ನವದೆಹಲಿ : ದೇಶದ ಆರ್ಥಿಕ ಪರಿಸ್ಥಿತಿ ಮತ್ತು ವಿದೇಶಿ ವಿನಿಮಯ ಮೀಸಲು ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಪ್ರಸ್ತುತ ಪಶ್ಚಿಮ ಏಷ್ಯಾ ಭಾಗದಲ್ಲಿ ಉಂಟಾಗಿರುವ ಯುದ್ಧದ ಭೀತಿ ಮತ್ತು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಉಳಿತಾಯ ಮತ್ತು ಚಿನ್ನದ ಮೇಲಿನ ಹೂಡಿಕೆ ತಗ್ಗಿಸುವ ಕುರಿತು ಕೇಳಿಬರುತ್ತಿರುವ ಹೇಳಿಕೆಗಳು ರಾಜಕೀಯ ಸ್ವರೂಪ ಪಡೆದುಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹಿತದೃಷ್ಟಿಯಿಂದ ಕೆಲವು ಶಿಸ್ತುಕ್ರಮಗಳನ್ನು ಸೂಚಿಸಿದ್ದಾರೆ ಎಂಬ ಚರ್ಚೆಯ ನಡುವೆಯೇ, ಈ ಹಿಂದೆ ಕಾಂಗ್ರೆಸ್ ಆಡಳಿತವಿದ್ದಾಗಲೂ ಇಂತಹದ್ದೇ ಸಂದೇಶ ನೀಡಲಾಗಿತ್ತು ಎಂಬ ವಾದಗಳು ಕೇಳಿಬರುತ್ತಿವೆ. ಈ ವಾದಕ್ಕೆ ಪುಷ್ಟಿ ನೀಡುವಂತೆ 1967ರ ಕಾಲದ ಪತ್ರಿಕೆಯೊಂದರ ಮುಖಪುಟದ ಚಿತ್ರವು ಇಂಟರ್ನೆಟ್‌ನಲ್ಲಿ ವೇಗವಾಗಿ ಹರಡುತ್ತಿದೆ.
ಇದನ್ನೂ ಓದಿ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯಕ್ಕೆ ನಾಲ್ಕು ದಿನ ಮಳೆಯ ಭೀತಿ
ಇದನ್ನೂ ಓದಿ : ಅಜಿತ್ ಪವಾರ್ ವಿಮಾನ ಅಪಘಾತಕ್ಕೀಡಾದ ಬಾರಾಮತಿಯಲ್ಲೇ ಮತ್ತೊಂದು ವಿಮಾನ ಪತನ
ವೈರಲ್ ಆಗಿರುವ ಈ ಚಿತ್ರದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದ ಜನರಿಗೆ ಚಿನ್ನ ಖರೀದಿಸದಂತೆ ಮನವಿ ಮಾಡಿದ್ದರು ಎಂಬ ಸುದ್ದಿ ಪ್ರಕಟವಾಗಿದೆ. Don’t buy gold, Indira tells people: appeals for ‘national discipline’ ಎಂಬ ಶೀರ್ಷಿಕೆಯೊಂದಿಗೆ ಈ ಲೇಖನವು ಕಾಣಿಸಿಕೊಂಡಿದೆ. ಕರ್ನಾಟಕದ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಮತ್ತು ಕಾರ್ಯಕರ್ತರು ಈ ಚಿತ್ರವನ್ನು ಹಂಚಿಕೊಂಡು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆರ್ಥಿಕ ಸಂಕಷ್ಟ ಎದುರಾದಾಗ ಕಾಂಗ್ರೆಸ್ ಕೂಡ ಜನರಿಗೆ ಇಂತಹದ್ದೇ ನಿರ್ಬಂಧ ವಿಧಿಸಿತ್ತು ಎನ್ನುವುದು ಇವರ ವಾದದ ಸಾರಾಂಶವಾಗಿದೆ.
