ಬೆಂಗಳೂರು: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಯುವಜನರ ಅಹವಾಲುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉದ್ಯೋಗಾಕಾಂಕ್ಷಿಗಳ ಆತಂಕ ಮತ್ತು ನಿರಾಶೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದು ಹೇಳಿರುವ ಸಿಎಂ, ರಾಜ್ಯದ ಯುವಜನರ ಹಿತರಕ್ಷಣೆಗಾಗಿ ಸರ್ಕಾರ ತೆಗೆದುಕೊಂಡಿರುವ ಮಹತ್ವದ ನಿರ್ಧಾರಗಳನ್ನು ಘೋಷಿಸಿದ್ದಾರೆ.
ವಯೋಮಿತಿ 5 ವರ್ಷ ಸಡಿಲಿಕೆ : ಕಳೆದ ಕೆಲವು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಉಂಟಾದ ವಿಳಂಬದಿಂದಾಗಿ ಅನೇಕ ಅರ್ಹ ಅಭ್ಯರ್ಥಿಗಳು ವಯೋಮಿತಿ ಮೀರುವ ಭೀತಿಯಲ್ಲಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಮುಂಬರುವ ನೇಮಕಾತಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷಗಳವರೆಗೆ ಸಡಿಲಿಸಿದೆ. ಈ ನಿರ್ಧಾರವು ಸಾವಿರಾರು ಅಭ್ಯರ್ಥಿಗಳಿಗೆ ಮತ್ತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಿದೆ.
ಹಿಂದಿನ ಸರ್ಕಾರದ ಲೋಪಗಳೇ ಇಂದಿನ ಸಮಸ್ಯೆಗೆ ಕಾರಣ : “ನಾವು ಅಧಿಕಾರಕ್ಕೆ ಬಂದಾಗ 2.64 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದವು. ಇದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮಗಳು, ