Bidadi Township Project : ಬಿಡದಿ ಯೋಜನೆಯ ಮೂಲ ಪಿತಾಮಹ ಕುಮಾರಸ್ವಾಮಿ : ಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು

DK Shivakumar

ಬೆಂಗಳೂರು: ಬಿಡದಿ ಯೋಜನೆಯ ಮೂಲ ಪಿತಾಮಹ ಎಚ್.ಡಿ. ಕುಮಾರಸ್ವಾಮಿ ಅವರೇ ಆಗಿದ್ದು, ಈ ಸತ್ಯವನ್ನು ಅವರೂ ಒಪ್ಪಿಕೊಂಡಿದ್ದಾರೆ. ಆದರೆ ಈಗ ಬಿಡದಿಯ ಸೌಮ್ಯ ಸ್ವಭಾವದ ಮುಗ್ಧ ರೈತರನ್ನು ರಾಜಕೀಯ ಲಾಭಕ್ಕಾಗಿ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಶನಿವಾರ ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಬಿಡದಿ ಟೌನ್‌ಶಿಪ್ ವಿವಾದದ ಕುರಿತು ಅವರು ಸುದೀರ್ಘವಾಗಿ ಮಾತನಾಡಿದರು.

ಈ ಹಿಂದೆ ಕುಮಾರಸ್ವಾಮಿ ಅವರು ರೈತರಿಗೆ ಪರಿಹಾರವಾಗಿ ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ಕೇವಲ ಶೇ. 40 ರಷ್ಟು ಕೊಡುವುದಾಗಿ ಹೇಳಿದ್ದರು. ಆದರೆ ನಮ್ಮ ಸರ್ಕಾರ ರೈತರ ಹಿತದೃಷ್ಟಿಯಿಂದ ಶೇ. 50 ರಷ್ಟು ಭೂಮಿ ನೀಡಲು ಮುಂದಾಗಿದೆ. ಅಷ್ಟೇ ಅಲ್ಲದೆ, ರೈತರಿಗೆ ಪ್ರತಿ ಎಕರೆಗೆ 2.50 ಕೋಟಿ ರೂ. ಪರಿಹಾರ ವಿತರಿಸುವ ಕೆಲಸ ಶುಕ್ರವಾರದಿಂದಲೇ ಅಧಿಕೃತವಾಗಿ ಆರಂಭವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಈ ಯೋಜನೆ ಹೊಸದೇನಲ್ಲ ಎಂದ ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಅವರು ಆರಂಭದಲ್ಲಿ ನೋಟಿಫಿಕೇಷನ್ ಮಾಡಿದ್ದನ್ನು, ಬಳಿಕ ಬಂದ ಯಡಿಯೂರಪ್ಪ ಅವರು ಮುಂದುವರಿಸಿದ್ದರು. ನಾವು ಹಳೇ ಯೋಜನೆಯನ್ನೇ ಇನ್ನಷ್ಟು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆಯೇ ಹೊರತು ಹೊಸದಾಗಿ ನಾವೇನೂ ಮಾಡುತ್ತಿಲ್ಲ. ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಬೇಕಾದ ಒಟ್ಟು 9 ಸಾವಿರ ಎಕರೆಯಲ್ಲಿ, 1 ಸಾವಿರ ಎಕರೆ ಭೂಮಿಯನ್ನು ಬಿಜೆಪಿಯ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಅವಧಿಯಲ್ಲೇ ಸ್ವಾಧೀನಪಡಿಸಲಾಗಿತ್ತು ಎಂದು ಇತಿಹಾಸವನ್ನು ನೆನಪಿಸಿದರು.

ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾಗಿರುವ ಕುಮಾರಸ್ವಾಮಿ ಅವರೇ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಭೂಮಿ ಎಲ್ಲಿಂದ ತರಲಿ ಎನ್ನುತ್ತಾರೆ. ಮತ್ತೊಂದೆಡೆ ವಿರೋಧ ಪಕ್ಷಗಳು ರಾಜಕೀಯಕ್ಕಾಗಿ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿವೆ. ಕಾನೂನು ಮೀರಿ ಬಿಡದಿ ಜಮೀನನ್ನು ಡಿನೋಟಿಫಿಕೇಷನ್ ಮಾಡಿ ಜೈಲಿಗೆ ಹೋಗಲು ನಾನು ಸಿದ್ಧನಿಲ್ಲ ಎಂದು ಆಕ್ರೋಶ ಹೊರಹಾಕಿದರು. ಅಂದು ಬಿಡದಿ ಪ್ರದೇಶವನ್ನು ಕುಮಾರಸ್ವಾಮಿ ಅವರು ‘ರೆಡ್ ಜೋನ್’ ಎಂದು ಘೋಷಿಸಿದ್ದು ಏಕೆ ಮತ್ತು ಯಡಿಯೂರಪ್ಪ ಅವರ ಕಾಲದಲ್ಲೇ ಡಿನೋಟಿಫಿಕೇಷನ್ ಮಾಡಲು ಅವಕಾಶವಿದ್ದರೂ ಏಕೆ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.

ಈಗಾಗಲೇ ಶೇ. 80 ರಷ್ಟು ರೈತರು ಸ್ವಯಂಪ್ರೇರಿತರಾಗಿ ಭೂಮಿ ನೀಡಲು ಮುಂದೆ ಬಂದಿದ್ದಾರೆ. ಉಳಿದವರು ಬರದಿದ್ದರೆ ನಾವು ಕಾನೂನು ರೀತ್ಯ ಮುಂದುವರಿಯುತ್ತೇವೆ. ರಕ್ತಕ್ರಾಂತಿಯಾಗಲಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿ, ಅವರು ದೊಡ್ಡವರು ಮತ್ತು ಕೇಂದ್ರ ಸಚಿವರು. ಅವರಿಗೆ ಕೈಗಾರಿಕೆಗಳನ್ನು ತರುವ ಆಸೆಯಿರುವುದು ನಿಜ. ಆದರೆ ಆ ಕೈಗಾರಿಕೆಗಳನ್ನು ಎಲ್ಲಿ, ಹೇಗೆ ಮತ್ತು ಯಾರ ಜಮೀನಿನಲ್ಲಿ ತರಬೇಕು ಎಂಬುದಕ್ಕೆ ಅವರೇ ಉತ್ತರಿಸಬೇಕು ಎಂದು ಟಾಂಗ್ ನೀಡಿದರು.