ಆದರೆ ಈ ವಿಷಯದ ಆಳಕ್ಕೆ ಇಳಿದು ಫ್ಯಾಕ್ಟ್ ಚೆಕ್ ನಡೆಸಿದಾಗ ಲಭ್ಯವಾಗಿರುವ ಮಾಹಿತಿ ಸಂಪೂರ್ಣವಾಗಿ ಭಿನ್ನವಾಗಿದೆ. ವೈರಲ್ ಆಗಿರುವ ಚಿತ್ರವು ಅಸಲಿ ಅಲ್ಲ ಬದಲಾಗಿ ಅದು ಡಿಜಿಟಲ್ ತಂತ್ರಜ್ಞಾನದ ಮೂಲಕ ಎಡಿಟ್ ಮಾಡಲಾದ ನಕಲಿ ಚಿತ್ರ ಎನ್ನುವುದು ದೃಢಪಟ್ಟಿದೆ. ಈ ಪತ್ರಿಕಾ ವರದಿಯಲ್ಲಿ ಉಲ್ಲೇಖಿಸಲಾಗಿರುವ ದಿನಾಂಕ 1967ರ ಜೂನ್ 6 ಆಗಿದೆ. ದಿ ಹಿಂದೂ ಪತ್ರಿಕೆಯ ಲೋಗೋ ಹೊಂದಿರುವ ಈ ಪುಟವು ನೋಡುವುದಕ್ಕೆ ಹಳೆಯ ಪತ್ರಿಕೆಯಂತೆಯೇ ಕಂಡರೂ, ಅದರಲ್ಲಿರುವ ಅಕ್ಷರಗಳ ವಿನ್ಯಾಸ ಮತ್ತು ಶೀರ್ಷಿಕೆಯ ರಚನೆಯಲ್ಲಿ ಕೆಲವು ಸಂಶಯಾಸ್ಪದ ಅಂಶಗಳು ಗೋಚರಿಸುತ್ತವೆ.
ದಿ ಹಿಂದೂ ಪತ್ರಿಕೆಯ ಅಧಿಕೃತ ಸ್ಪಷ್ಟನೆ
ಈ ವಿವಾದವು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ದಿ ಹಿಂದೂ ಪತ್ರಿಕಾ ಸಂಸ್ಥೆಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಸ್ಪಷ್ಟನೆ ನೀಡಿದೆ. ವೈರಲ್ ಆಗುತ್ತಿರುವ 1967ರ ಜೂನ್ 6ರ ಮುಖಪುಟವು ತನ್ನ ಸಂಸ್ಥೆಗೆ ಸೇರಿದ್ದಲ್ಲ ಮತ್ತು ಅದು ಅಸಲಿ ವರದಿಯಲ್ಲ ಎಂದು ಪತ್ರಿಕೆ ಸ್ಪಷ್ಟಪಡಿಸಿದೆ. ಈ ಚಿತ್ರವನ್ನು ಡಿಜಿಟಲ್ ಸಾಫ್ಟ್‌ವೇರ್ ಬಳಸಿ ಸೃಷ್ಟಿಸಲಾಗಿದೆ ಎಂದು ತಿಳಿಸಿರುವ ಪತ್ರಿಕೆಯು, ಓದುಗರು ಇಂತಹ ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದೆ.
ಐತಿಹಾಸಿಕ ದಾಖಲೆಗಳನ್ನು ಗಮನಿಸಿದರೆ 1967ರ ಆ ಅವಧಿಯಲ್ಲಿ ಭಾರತವು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದುದ್ದು ನಿಜ. ರೂಪಾಯಿ ಅಪಮೌಲ್ಯೀಕರಣ ಮತ್ತು ಆಹಾರ ಧಾನ್ಯಗಳ ಕೊರತೆಯ ಅತಂತ್ರ ಸ್ಥಿತಿ ಇತ್ತು. ಆದರೆ ಆ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ವೈರಲ್ ಚಿತ್ರದಲ್ಲಿ ಹೇಳಲಾಗಿರುವಂತೆ ನೇರವಾಗಿ ಚಿನ್ನ ಖರೀದಿಸಬೇಡಿ ಎಂದು ಸಾರ್ವಜನಿಕವಾಗಿ ಆಜ್ಞೆ ಹೊರಡಿಸಿದ ಅಥವಾ ಮನವಿ ಮಾಡಿದ ಯಾವುದೇ ದಾಖಲೆಗಳು ಲಭ್ಯವಿಲ್ಲ. ಪತ್ರಿಕೆಗಳ ಹಳೆಯ ಆವೃತ್ತಿಗಳನ್ನು (Archived issues) ತಪಾಸಣೆ ಮಾಡಿದಾಗಲೂ ಅಂತಹ ಯಾವುದೇ ಶೀರ್ಷಿಕೆ 1967ರ ಜೂನ್ 6ರ ಪತ್ರಿಕೆಯಲ್ಲಿ ಕಂಡುಬಂದಿಲ್ಲ.