ಶಿವಮೊಗ್ಗ: ಮಾನವನ ಜೀವನದಲ್ಲಿ ಬಾಲ್ಯ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಪ್ರತಿ ಮಗುವಿಗೆ ಉತ್ತಮ ಶಿಕ್ಷಣ, ರಕ್ಷಣೆ ಮತ್ತು ಅವರ ಹಕ್ಕುಗಳನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್. ವಿ ಹೇಳಿದರು.
ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾರ್ಮಿಕ ಯೋಜನಾ ಸೊಸೈಟಿ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಜಿ.ಪಂ. ಸಭಾಂಗಣದಲ್ಲಿ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಕಲಂ ಹಾಗೂ 17ರಡಿ ನೇಮಕಗೊಂಡ ಅಧಿಕಾರಿಗಳಿಗೆ ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಕುರಿತು ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನು ಮಿಸ್ ಮಾಡದೇ ಓದಿ: ಸುಗಮ ಪ್ರಯಾಣಕ್ಕೆ ನೂತನ ಆಟೋ ರಿಕ್ಷಾ ಪ್ರೀ-ಪೈಯ್ಡ್ ಕೌಂಟರ್ ಆರಂಭ : ಶಿವಮೊಗ್ಗ ಡಿಸಿ
ಬಾಲ್ಯ ನಮ್ಮ ಜೀವನದ ಅತ್ಯಂತ ಸುಂದರ ಭಾಗವಾಗಬೇಕು. ಆಗ ಮುಂದಿನ ಜೀವನ ಹಸನಾಗುತ್ತದೆ. ಉತ್ತಮ ಶಿಕ್ಷಣ ಮತ್ತು ವಾತಾವರಣದೊಂದಿಗೆ ಮಗುವಿನ ವ್ಯಕ್ತತ್ವ ವಿಕಸನವಾಗುತ್ತದೆ. ಪ್ರತಿ ಮಗುವಿಗೆ ಉತ್ತಮ ವಾತಾವರಣ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿ ಎಂದರು.

ಅಪಯಕಾರಿ ಉದ್ದಿಮೆಗಳಾದ ಪಟಾಕಿ ಕಾರ್ಖಾನೆ, ಚಿಮಣಿಗಳು, ಗಣಿಗಾರಿಕೆ, ಇಟ್ಟಿಗೆ, ಅವಲಕ್ಕಿ, ಮಂಡಕ್ಕಿ ಬಟ್ಟಿಗಳು ಇನ್ನಿತರೆಡೆ ಮಕ್ಕಳನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳುವುದನ್ನು ನಿಷೇಧಿಸಿದ್ದರೂ, ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಇಂತಹ ಕಡೆಗಳಿಂದ ಮಕ್ಕಳನ್ನು ರಕ್ಷಿಸಿ ಪ್ರಕರಣ ದಾಖಲಿಸಿ ಕ್ರಮ ವಹಿಸಲಾಗುತ್ತಿದ್ದು ಪುನರ್ವಸತಿ ಕಲ್ಪಿಸುವುದು ಅತಿ ಮುಖ್ಯವಾಗಿದೆ.
ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹದಂತಹ ಪ್ರಕರಣಗಳು ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಮಟ್ಟದ ಅರಿವು ಮೂಡಿಸಬೇಕು. ಸಂಬAಧಿಸಿದ ಅಧಿಕಾರಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ಕಾರ್ಯೋನ್ಮುಖರಾಗಬೇಕು ಎಂದರು.
