ಯಲಹಂಕ : ನೆಲಮಂಗಲ-ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಅನಧಿಕೃತ ಹಂಪ್ಸ್ ನಿಂದಾಗಿ ಬೈಕ್ ಸವಾರ ಪ್ರಾಣ ಕಳೆದುಕೊಂಡಿರುವ ಘಟನೆ ಯಲಹಂಕದಲ್ಲಿ ಸಂಭವಿಸಿದೆ.
ಯಲಹಂಕ ತಾಲೂಕು ಕಾಕೋಳು ಬಳಿಯ ನೆಲಮಂಗಲ-ದೇವನಹಳ್ಳಿ ವಿಮಾನ ನಿಲ್ದಾಣದ ರಸ್ತೆಯಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ರಸ್ತೆ ಅಪಘಾತದಲ್ಲಿ ರಾಮಕೃಷ್ಣಯ್ಯ (59) ಸಾವನ್ನಪ್ಪಿದ್ದಾರೆ, ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆ ಸಂಬಂಧ ದೂರು ನೀಡಲಾಗಿದೆ.
ಮೃತ ರಾಮಕೃಷ್ಣಯ್ಯ ಯಲಹಂಕ ತಾಲೂಕಿನ ಹನಿಯೂರು ಗ್ರಾಮದ ನಿವಾಸಿ, ಖಾಸಗಿ ಕಾಲೇಜ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು, ಇಂದು ಕೆಲಸ ಮುಗಿದ ನಂತರ ಬೈಕ್ ನಲ್ಲಿ ಊರಿಗೆ ವಾಪಸ್ ಬರುತ್ತಿದ್ದರು, ಈ ವೇಳೆ ಬುಡುಮನಹಳ್ಳಿಯ ಬಳಿ ಹಾಕಲಾಗಿದ್ದ ಅನಧಿಕೃತ ಹಂಪ್ಸ್ ದಾಟುವಾಗ ನಿಯಂತ್ರಣ ತಪ್ಪಿದ ಅವರು ಕೆಳಗೆ ಬಿದ್ದಿದ್ದಾರೆ, ತೀರ್ವವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನಲೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಮೃತ ರಾಮಕೃಷ್ಣಯ್ಯನವರ ಮಗ ಸುದರ್ಶನ್ , ರಸ್ತೆಗೆ ಹಾಕಲಾಗಿರುವ ಅನಧಿಕೃತ ಹಂಪ್ಸ್ ನನ್ನ ತಂದೆಯ ಸಾವಿಗೆ ಕಾರಣ, ನಾಲ್ಕು ದಿನಗಳ ಹಿಂದೆಯಷ್ಟೇ ಅನಧಿಕೃತವಾಗಿ ರಸ್ತೆಯಲ್ಲಿ ಹಂಪ್ಸ್ ಹಾಕಲಾಗಿದೆ, ಘಟನಾ ಸ್ಥಳದಲ್ಲಿನ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಹಂಪ್ಸ್ ನಿರ್ಮಾಣ ಮಾಡಿದ್ದು, ಹಂಪ್ಸ್ ಹಾಕಿರುವ ಬಗ್ಗೆ ಸೂಚನ ಫಲಕವಾಗಲಿ, ಹಂಪ್ಸ್ ಮೇಲೆ ಬಿಳಿ ಪಟ್ಟಿ ಹಾಕಿಲ್ಲ.
ಹಂಪ್ಸ್ ಬಗ್ಗೆ ಯಾವುದೇ ಸುಳಿವು ಇಲ್ಲದೆ ಹಿನ್ನಲೆ ಹಂಪ್ಸ್ ದಾಟುವಾಗ ನನ್ನ ತಂದೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ, ನನ್ನ ತಂದೆಯ ಸಾವಿಗೆ ಅನಧಿಕೃತವಾಗಿ ಹಂಪ್ಸ್ ಹಾಕಿರುವ ವ್ಯಕ್ತಿಗಳೇ ಕಾರಣರಾಗಿದ್ದ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.