ಕಿರುತೆರೆಯಲ್ಲಿ ಒಟ್ಟಿಗೆ ನಟಿಸುತ್ತಾ, ದಿನಗಟ್ಟಲೆ ಒಂದೇ ಸೆಟ್ನಲ್ಲಿ ಸಮಯ ಕಳೆಯುವ ಕಲಾವಿದರು ನಿಜ ಜೀವನದಲ್ಲೂ ಪ್ರೀತಿಯ ಬಲೆಗೆ ಬೀಳುವುದು, ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡುವುದು ಸಿನಿಮಾ ಹಾಗೂ ಟಿವಿ ರಂಗದಲ್ಲಿ ತೀರಾ ಸಾಮಾನ್ಯ. ಈಗ ಈ ಪ್ರೇಮಿಗಳ ಸಾಲಿಗೆ ಕನ್ನಡ ಕಿರುತೆರೆಯ ಮತ್ತೊಂದು ಜನಪ್ರಿಯ ಜೋಡಿ ಹೊಸದಾಗಿ ಸೇರ್ಪಡೆಯಾಗಿದೆ. ಹೌದು, ಕನ್ನಡಿಗರ ನೆಚ್ಚಿನ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಪ್ರತಿಭಾವಂತ ಕಲಾವಿದರಾದ ರಾಣವ್ ಗೌಡ ಮತ್ತು ರಾಧಾ ಭಗವತಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ಜೋಡಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿಗಳಲ್ಲಿ ಒಂದಾದ ‘ಅಮೃತಧಾರೆ’ಯಲ್ಲಿ ಜೈದೇವ್ (ಜೆಡಿ) ಪಾತ್ರದ ಮೂಲಕ ಮನೆಮಾತಾಗಿರುವ ನಟ ರಾಣವ್ ಗೌಡ ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿಯಲ್ಲಿ ನಾಯಕಿಯಾಗಿ (ಭಾರ್ಗವಿ ಪಾತ್ರ) ಮಿಂಚುತ್ತಿರುವ ನಟಿ ರಾಧಾ ಭಗವತಿ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥದ ಸುದ್ದಿ ಕೇಳಿ ಕಿರುತೆರೆ ವೀಕ್ಷಕರು ಹಾಗೂ ಅಭಿಮಾನಿಗಳು ಅಚ್ಚರಿ ಹಾಗೂ ಸಂತಸ ಎರಡನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಶುರುವಾಗಿದ್ದು ಎಲ್ಲಿ ಈ ಲವ್ ಸ್ಟೋರಿ?
ಸದ್ಯ ಇಬ್ಬರೂ ಬೇರೆ ಬೇರೆ ವಾಹಿನಿಗಳಲ್ಲಿ, ಭಿನ್ನ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರಲ್ಲ, ಇವರ ಪ್ರೇಮಾಂಕುರವಾಗಿದ್ದು ಎಲ್ಲಿ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಈ ಪ್ರಶ್ನೆಗೆ ಉತ್ತರ ‘ಅಮೃತಧಾರೆ’ ಧಾರಾವಾಹಿ!
ಹೌದು, ರಾಧಾ ಭಗವತಿ ಅವರು ಪ್ರಸ್ತುತ ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುವ ಮುನ್ನ, ಇದೇ ‘ಅಮೃತಧಾರೆ’ ಧಾರಾವಾಹಿಯಲ್ಲಿ ಮಲ್ಲಿ ಎಂಬ ವಿಲನ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿದ್ದರು. ಕಥೆಯ ಪ್ರಕಾರ ಮಲ್ಲಿ, ಜೆಡಿಯ ಪತ್ನಿ. ತೆರೆಮೇಲೆ ಗಂಡ-ಹೆಂಡತಿಯಾಗಿ ನಟಿಸುವಾಗಲೇ ಇವರಿಬ್ಬರ ನಡುವೆ ಸ್ನೇಹ ಮೂಡಿ, ಆ ಸ್ನೇಹ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ರಾಧಾ ಭಗವತಿ ಅವರಿಗೆ ಭಾರ್ಗವಿ ಪಾತ್ರದ ಅವಕಾಶ ಸಿಕ್ಕ ಬಳಿಕ ಅವರು ಅಮೃತಧಾರೆ ಧಾರಾವಾಹಿಯಿಂದ ಹೊರ ನಡೆದರು. ಆದರೆ, ಜೆಡಿ-ಮಲ್ಲಿಯ ನಡುವಿನ ಪ್ರೀತಿ ಮಾತ್ರ ಹಾಗೇ ಮುಂದುವರಿದು ಇದೀಗ ಹಸೆಮಣೆ ಏರುವ ಹಂತಕ್ಕೆ ಬಂದು ನಿಂತಿದೆ.