ಜಿ.ಪಂ. ಉಪ ಕಾರ್ಯದರ್ಶಿ (ಆಡಳಿತ) ಸುಜಾತ ಕೆ ಆರ್ ಮಾತನಾಡಿ, ಮಾನವನ ಜೀವನದಲ್ಲಿ ಬಾಲ್ಯ ಮುಖ್ಯ ಭಾಗವಾಗಿದ್ದು ಇದು ಸುಂದರವಾಗಿರಬೇಕು. ಈ ಹಂತದಲ್ಲಿ ವಂಚನೆಗೊಳಗಾದರೆ ಇದು ಜೀವನವಿಡೀ ಕೆಟ್ಟ ಪರಿಣಾಮ ಬೀರುತ್ತದೆ. ಆರ್ಥಿಕವಾಗಿ ಹಿಂದುಳಿದ ಕಾರಣಕ್ಕೆ ಅನಿವಾರ್ಯವಾಗಿ ಬಾಲಕಾರ್ಮಿಕರಾಗಿ ದುಡಿಯುವ ಸಂದರ್ಭ ಬಂದರೆ ಕೆಲವೊಮ್ಮ ದುಶ್ಚಟಗಳಿಗೆ ಈಡಾದ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುವುದನ್ನು ಕಾಣಬಹುದು. ಬಾಲ ಕಾರ್ಮಿಕತೆಯನ್ನು ತಡೆಗಟ್ಟಲು ಸರ್ಕಾರ 14 ವರ್ಷದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಗೊಳಿಸಿದ್ದು, ಶಾಲೆ ಬಿಟ್ಟ ಮಕ್ಕಳ ಕಡೆ ಹೆಚ್ಚಿನ ಗಮನ ಹರಿಸಿ ಶಾಲೆಗೆ ಕರೆ ತರಬೇಕು ಎಂದ ಅವರು ಬಾಲಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಲು ನಾವೆಲ್ಲ ಒಟ್ಟಾಗಿ ಶ್ರಮಿಸೋಣ ಎಂದು ಕರೆ ನೀಡಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಮೇಶ್ ಕುಮಾರ್ ಮಾತನಾಡಿ, ಬಾಲ ಕಾರ್ಮಿಕ ಪದ್ದತಿ ಕುರಿತಾದ ಅರಿವು ಮತ್ತು ಜಾಗೃತಿಯಿಂದಾಗಿ ಮೊದಲಿಗೆ ಹೋಲಿಸಿದರೆ ಈಗ ಬಾಲ ಕಾರ್ಮಿಕತೆ ಕಡಿಮೆ ಆಗಿದೆ. ಯಾವುದೇ ಬಾಲಕಾರ್ಮಿಕ ಪ್ರಕರಣ ಕಂಡು ಬಂದಲ್ಲಿ ಪೊಲೀಸ್, ಕಾರ್ಮಿಕ, ಕಂದಾಯ, ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ, ನಗರಾಭಿವೃದ್ದಿ, ಇತರೆ ದೂರು ಸಲ್ಲಿಸಬಹುದಾದ ಇಲಾಖೆಗಳಿಗೆ ದೂರು ನೀಡಿದಲ್ಲಿ ಕ್ಷಿಪ್ರವಾಗಿ ಕ್ರಮ ವಹಿಸಲಾಗುತ್ತದೆ. ಮಕ್ಕಳ ರಕ್ಷಣೆ ವೇಳೆ ಒಂದು ಪಕ್ಷ ಇತರೆ ಇಲಾಖೆಯಲ್ಲಿ ವಾಹನ ಲಭ್ಯವಿಲ್ಲದಿದ್ದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಿದರೆ ನೀಡಲಾಗುವುದು ಎಂದ ಅವರು ಈ ಪಿಡುಗನ್ನು ನಿರ್ಮೂಲನೆ ಮಾಡಲು ಎಲ್ಲಾ ಇಲಾಖೆಯವರು ಕೈಜೋಡಿಸಬೇಕು ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ತಾಜುದ್ದೀನ್ ಖಾನ್ ಮಾತನಾಡಿ, ಪ್ರತಿ ಮಗುವಿನ ಕಳೆದುಹೋದ ಬಾಲ್ಯವನ್ನು ಯಾರೂ ಕೊಡಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಮಗುವೂ ಉತ್ತಮ ಬಾಲ್ಯ ಜೀವನವನ್ನು ಹೊಂದಬೇಕು. ಬಾಲ ಕಾರ್ಮಿಕ ಪದ್ದತಿ ಪಿಡುಗನ್ನು ಹೋಗಲಾಡಿಸಲು ಎಲ್ಲರೂ ಶ್ರಮಿಸಬೇಕು. ಶಿಕ್ಷಣ ವಂಚಿತ ಮತ್ತು ದುಡಿಮೆಯಲ್ಲಿ ತೊಡಗಿರುವ ಮಕ್ಕಳನ್ನು ರಕ್ಷಿಸುವ ಜೊತೆಗೆ ಅವರಿಗೆ ಪುನರ್ವಸತಿ ಕಲ್ಪಿಸಿ ಮುಖ್ಯವಾಹಿನಿಗೆ ತರುವುದು ಕೂಡ ಬಹಳ ಮುಖ್ಯ.
