ ಭಾಷೆಯ ಉಳಿವು-ವಿಕಾಸ, ಶಿಕ್ಷಣಕ್ಕೆ ಒತ್ತು ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಪ್ರಸಕ್ತ ಆಡಳಿತಾರೂಢ ಸರ್ಕಾರ ಶಿಕ್ಷಣಕ್ಕಾಗಿ ಪ್ರತಿ ವರ್ಷ 50000ಕೋಟಿ ಮೊತ್ತವನ್ನು ಖರ್ಚು ಮಾಡುತ್ತಿದೆ ಎಂದ ಅವರು, ಒಂದರಿಂದ ಹತ್ತನೆ ತರಗತಿಯವರೆಗಿನ ಎಲ್ಲಾ ಪಠ್ಯಪುಸ್ತಕಗಳಲ್ಲಿ ಕುವೆಂಪು ವಿರಚಿತ ನಾಡಗೀತೆಯನ್ನು,ಗಾಂಧೀಜಿಯವರ ಸಪ್ತಪಾತಕಗಳು ಮತ್ತು ಧ್ಯಾನಸ್ಥ ಗಾಂಧೀಜಿಯವರ ಭಾವಚಿತ್ರವನ್ನು ಮುದ್ರಿಸಲಾಗುತ್ತಿದೆ. ಅಂತೆಯೇ ಜಾತ್ಯಾತೀತ ಭಾವವನ್ನು ಪ್ರತಿಬಿಂಬಿಸುವ ಸಂವಿಧಾನದ ಪೀಠಿಕೆಯನ್ನು ಅಚ್ಚು ಹಾಕಿಸಲು ಉದ್ದೇಶಿಸಲಾಗಿದೆ ಎಂದರು.

• ಪ್ರತಿಷ್ಟಾನದಿಂದ ನೀಡಲಾಗುವ 2025ರ ರಾಷ್ಟ್ರೀಯ ಕುವೆಂಪು ಪುರಸ್ಕಾರಕ್ಕೆ ಬಾಜನರಾದ ಕೊಂಕಣಿ ಮತ್ತು ಮರಾಠಿ ದ್ವಿಭಾಷಾ ಕವಿ ಮಹಾಬಳೇಶ್ವರ ಸೈಲ್‌ ಅವರು ಕೃತಜ್ಞತೆಯಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ. ಕುವೆಂಪು ಅವರು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಅವರು ನಾಡಿಗೆ ನೀಡಿದ ಸಂದೇಶ ಸಾರ್ವಕಾಲಿಕವಾಗಿದೆ ಎಂದರು.

• ಕುವೆಂಫು ನಾಡುನುಡಿಯನ್ನು ಪ್ರೀತಿಸಿದವರು, ಅವರ ಕೃತಿ ನಮ್ಮೆಲ್ಲರ ಕಿರೀಟಪ್ರಾಯವಾಗಿದೆ. ರಾಮಾಯಣ ಕೃತಿಯಲ್ಲಿ ಊರ್ಮಿಳೆಯ ಪಾತ್ರದ ಕುರಿತು ಕವಿ ಕುವೆಂಪು ಅವರು ವಿಶೇಷ ಬೆಳಕು ಚೆಲ್ಲಿದ್ದಾರೆ. ತಮ್ಮ ಸಾಹಿತ್ಯದ ಮೂಲಕ ಎಲ್ಲರಲ್ಲೂ ವಿಶ್ವಪ್ರೇಮ, ಪ್ರಕೃತಿ ಪ್ರೇಮವನ್ನು ಬೆಳೆಸಿದ್ದಾರೆ. ರಾಮಾಯಣ ದರ್ಶನಂ ಮತ್ತು ಕಾನೂರು ಸುಬ್ಬಮ್ಮ ಹೆಗ್ಗಡಿತಿ ಅವು ಗದ್ಯಮಹಾಕಾವ್ಯಗಳೇ ಆಗಿವೆ. ಅವರ ವೈಚಾರಿಕ ನಿಲುವು ನಮಗೆಲ್ಲರಿಗೂ ಜೀವನ ವಿಧಾನಗಳಾಗಿವೆ ಎಂದರು.

• ಕುವೆಂಪುರವರು ತಮ್ಮ ಸಾಹಿತ್ಯದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾಬೀತುಪಡಿಸಿದ್ದಾರೆ. ಕನ್ನಡ ಭಾಷೆಯ ಹಿರಿಮೆಯನ್ನು ತಮ್ಮ ಸಾಹಿತ್ಯದ ಮೂಲಕ ವಿಶ್ವಕ್ಕೆ ಪರಿಚಯಿಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿಯ ಮೂಲಕ ಕುಪ್ಪಳಿ ಎಲ್ಲಾ ಭಾಷಿಕರ ಒಕ್ಕೂಟವಾಗಿ ಪ್ರತಿಬಿಂಬಿತವಾಗಿದೆ. ಡಾ.ಶರತ್‌ ಅನಂತಮೂರ್ತಿ, ಕುವೆಂಪು ವಿವಿ ಕುಲಪತಿಗಳು, ಶಂಕರಘಟ್ಟ.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುವೆಂಪು ಪ್ರತಿಷ್ಟಾನದ ಅ‍ಧ್ಯಕ್ಷ ಡಾ.ಬಿ.ಎಲ್.ಶಂಕರ್‌ ಅವರು ಮಾತನಾಡಿ, ಕವಿಶೈಲ, ಕುಪ್ಪಳಿಯ ವಿಕಾಸಕ್ಕೆ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಕೊಡುಗೆ ಅಪಾರ. ವರ್ಷಕ್ಕೆ ಮೂರ್ನಾಲ್ಕು ಲಕ್ಷ ಜನ ಭೇಟಿ ನೀಡುವ ಪ್ರವಾಸಿ ತಾಣವಾಗಿ ಕವಿಮನೆ ಪ್ರಸಿದ್ಧಿ ಪಡೆದಿದೆ. ಪೂರ್ಣಚಂದ್ರ ತೇಜಸ್ವಿಯವರ ಸಲಹೆಯಂತೆ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್‌ ಅವರು ಕವಿಮನೆಯ ಸುತ್ತಮುತ್ತಲ ಪ್ರದೇಶವನ್ನು ಕುವೆಂಪು ಜೈವಿಕ ಅರಣ್ಯ ಪ್ರದೇಶ ಎಂದು ಘೋಷಿಸಿದರು. ಈ ಸ್ಥಳ ಇತ್ತೀಚಿನ ದಿನಗಳಲ್ಲಿ ಆಯಸ್ಕಾಂತದಂತೆ ಜನರನ್ನು ತನ್ನೆಡೆಗೆ ಸೆಳೆಯುತ್ತಿದೆ ಎಂದರು.

ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕುವೆಂಪು ಕಲಾಕ್ಷೇತ್ರದ ನಿರ್ಮಾಣಕ್ಕೆ ಅನೇಕ ಜನ ದಾನಿಗಳು ಮುಂದಾಗಿದ್ದಾರೆ. ಆದಾಗ್ಯೂ ಇನ್ನೂ 8-9ಕೋಟಿ. ರೂ.ಗಳ ಅಗತ್ಯವಿದ್ದು, ರಾಜ್ಯ ಸರ್ಕಾರದಿಂದ ಬಿಡುಗಡೆಗೊಳಿಸಲು ಸಹಕಾರ ನೀಡಬೇಕು. ಕುವೆಂಪು ವಿರಚಿತ ನಾಡಗೀತೆಯನ್ನು ಜನಸಾಮಾನ್ಯರು ಅರ್ಥೈಸಿಕೊಳ್ಳುವಂತೆ ಕಾರ್ಯಕ್ರಮವನ್ನು ರೂಪಿಸಬೇಕು. ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಕುವೆಂಪು ಸಾಹಿತ್ಯದ ಕುರಿತು ಚರ್ಚೆ, ಕಮ್ಮಟಗಳು, ಪ್ರಬಂಧ ಸ್ಪರ್ಧೆಗಳು ನಡೆಯುವಂತಾಗಬೇಕೆಂದವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಶಯದಂತೆ ಶಿವಮೊಗ್ಗ ಸಮೀಪದ ವಿಮಾನ ನಿಲ್ದಾಣಕ್ಕೆ ಕುವೆಂಪು ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿದೆ. ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ನೀಡಿದ ಮಾನವೀಯತೆಯ ಸಂದೇಶ ಎಲ್ಲರಿಗೂ ಎಲ್ಲಾ ಕಾಲಕ್ಕೂ ಪ್ರೇರಣದಾಯಿಯಾಗಿದೆ ಎಂದರು.
ಜಾತಿ ಇಂದು ಎಲ್ಲಾ ನಾಯಕರ ಊರುಗೋಲಾಗಿದೆ. ತತ್ವ ಸಿದ್ಧಾಂತಗಳ ಬದಲಾಗಿ ಜಾತಿ ವ್ಯವಸ್ಥೆ ಬಂದು ನಿಂತಿದೆ. ಇಂತಹ ಸಂದರ್ಭದಲ್ಲಿ ಮನುಕುಲಕ್ಕೆ ಮಾರ್ಗದರ್ಶನ ನೀಡಿದ ಕುವೆಂಪು ಅವರ ಸಾಹಿತ್ಯವನ್ನು ಅರಿತು ನಡೆಯುವ ಅಗತ್ಯವಿದೆ ಎಂದವರು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್‌ ಸದಸ್ಯೆಬಲ್ಕೀಸ್‌ ಬಾನು ಅವರು ಕುವೆಂಪು ಕೃತಿ ಬೊಮ್ಮನಹಳ್ಳಿಯ ಕಿಂದರಿಜೋಗಿ ಕೃತಿ ನೂರನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೃತಿಯಿಂದಾದ ಭಾಗಗಳ ಚಿತ್ರಗಳನ್ನು ಮುದ್ರಿಸಿದ 2026ರ ಕ್ಯಾಲೆಂಡರ್‌ನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಡಾ.ಅಂಶುಮಂತ್‌, ರಾಷ್ಟ್ರಕವಿ ಪೂರ್ಣಚಂದ್ರ ಕನ್ನಡ ಅಧ್ಯಯನ ಕೇಂದ್ರದ ಶೈಕ್ಷಣಿಕ ಸಂಚಾಲಕ ಕೇಶವ ಮಳಗಿ, ದೇವಂಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ಕುಮಾರ್‌, ದೇವಂಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಹೆಚ್.ಪಿ.ಸರೋಜ, ನಾಗರಾಜ ಟಿ.ಎಸ್., ಪ್ರತಿಷ್ಟಾನದ ಸಮಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್‌ ಯು.ಹೆಚ್. ಸೇರಿದಂತೆ ನಾಡಿನ ಹಿರಿಯ ಕವಿ-ಕಲಾವಿದರು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

Mahabaleshwar Sail receives this year’s Kuvempu National Award