ಎಲೆಚುಕ್ಕೆ ರೋಗ ನಿಯಂತ್ರಣ ಜಾಗೃತಿ-ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕ್ರಮ : ಮಧು ಬಂಗಾರಪ್ಪ

Disease control awareness for elechuke-Action to give rights to slum dwellers : Madhu Bangarappa
Disease control awareness for elechuke-Action to give rights to slum dwellers : Madhu Bangarappa

ಶಿವಮೊಗ್ಗ: ಮಲೆನಾಡು ಪ್ರದೇಶದಲ್ಲಿ ತೀವ್ರತರವಾಗಿರುವ ಅಡಿಕೆ ಎಲೆಚುಕ್ಕೆ ರೋಗದಿಂದಾಗಿ ಸಣ್ಣ ರೈತರಿಗೆ ತುಂಬಾ ತೊಂದರೆಯಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ವಿಜ್ಞಾನಿಗಳಿಂದ ಮಾರ್ಗದರ್ಶನ ಪಡೆದು ಹತೋಟಿ ಕ್ರಮ ಕೈಗೊಳ್ಳುತ್ತಿದ್ದು ರೈತರಿಗೆ ಈ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡುವುದು ಅತಿ ಅವಶ್ಯಕವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಎಲೆ ಚುಕ್ಕೆ ರೋಗ ನಿಯಂತ್ರಣ ಮತ್ತು ಇತರೆ ವಿಷಯ ಕುರಿತು ಚರ್ಚಿಸಲು ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆಗಾಲದಲ್ಲಿ ಹೆಚ್ಚಾಗಿ ಹರಡುವ ಎಲೆ ಚುಕ್ಕೆ ರೋಗ ನಿಯಂತ್ರಣ ದುಬಾರಿಯಾಗಿದೆ. ರೋಗ ನಿಯಂತ್ರಣ ಕ್ರಮಕ್ಕೆ ಕೇಂದ್ರ ಮತ್ತು ರಾಜ್ಯ ಕ್ರಮವಾಗಿ ಶೇ.60 ಮತ್ತು 40 ಹಣ ನೀಡಲು ಸಿದ್ದವಿದ್ದು, ಮುಖ್ಯವಾಗಿ ರೋಗ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳ ಅಭಿಪ್ರಾಯ ಮತ್ತು ಮಾರ್ಗದರ್ಶನದ ಮೇಲೆ ಮಾರ್ಗಸೂಚಿಯನ್ನು ತಯಾರಿಸಲಾಗುತ್ತಿದೆ.

ಇಲಾಖೆಗಳು, ಗ್ರಾ.ಪಂ, ಸಹಕಾರ ಸಂಘಗಳು, ಅಡಿಕೆ ಮಾರಾಟ ಸಹಕಾರ ಸಂಘಗಳ ಮೂಲಕ ರೈತರಿಗೆ ಈ ರೋಗ ನಿಯಂತ್ರಣ ಮತ್ತು ವಿಜ್ಞಾನಿಗಳು ತಯಾರಿಸಿದ ಮಾರ್ಗಸೂಚಿಗಳನ್ನು ಅನುಸರಿಸುವ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಅರ್ಧ, ಮುಕ್ಕಾಲು ಎಕರೆ ಹೊಂದಿರುವ ಸಣ್ಣ ಸಣ್ಣ ರೈತರಿಗೆ ಈ ರೋಗದಿಂದಾಗಿ ತುಂಬಾ ತೊಂದರೆಯಾಗುತ್ತಿದ್ದು ರೋಗ ನಿಯಂತ್ರಣಕ್ಕಾಗಿ ಎಲ್ಲರೂ ಸೇರಿ ಒಂದು ತಂಡವಾಗಿ ಕಾರ್ಯ ನಿರ್ವಹಿಸುವ ಮೂಲಕ ಸಹಕರಿಸಬೇಕೆಂದರು.