ಬಾಲ್ಯ ವಿವಾಹ, ಪೋಕ್ಸೋ ತಡೆಯಲು ಮಿಷನ್ ಸುರಕ್ಷಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ಬಾಲ ಕಾರ್ಮಿಕ, ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗು ನಾಶವಾಗಬೇಕಾದಲ್ಲಿ ಹೆಚ್ಚಿನ ಅರಿವು-ಜಾಗೃತಿ ಮೂಡಿಸಬೇಕು. ಮಕ್ಕಳು ಶಾಲೆ ಬಿಡದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಬಾಲ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಮಾತನಾಡಿ ಬಾಲ ಕಾರ್ಮಿಕತೆ ಒಂದು ವೇದನೆಯ ವಿಷಯವಾಗಿದೆ. ಜಿಲ್ಲೆಯಲ್ಲಿ 2023-24 ರಲ್ಲಿ 1606 ತಪಾಸಣೆ ಕೈಗೊಂಡು 14 ಪ್ರಕರಣ ದಾಖಲಿಸಲಾಗಿದೆ. 2024-25 ರಲ್ಲಿ 1956 ತಪಾಸಣೆ ನಡೆಸಿ 10 ಪ್ರಕರಣ ಹಾಗೂ 2025-26 ರಲ್ಲಿ ಈವರೆಗೆ 1364 ತಪಾಸಣೆ ಕೈಗೊಂಡು 07 ಪ್ರಕರಣ ದಾಖಲಿಸಲಾಗಿದೆ.
ಉಚಿತ ಮತ್ತು ಕಡ್ಡಾಯ ಶಿಕ್ಷಣ ಪ್ರತಿ ಮಗುವಿನ ಹಕ್ಕಾಗಿದ್ದು ಅದನ್ನು ಪ್ರತಿ ಮಗುವಿಗೆ ದೊರಕಿಸುವುದು ಪ್ರತಿ ನಾಗರೀಕರ ಕರ್ತವ್ಯವಾಗಿದ್ದು ನಾವೆಲ್ಲರೂ ಬಾಲ ಕಾರ್ಮಿಕತೆಯನ್ನು ತಡೆಯುವಲ್ಲಿ ಭಾಗಿಯಾಗೋಣ ಎಂದರು.
ಬಚ್ಪನ್ ಬಚಾವ್ ಆಂದೋಲನದ ರಾಜ್ಯ ಸಂಯೋಜಕರಾದ ಬಿನು ವರ್ಗೀಸ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿ, 14 ವರ್ಷದೊಳಗಿನ ಮಕ್ಕಳು ಯಾವುದೇ ಉದ್ಯೋಗ ಅಥವಾ ಪ್ರಕ್ರಿಯೆಗಳಲ್ಲಿ ಹಾಘೂ 18 ವರ್ಷ ವಯಸ್ಸಿನವರೆಗಿನ ಕಿಶೋರರು ಅಪಾಯಕಾರಿ ಉದ್ದಿಮೆಗಳನ್ನು ಕೆಲಸ ಮಾಡುವುದು ಕಂಡು ಬಂದಲ್ಲಿ ತಕ್ಷಣವೇ ಇಲಾಖೆಗಳು/ಅಧಿಕಾರಿಗಳಿಗೆ ಸಂಪರ್ಕಿಸಿ ದೂರು ನೀಡಬಹುದು. ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರಂತೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ಮಾಲೀಕರಿಗೆ 6 ತಿಂಗಳಿAದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 20 ರಿಂದ 50 ಸಾವಿರದವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಪುನರಾವರ್ತಿತ ಅಪರಾಧಕ್ಕೆ ರೂ10 ಸಾವಿರ ದಂಡವನ್ನು ವಿಧಿಸಬಹುದು ಎಂದು ಕಾಯ್ದೆಯ ಕುರಿತಾದ ವಿವರಗಳನ್ನು ನೀಡುವುದರೊಂದಿಗೆ ತಾವು ಮಕ್ಕಳನ್ನು ರಕ್ಷಿಸುವ ವೇಳೆ ಕಂಡು ಬಂದ ಮಕ್ಕಳ ಸ್ಥಿತಿಯ ಕುರಿತು ಅನುಭವವನ್ನು ಹಂಚಿಕೊAಡು, ಮಕ್ಕಳ ರಕ್ಷಣೆಯಲ್ಲಿ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘುನಾಥ ಎ ಎಸ್, ವಿವಿಧ ಇಲಾಖೆಗಳ ಅಧಿಕಾರಿ, ನೌಕರರು ಪಾಲ್ಗೊಂಡಿದ್ದರು.













Follow Me