ಬೆಂಗಳೂರು : ರಾಜ್ಯದ ಸಾರಿಗೆ ನಿಗಮದ ಮಹಿಳಾ ನೌಕರರಿಗೆ ಇದೀಗ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಋತುಚಕ್ರ ರಜೆ ನೀಡಲು ಸಾರಿಗೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಹೌದು ಈ ಬಗ್ಗೆ ಕೆ ಎಸ್ ಆರ್ ಟಿ ಸಿ ಎಂಡಿ ಅಕ್ರಂಪಾಶ ಆದೇಶ ಹೊರಡಿಸಿದ್ದಾರೆ. ಜನವರಿ 1 ರಿಂದ ಮಹಿಳಾ ಡ್ರೈವರ್, ಕಂಡಕ್ಟರ್ ಹಾಗು ಮಹಿಳಾ ಸಿಬ್ಬಂದಿಗಳು ಋತುಚಕ್ರ ರಜೆಯನ್ನು ಪಡೆಯಬಹುದಾಗಿದೆ. ಸರ್ಕಾರಿ ಮಹಿಳೆಯರಿಗೆ ಋತುಚಕ್ರ ರಜೆ ನೀಡುವ ಕುರಿತು ಈಗಾಗಲೇ ಹಲವು ಬಾರಿ ಚರ್ಚೆಯಾಗಿದ್ದು ಇದೀಗ ಸಾರಿಗೆ ಇಲಾಖೆ ಮಹಿಳಾ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಆದೇಶದಲ್ಲಿ ಉಲ್ಲೇಖ ಮಾಡಿರುವ ವಿವರ ಹೀಗಿದೆ
ಕರ್ನಾಟಕ ಸರ್ಕಾರವು ಉಲ್ಲೇಖಿತ ಸರ್ಕಾರದ ಆದೇಶಗಳಲ್ಲಿ ಮನೋಸ್ಥ್ಯರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆಯ ಸೌಲಭ್ಯವನ್ನು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೂ ಕಲ್ಪಿಸಿ ಷರತ್ತು ಮತ್ತು ನಿಬಂಧನೆಗೊಳಪಟ್ಟು ರಜೆ ಮಂಜೂರು ಮಾಡಲು ಆದೇಶಿಸಿರುತ್ತದೆ.
ಸದರಿ ಆದೇಶವನ್ನು ನಿಗಮದಲ್ಲಿ ಅಳವಡಿಸಿಕೊಂಡಿದ್ದು, ಅದರಂತೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ದಿನಾಂಕ: 01.01.2026 ರಿಂದ ಜಾರಿಗೆ ಬರುವಂತೆ ಪ್ರತಿ ತಿಂಗಳು ಒಂದು ದಿನದಂತೆ ಋತುಚಕ್ರ ರಜೆಯ ಸೌಲಭ್ಯವನ್ನು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡುವುದು.

1. ಋತುಚಕ್ರ ಹೊಂದಿರುವ, 18 ರಿಂದ 52 ವಯಸ್ಸಿನ ನಿಗಮದ ಮಹಿಳಾ ನೌಕರರು ಈ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ.
2. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸಕ್ಷಮವಾದ ಪ್ರಾಧಿಕಾರಿಯು ಋತುಚಕ್ರ ರಜೆ ಮಂಜೂರು ಮಾಡಬಹುದು. ಈ ರಜೆಯನ್ನು ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅಗತ್ಯವಿಲ್ಲ.
3. ಈ ರಜೆಯನ್ನು ರಜೆ/ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸತಕ್ಕದ್ದು,
4. ಋತುಚಕ್ರ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸತಕ್ಕದ್ದಲ್ಲ. ಸದರಿ ರಜೆಯನ್ನು ಆಯಾ ತಿಂಗಳಿನಲ್ಲಿಯೇ ಬಳಸಿಕೊಳ್ಳುವುದು ಹಾಗೂ ಮುಂದಿನ ತಿಂಗಳಿಗೆ ವಿಸ್ತರಿಸಲು (carry over) ಅವಕಾಶವಿರುವುದಿಲ್ಲ. ಸಂಬಂಧಪಟ್ಟವರೆಲ್ಲರೂ ಮೇಲಿನ ಆದೇಶವನ್ನು ಮನದಟ್ಟು ಮಾಡಿಕೊಂಡು ಅದರಂತೆ ಕ್ರಮ ಕೈಗೊಳ್ಳತಕ್ಕದ್ದು ಅಂತ ತಿಳಿಸಲಾಗಿದೆ.
Menstrual leave for women employees of transport department too: KSRTC official order













Follow Me