Disease control awareness for elechuke-Action to give rights to slum dwellers : Madhu Bangarappa
Disease control awareness for elechuke-Action to give rights to slum dwellers : Madhu Bangarappa

ಅತಿ ಹೆಚ್ಚು ಕೆಪಿಎಸ್ ಶಾಲೆ : ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ 900 ಕೆಪಿಎಸ್ ಶಾಲೆಗಳನ್ನು ಸುಮಾರು ರೂ.3500 ಕೋಟಿ ಅನುದಾನದಲ್ಲಿ ತೆರೆಯಲಾಗುತ್ತಿದ್ದು, ಇದೊಂದು ದೊಡ್ಡ ಮತ್ತು ಶೈಕ್ಷಣಿಕ ಕ್ಷೇತ್ರದ ಅತ್ಯುತ್ತಮ ಯೋಜನೆಯಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 11 ಕೆಪಿಎಸ್ ಶಾಲೆಗಳಿದ್ದು, ಹೊಸದಾಗಿ 19 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ಇಂತಹ ದೊಡ್ಡ ಯೋಜನೆಗೆ ಶಿವಮೊಗ್ಗದಲ್ಲಿಯೇ ಮಾನ್ಯ ಮುಖ್ಯಮಂತ್ರಿಗಳಿAದ ಚಾಲನೆ ಕೊಡಿಸುವ ಯೋಜನೆ ಇದೆ. ಇದೇ ವೇಳೆ ಆಡಳಿತ ಭವನ, ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದು, ಅರಣ್ಯ ಸಮಸ್ಯೆಗಳಿಗೆ ಪರಿಹಾರೋಪಾಯ ಸೇರಿದಂತೆ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ಕೊಡಿಸುವ ಬಗ್ಗೆ ಯೋಜಿಸಲಾಗುತ್ತಿದೆ ಎಂದರು.

ಕೊಳಚೆ ಪ್ರದೇಶ ನಿವಾಸಿಗಳಿಗೆ ಹಕ್ಕುಪತ್ರ : ಜಿಲ್ಲೆಯಲ್ಲಿರುವ ಎಲ್ಲ ಕೊಳಚೆ ಪ್ರದೇಶಗಳನ್ನು ಗುರುತಿಸಿ ಅವರಿಗೆ ಹಕ್ಕುಪತ್ರ ನೀಡುವ ಮೂಲಕ ಮುಖ್ಯವಾಹಿನಿಗೆ ತರಲು ಆಂದೋಲನದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಕೊಳಚೆ ಪ್ರದೇಶಗಳನ್ನು ಗುರುತಿಸಿ ಅವರಿಗೆ ಹಕ್ಕುಪತ್ರ, ಇ-ಸ್ವತ್ತು ನೀಡಲು ಕ್ರಮ ಜರುಗಿಸುವಂತೆ ಡಿಯುಡಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇನ್ನು 15 ದಿನಗಳ ಒಳಗೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ಲಂ ಗಳನ್ನು ಗುರುತಿಸಿ ಕ್ರಮ ವಹಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಜಿಲ್ಲೆಯನ್ನು ಕೊಳಚೆ ಪ್ರದೇಶಮುಕ್ತ ಜಿಲ್ಲೆಯನ್ನಾಗಿ ಮಾಡುವ ಮೂಲಕ ಮಾದರಿ ಜಿಲ್ಲೆಯಾಗಿಸಲು ಎಲ್ಲರೂ ಸಹಕರಿಸಬೇಕು ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಜಿ.ಪಂ ಸಿಇಓ ಹೇಮಂತ್ ಎನ್, ಸಿಸಿಎಫ್ ಹನುಮಂತಪ್ಪ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಮಾಜಿ ವಿಧಾನ ಪರಿಷತ್ ಶಾಸಕರಾದ ಪ್ರಸನ್ನಕುಮಾರ್, ಕೃಷಿ ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ದೇವಿಕುಮಾರ್, ಎಸಿ ಸತ್ಯನಾರಾಯಣ, ಡಿಯುಡಿಸಿ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಸ್ಲಂ ಬೋರ್ಡ್ ಅಧಿಕಾರಿಗಳು, ಡಿಡಿಪಿಐ, ಇತರೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.