ಹಾವೇರಿ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಶುರುವಾಗಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪ್ರಸಕ್ತ ವರ್ಷದ ಆರಂಭದ ಮೂರು ತಿಂಗಳಲ್ಲಿ ಜಿಲ್ಲೆಯಾದ್ಯಂತ ಒಟ್ಟು ಆರು ಡೆಂಗಿ ಹಾಗೂ ಮೂರು ಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ದೃಢಪಡಿಸಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಂತರ್ ಇಲಾಖೆಗಳ ಸಮನ್ವಯ ಸಮಿತಿ ಸಭೆಯಲ್ಲಿ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದ್ದು ಸೊಳ್ಳೆಗಳ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ ಜಗದೀಶ ಪಾಟೀಲ ಅವರು ಸಭೆಯಲ್ಲಿ ಅಂಕಿ ಅಂಶಗಳನ್ನು ಮಂಡಿಸುತ್ತಾ ಡೆಂಗಿ ಹರಡುವಲ್ಲಿ ಈಡೀಸ್ ಈಜಿಪ್ತಿ ಸೊಳ್ಳೆಗಳ ಪಾತ್ರದ ಬಗ್ಗೆ ವಿವರಿಸಿದರು. ಈ ಸೊಳ್ಳೆಗಳು ಮುಖ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ ಮತ್ತು ಇವುಗಳು ಮನೆಯ ಒಳಗೆ ಹಾಗೂ ಸುತ್ತಮುತ್ತ ಸಂಗ್ರಹಿಸಿಟ್ಟಿರುವ ಸ್ವಚ್ಛ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ಸಾರ್ವಜನಿಕರು ತಮ್ಮ ಮನೆಗಳಲ್ಲಿ ನೀರು ಸಂಗ್ರಹಿಸುವ ಡ್ರಮ್ಮುಗಳು ಬ್ಯಾರಲ್‌ಗಳು ಸಿಮೆಂಟ್ ತೊಟ್ಟಿಗಳು ಮತ್ತು ಮನೆಯ ತಾರಸಿಯ ಮೇಲಿರುವ ಟೈಯರ್ ಹಾಗೂ ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದರು. ಜಿಲ್ಲಾಡಳಿತವು ಈಗಾಗಲೇ ಕೆರೆ ಮತ್ತು ಹಳ್ಳಗಳಲ್ಲಿ ಸೊಳ್ಳೆಗಳ ಲಾರ್ವಾ ನಾಶಪಡಿಸಲು ಗಪ್ಪಿ ಹಾಗೂ ಗಂಬೂಸಿಯಾ ಮೀನುಗಳನ್ನು ಬಿಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಮಾತನಾಡಿ ಡೆಂಗಿ ನಿಯಂತ್ರಣವು ಕೇವಲ ಆರೋಗ್ಯ ಇಲಾಖೆಯ ಜವಾಬ್ದಾರಿಯಲ್ಲ ಬದಲಾಗಿ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು. ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯ ವಸ್ತುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಹಾಗೂ ಗಟಾರಗಳಲ್ಲಿ ನೀರು ಹರಿಯಲು ಅಡೆತಡೆಗಳಿದ್ದರೆ ತಕ್ಷಣವೇ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು. ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮಾಲೀಕರಿಗೆ ಅಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಎಚ್ಚರಿಕೆ ನೀಡುವಂತೆ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದನ್ನೂ ಓದಿ : ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಮುಂದುವರಿಕೆ ಆಭರಣ ಪ್ರಿಯರಿಗೆ ನಿರಾಳ ತಂದ ಮಾರುಕಟ್ಟೆ ದರ
ಜಿಲ್ಲಾ ಆರೋಗ್ಯ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ತಾಕೀತು ಮಾಡಿದರು. ಗರ್ಭಿಣಿಯರು ಮತ್ತು ಬಾಣಂತಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಹಾಗೂ ಅವರ ಮಾಹಿತಿಯನ್ನು ವಿಳಂಬ ಮಾಡದೆ ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕು ಎಂದು ಆದೇಶಿಸಿದರು. ತೀವ್ರ ಆರೋಗ್ಯ ಸಮಸ್ಯೆ ಇರುವ ಗರ್ಭಿಣಿಯರನ್ನು ಒಳರೋಗಿ ವಿಭಾಗಕ್ಕೆ ದಾಖಲಿಸಿಕೊಂಡು ಅವರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಅಧಿಕಾರಿಗಳು ತಮ್ಮ ಹಂತದಲ್ಲೇ ಬಗೆಹರಿಸಿಕೊಳ್ಳಬೇಕು. ಪ್ರತಿಯೊಂದು ಕೆಲಸಕ್ಕೂ ಕಾರಣಗಳನ್ನು ಹೇಳುವುದನ್ನು ಬಿಟ್ಟು ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಕುಟುಂಬ ಕಲ್ಯಾಣ ಯೋಜನೆಯಡಿ ಪುರುಷರು ಹಾಗೂ ಮಹಿಳೆಯರ ಶಸ್ತ್ರಚಿಕಿತ್ಸೆಯಲ್ಲಿ ಶೇ ನೂರರಷ್ಟು ಸಾಧನೆ ಮಾಡಲು ವಿಶೇಷ ಶಿಬಿರಗಳನ್ನು ಆಯೋಜಿಸಬೇಕು ಎಂದು ಸೂಚಿಸಿದರು. ಗ್ರಾಮೀಣ ಭಾಗದಲ್ಲಿ ಹಾವಿನ ಕಡಿತ ಮತ್ತು ನಾಯಿ ಕಡಿತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು ಇಂತಹ ಸಂದರ್ಭದಲ್ಲಿ ವಿಳಂಬ ಮಾಡದೆ ಆಸ್ಪತ್ರೆಗಳಿಗೆ ಬರುವಂತೆ ಆಶಾ ಕಾರ್ಯಕರ್ತೆಯರು ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ ಜಯಾನಂದ ಅವರು ಜಿಲ್ಲೆಯಲ್ಲಿ ಶೇ ಎಪ್ಪತ್ತೈದರಷ್ಟು ಹೆರಿಗೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿವೆ ಎಂಬ ಮಾಹಿತಿ ನೀಡಿದರು. ಇದು ಸರ್ಕಾರಿ ವ್ಯವಸ್ಥೆಯ ಮೇಲಿರುವ ಜನರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು. ಜಿಲ್ಲಾಡಳಿತವು ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೂಲಕ ಸಮುದಾಯದಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಯೋಜನೆ ರೂಪಿಸಿದೆ. ಬಸ್ ಡಿಪೋಗಳಲ್ಲಿ ಸಂಗ್ರಹವಾಗಿರುವ ಹಳೆಯ ಟಯರ್‌ಗಳು ಮತ್ತು ಕೃಷಿ ಹೊಂಡಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಸಾರಿಗೆ ಹಾಗೂ ಕೃಷಿ ಇಲಾಖೆಯು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಜಿಲ್ಲೆಯನ್ನು ಡೆಂಗಿ ಮುಕ್ತ ಮಾಡಲು ಪ್ರತಿಯೊಬ್ಬ ನಾಗರಿಕನು ತನ್ನ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.