ಬೆಂಗಳೂರು: ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲಿ ಹೊಸ ಮನ್ವಂತರ ಬರೆಯಲು ಸರ್ಕಾರ ಸಜ್ಜಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2026-27ನೇ ಸಾಲಿನ ಆಯವ್ಯಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಅತ್ಯಂತ ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ ನಿರುದ್ಯೋಗಿ ಯುವಕರಿಗೆ ಸಿಹಿ ಸುದ್ದಿ ನೀಡಿರುವ ಸಿಎಂ, 15,000 ಬೋಧಕ ಹುದ್ದೆಗಳ ಭರ್ತಿಗೆ ಹಸಿರು ನಿಶಾನೆ ತೋರಿಸಿದ್ದಾರೆ.
ಶಾಲೆಗಳ ಉನ್ನತೀಕರಣ ಮತ್ತು ‘ಕರ್ನಾಟಕ ಪಬ್ಲಿಕ್ ಸ್ಕೂಲ್’
ʻಉತ್ತಮ ಕಲಿಕೆ ಉಜ್ವಲ ಭವಿಷ್ಯʼ ಎಂಬ ಧ್ಯೇಯವಾಕ್ಯದೊಂದಿಗೆ ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ನಿರ್ಧರಿಸಿದೆ. ಇದರ ಅಂಗವಾಗಿ ADB, KKRDB ಹಾಗೂ KMERC ನೆರವಿನೊಂದಿಗೆ ಒಟ್ಟು 800 ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಶಾಲೆ’ (KPS) ಗಳನ್ನಾಗಿ ಉನ್ನತೀಕರಿಸಲಾಗುವುದು. ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಮುಂದಿನ ಮೂರು ವರ್ಷಗಳಲ್ಲಿ 3,900 ಕೋಟಿ ರೂ. ವೆಚ್ಚ ಮಾಡುವ ಗುರಿ ಹೊಂದಲಾಗಿದೆ. ಇದಲ್ಲದೆ, 184 ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಹಾಗೂ 50 ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
15,000 ಶಿಕ್ಷಕರ ನೇಮಕಾತಿ ಮತ್ತು ವರ್ಗಾವಣೆ ಆದ್ಯತೆ
ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ಕೊರತೆ ನೀಗಿಸಲು 2026-27ನೇ ಸಾಲಿನಲ್ಲಿ 15,000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಘೋಷಿಸಲಾಗಿದೆ. ವಿಶೇಷವೆಂದರೆ, ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿನ (KPS) ಹುದ್ದೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಇದರಿಂದ ಗ್ರಾಮೀಣ ಭಾಗದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಲಿದೆ.
ವಿದ್ಯಾರ್ಥಿಗಳಿಗೆ ಉಚಿತ ಸವಲತ್ತುಗಳು ಮತ್ತು DBT
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ 2025-26ರಿಂದಲೇ ಸವಲತ್ತುಗಳನ್ನು ನೇರ ನಗದು ವರ್ಗಾವಣೆ (DBT) ಮೂಲಕ ನೀಡಲಾಗುತ್ತಿದೆ. 2026-27ನೇ ಸಾಲಿನಿಂದ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಚಟುವಟಿಕೆ ಪುಸ್ತಕಗಳು, 1 ರಿಂದ 10ನೇ ತರಗತಿಯವರೆಗೆ ಮೌಲ್ಯ ಶಿಕ್ಷಣ ಪುಸ್ತಕಗಳು ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಗುವುದು.