ಬೆಂಗಳೂರು: 2026ನೇ ವರ್ಷದ ಮೊದಲ ರಕ್ತ ಚಂದ್ರಗ್ರಹಣ (Blood Moon) ಮಾರ್ಚ್ 3ರಂದು ಸಂಭವಿಸುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಮುಖ ದೇವಸ್ಥಾನಗಳ ಪೂಜೆ ಮತ್ತು ದರ್ಶನದ ಸಮಯದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಹೋಳಿ ಹುಣ್ಣಿಮೆಯ ದಿನವೇ ಈ ಗ್ರಹಣ ಸಂಭವಿಸುತ್ತಿರುವುದರಿಂದ ಧಾರ್ಮಿಕವಾಗಿ ಹೆಚ್ಚಿನ ಮಹತ್ವ ಪಡೆದಿದ್ದು, ಜ್ಯೋತಿಷಿಗಳ ಎಚ್ಚರಿಕೆಯ ಬೆನ್ನಲ್ಲೇ ನಗರದ ಗವಿಗಂಗಾಧರೇಶ್ವರ, ಕಾಡು ಮಲ್ಲೇಶ್ವರ ಹಾಗೂ ಬನಶಂಕರಿ ಅಮ್ಮನವರ ದೇವಸ್ಥಾನಗಳಲ್ಲಿ ಗ್ರಹಣ ಕಾಲದ ವಿಶೇಷ ನಿಯಮಗಳನ್ನು ಜಾರಿಗೆ ತರಲಾಗಿದೆ.
ಗ್ರಹಣದ ಪ್ರಭಾವ: ಸಿಂಹ ರಾಶಿಯವರಿಗೆ ಎಚ್ಚರಿಕೆ
ಈ ಬಾರಿಯ ಚಂದ್ರಗ್ರಹಣವನ್ನು ‘ಬ್ಲಡ್ ಮೂನ್’ ಎಂದು ಕರೆಯಲಾಗುತ್ತಿದ್ದು, ಇದು ಪ್ರಕೃತಿಯ ಮೇಲೆ ಜಲಕಂಟಕ ಮತ್ತು ಅಗ್ನಿ ಕಂಟಕದಂತಹ ಪರಿಣಾಮಗಳನ್ನು ಬೀರಬಹುದು ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದಾರೆ. ವಿಶೇಷವಾಗಿ ಸಿಂಹ ರಾಶಿಯವರಿಗೆ ಈ ಗ್ರಹಣವು ಹೆಚ್ಚಿನ ದೋಷವನ್ನು ತಂದೊಡ್ಡುವ ಸಾಧ್ಯತೆ ಇರುವುದರಿಂದ, ಅಂದು ವಿಶೇಷ ಶಾಂತಿ ಪೂಜೆಗಳನ್ನು ಮಾಡಿಸಿಕೊಳ್ಳಲು ಸೂಚಿಸಲಾಗಿದೆ.
- ಗವಿಗಂಗಾಧರೇಶ್ವರ ದೇವಸ್ಥಾನ: ಗರ್ಭಗುಡಿ ಬಂಧನ
ಬೆಂಗಳೂರಿನ ಐತಿಹಾಸಿಕ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಗ್ರಹಣದ ಹಿನ್ನೆಲೆ ವಿಶೇಷ ಪೂಜೆಗಳು ನಡೆಯಲಿವೆ. ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಅವರ ಪ್ರಕಾರ:
ಬೆಳಗ್ಗೆ 6:00: ಸ್ವಾಮಿಗೆ ವಿಶೇಷ ಜಲಾಭಿಷೇಕ ಆರಂಭ.
ಬೆಳಗ್ಗೆ 9:00: ದರ್ಬೆಯ ಮೂಲಕ ಗರ್ಭಗುಡಿಯನ್ನು ಶಾಸ್ತ್ರೋಕ್ತವಾಗಿ ಬಂಧಿಸಿ, ದೇವಸ್ಥಾನವನ್ನು ಮುಚ್ಚಲಾಗುತ್ತದೆ.
ಸಂಜೆ 7:30: ಗ್ರಹಣ ಮೋಕ್ಷ ಕಾಲದ ನಂತರ ದೇವಸ್ಥಾನದ ಬಾಗಿಲು ತೆರೆದು ಜಲಾಭಿಷೇಕ ನೆರವೇರಿಸಲಾಗುವುದು.
ಬುಧವಾರ ಬೆಳಗ್ಗೆ: ದೇವಸ್ಥಾನದ ಸಂಪೂರ್ಣ ಶುದ್ಧೀಕರಣ ಕಾರ್ಯ ನಡೆಯಲಿದೆ

- ಕಾಡು ಮಲ್ಲಿಕಾರ್ಜುನ ದೇವಸ್ಥಾನ: ನವಗ್ರಹ ಶಾಂತಿ ಹೋಮ
ಮಲ್ಲೇಶ್ವರದ ಪ್ರಸಿದ್ಧ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನದ ಸಮಯದಲ್ಲಿ ಈ ಕೆಳಗಿನಂತೆ ಬದಲಾವಣೆ ಇರಲಿದೆ:
ಮಧ್ಯಾಹ್ನ 12:00 ರವರೆಗೆ: ಭಕ್ತರಿಗೆ ದರ್ಶನಕ್ಕೆ ಅವಕಾಶ. ನಂತರ ದರ್ಬೆ ಹಾಕಿ ಬಾಗಿಲು ಮುಚ್ಚಲಾಗುತ್ತದೆ.
ಸಂಜೆ 7:00: ದೇವಸ್ಥಾನದ ಶುದ್ಧೀಕರಣದ ನಂತರ ಬಾಗಿಲು ಓಪನ್.
ರಾತ್ರಿ 9:30 ರವರೆಗೆ: ಚಂದ್ರನಿಗೆ ಮತ್ತು ಶಿವನಿಗೆ ಕ್ಷೀರಾಭಿಷೇಕ, ಪಂಚಾಮೃತ ನೈವೇದ್ಯ ಅರ್ಪಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ವಿಶೇಷ ಸೂಚನೆ: ಗ್ರಹಣದ ಮರುದಿನ ದೋಷ ನಿವಾರಣೆಗಾಗಿ ‘ನವಗ್ರಹ ಶಾಂತಿ ಹೋಮ’ ಹಮ್ಮಿಕೊಳ್ಳಲಾಗಿದೆ.
- ಬನಶಂಕರಿ ದೇವಸ್ಥಾನ: ಹುಣ್ಣಿಮೆ ಪೂಜೆಯಲ್ಲಿ ಬದಲಾವಣೆ
ಹೋಳಿ ಹುಣ್ಣಿಮೆ ಮತ್ತು ಗ್ರಹಣ ಎರಡೂ ಒಟ್ಟಿಗೆ ಬಂದಿರುವುದರಿಂದ ಬನಶಂಕರಿ ಅಮ್ಮನವರ ದೇವಸ್ಥಾನದಲ್ಲಿ ಪೂಜಾ ಕ್ರಮ ಹೀಗಿರಲಿದೆ:
ಬೆಳಗ್ಗೆ 5:00: ವಿಶೇಷ ಹುಣ್ಣಿಮೆ ಅಭಿಷೇಕ ಆರಂಭ.
ಬೆಳಗ್ಗೆ 8:30: ಮಹಾಮಂಗಳಾರತಿ ನೆರವೇರಿಕೆ.
ಮಧ್ಯಾಹ್ನ 12:30: ದೇವಸ್ಥಾನ ಬಂದ್ ಮಾಡಲಾಗುವುದು.
ಸಂಜೆ 7:00: ಗ್ರಹಣ ಮುಕ್ತಾಯದ ನಂತರ ವಿಶೇಷ ಅಭಿಷೇಕದೊಂದಿಗೆ ಪುನಃ ದರ್ಶನ ಆರಂಭ.
ಭಕ್ತರಿಗೆ ಸೂಚನೆಗಳು
ಗ್ರಹಣ ಕಾಲದಲ್ಲಿ ದೇವಸ್ಥಾನಗಳು ಮುಚ್ಚಿರುವುದರಿಂದ ಭಕ್ತರು ದರ್ಶನಕ್ಕಾಗಿ ಬರುವ ಮುನ್ನ ಸಮಯವನ್ನು ಗಮನಿಸುವುದು ಸೂಕ್ತ. ಗ್ರಹಣ ಮೋಕ್ಷದ ನಂತರ ಅಂದರೆ ಸಂಜೆ 7 ಗಂಟೆಯ ನಂತರವೇ ಬಹುತೇಕ ದೇವಸ್ಥಾನಗಳಲ್ಲಿ ದರ್ಶನ ಲಭ್ಯವಿರುತ್ತದೆ.
FAQ – ಪದೇ ಪದೇ ಕೇಳಲಾಗುವ ಪ್ರಶ್ನೆಗಳು
- 2026ರ ಮೊದಲ ಚಂದ್ರಗ್ರಹಣ ಯಾವಾಗ ಸಂಭವಿಸುತ್ತದೆ?
ಮಾರ್ಚ್ 3, 2026ರ ಮಂಗಳವಾರದಂದು ಈ ರಕ್ತ ಚಂದ್ರಗ್ರಹಣ ಸಂಭವಿಸಲಿದೆ. - ಬೆಂಗಳೂರಿನ ದೇವಸ್ಥಾನಗಳು ಯಾವ ಸಮಯದಲ್ಲಿ ತೆರೆದಿರುತ್ತವೆ?
ಹೆಚ್ಚಿನ ದೇವಸ್ಥಾನಗಳು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯೊಳಗೆ ಮುಚ್ಚಲ್ಪಡುತ್ತವೆ ಮತ್ತು ಸಂಜೆ 7 ಗಂಟೆಯ ನಂತರ ಮತ್ತೆ ತೆರೆಯುತ್ತವೆ. - ಯಾವ ರಾಶಿಯವರು ಗ್ರಹಣದ ಬಗ್ಗೆ ಎಚ್ಚರಿಕೆ ವಹಿಸಬೇಕು?
ಜ್ಯೋತಿಷಿಗಳ ಪ್ರಕಾರ, ಸಿಂಹ ರಾಶಿಯವರು ಈ ಗ್ರಹಣದಿಂದ ಹೆಚ್ಚಿನ ಎಫೆಕ್ಟ್ ಎದುರಿಸಲಿದ್ದಾರೆ.