ಮದುವೆಯೋ? ನಿಶ್ಚಿತಾರ್ಥವೋ? ಫೋಟೋ ಹಿಂದಿನ ಅಸಲಿಯತ್ತು
ರಾಣವ್ ಗೌಡ ಅವರು ತಮ್ಮ ಸೋಶಿಯಲ್ ಮೀಡಿಯಾ (ಇನ್ಸ್ಟಾಗ್ರಾಮ್) ಖಾತೆಯಲ್ಲಿ ಇಬ್ಬರೂ ಕೊರಳಿಗೆ ಹೂವಿನ ಹಾರ ಹಾಕಿಕೊಂಡು ಜೊತೆಯಾಗಿ ನಿಂತಿರುವ ಸುಂದರವಾದ ಫೋಟೋವೊಂದನ್ನು ಹಂಚಿಕೊಂಡಿದ್ದರು. ಜೊತೆಗೆ ಆ ಫೋಟೋಗೆ ಕೇವಲ ‘ಫೈನಲಿ (Finally)’ ಎಂಬ ಒಂದೇ ಒಂದು ಪದದ ಕ್ಯಾಪ್ಶನ್ ನೀಡಿದ್ದರು. ಹಾರ ಹಾಕಿಕೊಂಡಿರುವ ಫೋಟೋ ನೋಡಿದ ಅಭಿಮಾನಿಗಳಿಗೆ, ಈ ಜೋಡಿ ದಿಢೀರನೆ ಗುಟ್ಟಾಗಿ ಮದುವೆಯಾಗಿ ಬಿಟ್ಟರಾ? ಎಂಬ ಪ್ರಶ್ನೆ ಮೂಡಿತ್ತು. ಆದರೆ, ಮೂಲಗಳ ಪ್ರಕಾರ ಸದ್ಯ ಇವರಿಬ್ಬರ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ (Engagement) ಮಾತ್ರ ನೆರವೇರಿದ್ದು, ಶೀಘ್ರದಲ್ಲೇ ವಿವಾಹದ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.
ಕಿರುತೆರೆಯಲ್ಲಿ ಇಬ್ಬರೂ ಫುಲ್ ಬ್ಯುಸಿ
ವೃತ್ತಿಜೀವನದತ್ತ ಗಮನ ಹರಿಸುವುದಾದರೆ, ಇಬ್ಬರೂ ಕಲಾವಿದರು ಪ್ರಸ್ತುತ ಕಿರುತೆರೆಯಲ್ಲಿ ಬಹುಬೇಡಿಕೆಯಲ್ಲಿದ್ದಾರೆ. ರಾಣವ್ ಗೌಡ ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಜೆಡಿ ಪಾತ್ರದ ಜೊತೆಗೆ, ಜೀ ಪವರ್ನಲ್ಲಿ ಪ್ರಸಾರವಾಗುತ್ತಿರುವ ‘ಶುಭಸ್ಯ ಶೀಘ್ರಂ’ ಧಾರಾವಾಹಿಯಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತ, ರಾಧಾ ಭಗವತಿ ಅವರು ‘ಭಾರ್ಗವಿ ಎಲ್ಎಲ್ಬಿ’ ಮೂಲಕ ವಕೀಲೆಯಾಗಿ, ದಿಟ್ಟ ಮಹಿಳೆಯಾಗಿ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಿದ್ದಾರೆ.
ತೆರೆಮೇಲೆ ವಿಲನ್ ಜೋಡಿಯಾಗಿ ಕಾಣಿಸಿಕೊಂಡರೂ, ನಿಜ ಜೀವನದಲ್ಲಿ ಹೀರೊ-ಹೀರೊಯಿನ್ ಆಗಿ ಒಂದಾಗುತ್ತಿರುವ ಈ ಸುಂದರ ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಸಹಕಲಾವಿದರು, ಕಿರುತೆರೆ ನಿರ್ದೇಶಕರು ಹಾಗೂ ಅಸಂಖ್ಯಾತ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