ಶಿವಮೊಗ್ಗದಲ್ಲಿ ಬಿಜೆಪಿ ಯುವ ಮೋರ್ಚಾ ಆಕ್ರೋಶ : ಮಲ್ಲಿಕಾರ್ಜುನ ಖರ್ಗೆ ಪ್ರತಿಕೃತಿ ದಹನ

ಶಿವಮೊಗ್ಗದ ಗೋಪಿ ವೃತ್ತದಲ್ಲಿ ಕಿಕ್ಕಿರಿದು ಸೇರಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಪ್ರತಿಕೃತಿ ದಹಿಸುತ್ತಿರುವ ದೃಶ್ಯ.

ಶಿವಮೊಗ್ಗ : ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ನೀಡಿದ್ದಾರೆ ಎನ್ನಲಾದ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ, ಶಿವಮೊಗ್ಗದ ಜಿಲ್ಲಾ ಬಿಜೆಪಿ ಯುವ ಮೋರ್ಚಾ (BJP Yuva Morcha) ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಗೋಪಿ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು, ಕಾಂಗ್ರೆಸ್‌ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಖರ್ಗೆ ಅವರ ಪ್ರತಿಕೃತಿಯನ್ನು ದಹಿಸುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದರು.

ತಮಿಳುನಾಡು ರಾಜ್ಯದ ಚುನಾವಣೆ ಪ್ರಚಾರದ (Election Campaign) ಭಾಷಣದ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಟೀಕಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹೇಳಿಕೆಯು ದೇಶಾದ್ಯಂತ ಸಂಚಲನ ಮೂಡಿಸಿದ್ದು, ಶಿವಮೊಗ್ಗದಲ್ಲಿಯೂ ಇದರ ಪ್ರತಿಧ್ವನಿ ಜೋರಾಗಿ ಕೇಳಿಸಿತು. ಗೋಪಿ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು, ಪ್ರಧಾನಿ ಮೋದಿ ಅವರ ವಿರುದ್ಧದ ಇಂತಹ ಮಾತುಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು. ಕಾಂಗ್ರೆಸ್‌ ಪಕ್ಷವು ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ದೇಶದ ಪ್ರಧಾನಿಯನ್ನು ಅವಮಾನಿಸುತ್ತಿದೆ ಎಂದು ಕಾರ್ಯಕರ್ತರು ದೂರಿದರು.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನೂ ಓದಿ : ಶಿವಮೊಗ್ಗದಲ್ಲಿ ಪದವಿ ವಿದ್ಯಾರ್ಥಿನಿಗೆ ಕಿರುಕುಳ : ಪ್ರೀತಿ ಹೆಸರಲ್ಲಿ ಕಿರಾತಕನ ಅಟ್ಟಹಾಸ

ಇದನ್ನೂ ಓದಿ : 10ನೇ ತರಗತಿ ಫಲಿತಾಂಶ ಪ್ರಕಟ ಮುಂದೇನು.? ಮುಂದಿನ ಕೋರ್ಸ್ ಆಯ್ಕೆ ಹೇಗಿರಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್‌.ಎನ್.ಚನ್ನಬಸಪ್ಪ (MLA S.N. Channabasappa) ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ನರೇಂದ್ರ ಮೋದಿ ಅವರು ಕೃಷ್ಣನ ಅವತಾರವಿದ್ದಂತೆ, ಅವರು ದೇಶದಲ್ಲಿರುವ ಭಯೋತ್ಪಾದಕರ ಸಂಹಾರಕ್ಕಾಗಿ ಬಂದಿದ್ದಾರೆ ಎಂದು ಬಣ್ಣಿಸಿದರು. ಭಯೋತ್ಪಾದಕರಿಂದ ಹತರಾದವರು ಮತ್ತು ಅವರಿಗೆ ಕುಮ್ಮಕ್ಕು ನೀಡಿ ಬೆಳೆಸಿದ ಇತಿಹಾಸ ಇರುವುದು ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಯೋತ್ಪಾದಕರ ಬಗ್ಗು ಬಡಿದರು. ಭಾರತದ ಮೇಲೆ ಕೆಣ್ಣು ಹಾಕುವವರಿಗೆ ತಕ್ಕ ಪಾಠ ಕಲಿಸಿದ ಮೋದಿ ಅವರು, ಉಗ್ರರೆಲ್ಲ ಗಂಟು ಮೂಟೆ ಸಹಿತ ಪಾಕಿಸ್ತಾನಕ್ಕೆ ಓಡಿ ಹೋಗುವಂತೆ ಮಾಡಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್‌ನವರಿಗೆ ಮೋದಿ ಅವರು ಭಯೋತ್ಪಾದಕರಂತೆ ಕಾಣುತ್ತಿದ್ದಾರೆ ಎಂದು ಚನ್ನಬಸಪ್ಪ ತೀವ್ರವಾಗಿ ಟೀಕಿಸಿದರು.

