ಚಿಕ್ಕಬಳ್ಳಾಪುರ: ಅನುಸೂಚಿತ ಜಾತಿ ಮತ್ತು ಬುಡಕಟ್ಟು ಸಮುದಾಯಗಳ ಸಮಸ್ಯೆಗಳು, ಕುಂದುಕೊರತೆಗಳನ್ನು ಸೋಮವಾರ ಇಲ್ಲಿನ ಜಿಲ್ಲಾಡಳಿತ ಭವನದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಮೂರ್ತಿ ಅವರು ಆಲಿಸಿ ಮನವಿಗಳನ್ನು ಸ್ವೀಕಾರ ಮಾಡಿದರು.
ಈ ವೇಳೆ ಅವರು ಮಾತನಾಡಿ, ಅನುಸೂಚಿತ ಜಾತಿ ಮತ್ತು ಬುಡಕಟ್ಟು ಸಮುದಾಯಗಳ ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಇಂದು ಆಯೋಗ ಆಲಿಸಿದೆ. ಈ ಮನವಿ ಹಾಗೂ ಅಹವಾಲುಗಳನ್ನು ಆಯೋಗವು ಕೂಲಂಕಷವಾಗಿ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಮುಖೇನ ಸೂಚನೆ ನೀಡಿ ವಿಲೆವಾರಿ ಮಾಡಲು ನಿರ್ದೇಶನ ನೀಡಲಾಗುವುದು. ಪತ್ರ ವ್ಯವಹಾರಕ್ಕೆ ಸ್ಪಂದಿಸದಿದ್ದರೆ ಆಯೋಗವೇ ದೂರು ದಾಖಲಿಸಿಕೊಂಡು ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೆ ಒಳಪಡಿಸುವ ಜೊತೆಗೆ ಅರ್ಜಿ ವಿಲೇವಾರಿಗೆ ತ್ವರಿತ ಕ್ರಮ ವಹಿಸಲಾಗುತ್ತದೆ. ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಅನುದಾನವನ್ನು ಬಳಕೆ ಮಾಡದೇ ನಿರ್ಲಕ್ಷ್ಯ ವಹಿಸಿರುವವರಿಗೆ ನಿರ್ದಾಕ್ಷಿಣ್ಯವಾಗಿ ಶಿಕ್ಷೆಗೆ ಒಳಪಡಿಸಲಾಗುವುದು.

ಜಿಲ್ಲೆಯಾಗಿ 18 ವರ್ಷ ಕಳೆದಿದ್ದರೂ ಈ ವರೆಗೆ ಜಿಲ್ಲಾ ಕೇಂದ್ರದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ, ಡಾ. ಬಾಬು ಜಗಜೀವನ ರಾಂ ಭವನಗಳು ನಿರ್ಮಾಣವಾಗದಿರುವ ಬಗ್ಗೆ ಆಯೋಗ ಗಂಭೀರವಾಗಿ ಗಮನಿಸಿದೆ. ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ವೇಳೆ ಹಾಗೂ ಅನೇಕ ವರ್ಷಗಳಿಂದ ಸಾಗುವಳಿ ಮಾಡಿಕೊಂಡು
ಅಲ್ಲೆ ವಾಸವಿದ್ದ ದಲಿತ ಸಮುದಾಯಗಳ ಕೆಲವು ಕುಟುಂಬಗಳನ್ನು ಒಕ್ಕಲೆಬ್ಬಿಸುವುದನ್ನು ಗಮನಿಸಲಾಗಿದೆ, ಒಂದು ಒಕ್ಕಲೆಬ್ಬಿಸುವ ಅನಿವಾರ್ಯ ಪ್ರಸಂಗವಿದ್ದಲ್ಲಿ ಆ ಸಮುದಾಯಗಳಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಜಿಲ್ಲೆಯ ಅನೇಕ ಕಡೆ ಅಕ್ರಮ ಮದ್ಯ ಮಾರಾಟವು ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಲು ಕಾರಣವಾಗುತ್ತಿದೆ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಸೂಚನೆ
ನೀಡಲಾಗಿದೆ. ದಲಿತ ಸಮುದಾಯಗಳ ರೈತರ ಜಮೀನು ಒತ್ತುವರಿ ಸಮಸ್ಯೆ,ಸ್ಮಶಾನ ಭೂಮಿ ಹಾಗೂ ದಾರಿ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಅನುಸೂಚಿತ ಜಾತಿ ಮತ್ತು ಬುಡಕಟ್ಟು ಸಮುದಾಯಗಳ ಸಮಸ್ಯೆಗಳು ಹಾಗೂ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಆಯೋಗದಲ್ಲಿ 2488 ಪ್ರಕರಣಗಳನ್ನು ದಾಖಲಾಗಿದ್ದು, ಈ ಪ್ರಕರಣಗಳನ್ನು ಇತ್ಯರ್ಥಪಡಿಸುವಂತಹ ನಿರಂತರ ಪ್ರಯತ್ನವನ್ನು ಆಯೋಗ ಮಾಡುತ್ತಿದೆ. ಕಳೆದ ಮೂರು ತಿಂಗಳಲ್ಲಿ 78 ಪ್ರಕರಣಗಳನ್ನು ವಿಲೆಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಸಮುದಾಯಗಳ ಮುಖಂಡರು ಜಿಲ್ಲೆಯ ಹಿತದೃಷ್ಠಿಯಿಂದ ಹಲವು ಮನವಿಗಳನ್ನು ಹಾಗೂ ಅಹವಾಲುಗಳನ್ನು ನೀಡಿದ್ದಾರೆ. ಆ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾಯಿಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಕಾರ್ಯದರ್ಶಿ ಡಾ.ಹೆಚ್.ಎಸ್.ಶಿವರಾಮು, ಸದಸ್ಯ (ವಕೀಲ) ಎಂ.ಕುಂಬಯ್ಯ,ಅಪರ ಜಿಲ್ಲಾಧಿಕಾರಿ ಡಾ. ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್,
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜಾನಂದರೆಡ್ಡಿ, ಅನುಸೂಚಿತ ಜಾತಿ ಮತ್ತು ಬುಡಕಟ್ಟು ಸಮುದಾಯಗಳ ಮುಖಂಡರು, ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.













Follow Me