ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಗರ್ಭಿಣಿ ಹ***ತ್ಯೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್ ಲಾಡ್ ಅವರು, ಘಟನೆಯ ಕುರಿತು ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದರು. ದೌ***ರ್ಜ***ನ್ಯಕ್ಕೆ ಒಳಗಾದ ಕುಟುಂಬದ ಮನೆಗೂ ಸಚಿವರು ಭೇಟಿ ನೀಡಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಮಾನತೆಗಾಗಿ ಹೋರಾಟ ನಡೆಸಿದ ಮಹಾನ್ ಸಮಾಜ ಸುಧಾರಕ ಬಸವಣ್ಣನವರ ತತ್ವಗಳನ್ನು ಪಾಲಿಸಿಕೊಂಡು ಬಂದಿರುವ ಮನೆತನ ದೊಡ್ಡಮನಿ ಅವರದ್ದು, ಅವರ ಕುಟುಂಬದಲ್ಲೇ ಇಂತಹ ಘಟನೆ ನಡೆದಿರುವುದು ದುಃಖ ತಂದಿದೆ ಎಂದರು.
ಇದನ್ನು ಮಿಸ್ ಮಾಡದೇ ಓದಿ: 2026ಕ್ಕೆ ಜಗತ್ತೇ ಮುಳುಗುತ್ತೆ, ಕೋಡಿಮಠ ಶ್ರೀ

ಅಂಬೇಡ್ಕರ್ ಹಾಗೂ ಬಸವಣ್ಣನವರು ಹಾಕಿಕೊಟ್ಟ ತತ್ವಸಿದ್ಧಾಂತಗಳನ್ನು ಜನರು ಇನ್ನಷ್ಟು ಅರಿತುಕೊಂಡು ಆಚರಣೆಗೆ ತರಬೇಕೆಂಬುದು ನನ್ನ ಮನವಿ. ದಯವೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರು ಹೇಳಿದ್ದರು. ಧರ್ಮ ಮತ್ತು ದಯೆ ಇಲ್ಲದೆ, ಮಾನವನಾಗಿ ಹುಟ್ಟಿರುವುದಕ್ಕೆ ಅರ್ಥವೇ ಇರುವುದಿಲ್ಲ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಮಾನವ ಜಾತಿಯೇ ಶ್ರೇಷ್ಠ ಎಂಬ ಭಾವನೆಯೊಂದಿಗೆ, ದಯೆ ಮತ್ತು ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಂಡು, ಪರಸ್ಪರ ಪ್ರೀತಿ ಹಾಗೂ ಸೌಹಾರ್ದತೆಯಿಂದ ಬದುಕಿದಾಗ ಮಾತ್ರ ಬಸವಣ್ಣನವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.

ಗ್ರಾಮಸಭೆಗಳ ಆಯೋಜನೆ: ಇನ್ನು ಮುಂದೆ ಗ್ರಾಮಸಭೆಗಳನ್ನು ಆಯೋಜಿಸಲಾಗುವುದು. ಸರ್ಕಾರ, ಜಿಲ್ಲಾಡಳಿತ ಹಾಗೂ ಶಾಸಕರುಗಳು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿ, ಸಮಾಜದಲ್ಲಿ ಮತ್ತೆ ಸೌಹಾರ್ದತೆ ಮತ್ತು ಏಕತೆಯನ್ನು ಪುನಃ ಸ್ಥಾಪಿಸಲು ಎಲ್ಲರನ್ನು ಒಗ್ಗೂಡಿಸುವ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಲಾಡ್ ಅವರು ಭರವಸೆ ನೀಡಿದರು.
ಗ್ರಾಮಸ್ಥರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕುವಂತೆ ಮನವರಿಕೆ ಮಾಡಲಾಗುವುದು. ತಪ್ಪಿಸ್ಥತರಿಗೆ ಶಿಕ್ಷೆ ಆಗುವಂತೆ, ನೊಂದವರಿಗೆ ನ್ಯಾಯ ಸಿಗುವಂತೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಶಾಸಕರಾದ ಎನ್.ಎಚ್. ಕೋನರಡ್ಡಿ, ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಅಪರ ಜಿಲ್ಲಾಧಿಕಾರಿ ಗೀತಾ.ಸಿ.ಡಿ, ಡಿಸಿಪಿ ಮಾನಿಂಗ ನಂದಗಾವಿ, ಉಪ ವಿಭಾಗಾಧಿಕಾರಿ ಶಾಲಂ ಹುಸೇನ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ ಪಿ., ತಹಶಿಲ್ದಾರ ಜೆ.ಬಿ.ಮಜ್ಜಗಿ, ತಾ.ಪಂ ಇಓ ರಾಮಚಂದ್ರ ಹೊಸಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ದಲಿತ ಸಂಘಟನೆಗಳ ಪ್ರಮುಖರು ಇದ್ದರು.
District In-charge Minister Santosh Lad visited Inamveerapur village













Follow Me