ಕಾಂಗ್ರೆಸ್‌ ಪಕ್ಷವು ಓಲೈಕೆ ರಾಜಕಾರಣಕ್ಕಾಗಿ ಭಯೋತ್ಪಾದಕರನ್ನು (Terrorists) ಕ್ಷಮಿಸಬಹುದು, ಆದರೆ ಈ ದೇಶದ ಜನತೆ ಅಂತಹವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಕಾಶ್ಮೀರದ ಪೆಹಲ್ಗಾಮ್‌ ದಾಳಿಯ ಬಳಿಕ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಭಯೋತ್ಪಾದಕರ ಅಡಗು ತಾಣಗಳ ಮೇಲೆ ನಿರ್ದಾಕ್ಷಿಣ್ಯವಾಗಿ ದಾಳಿ ನಡೆಸಿತು. ಆಪರೇಷನ್ ಮೂಲಕ ಉಗ್ರರ ಜಾಲವನ್ನು ಧ್ವಂಸಗೊಳಿಸಿದ ಕೀರ್ತಿ ಪ್ರಧಾನಿಯವರಿಗೆ ಸಲ್ಲುತ್ತದೆ. ನರೇಂದ್ರ ಮೋದಿ ಅವರು ಉಗ್ರರ ಸಂಹಾರಕ್ಕೆ ಬಂದಿರುವ ಕೃಷ್ಣನ ಅಪರಾವತಾರಿ ಎಂದು ಶಾಸಕರು ಶ್ಲಾಘಿಸಿದರು. ದೇಶದ ರಕ್ಷಣೆ ಮತ್ತು ಏಕತೆಯ ವಿಚಾರದಲ್ಲಿ ಬಿಜೆಪಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ಪ್ರತಿಭಟನಾ ಸಭೆಯಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್‌ ಕುಕ್ಕೆ (Prashanth Kukke), ಮುಖಂಡರಾದ ಜ್ಯೋತಿಪ್ರಕಾಶ್‌, ಮಾಲತೇಶ್‌, ಮೋಹನ್‌ ರೆಡ್ಡಿ, ಜ್ಞಾನೇಶ್ವರ್‌, ಸುರೇಖಾ ಮುರಳೀಧರ್‌, ರಶ್ಮೀ ಶ್ರೀನಿವಾಸ್‌ ಸೇರಿದಂತೆ ಹಿರಿಯ ಮತ್ತು ಕಿರಿಯ ಪದಾಧಿಕಾರಿಗಳು ಭಾಗವಹಿಸಿದ್ದರು. ಗೋಪಿ ವೃತ್ತದಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಪೊಲೀಸರು ಬಂದೋಬಸ್ತ್‌ ಏರ್ಪಡಿಸಿದ್ದರು. ಸಾರ್ವಜನಿಕರು ಕೂಡ ಈ ಪ್ರತಿಭಟನೆಯನ್ನು ಕುತೂಹಲದಿಂದ ವೀಕ್ಷಿಸಿದರು. ಒಟ್ಟಾರೆ ಶಿವಮೊಗ್ಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ವಾಕ್ಸಮರ ಮತ್ತೊಂದು ಹಂತಕ್ಕೆ ತಲುಪಿದ್ದು, ರಾಜಕೀಯ ವಲಯದಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಸುದ್ದಿ ವಿಭಾಗ : ಕನ್ನಡ ನಾಡು ಡಿಜಿಟಲ್‌ ಡೆಸ್ಕ್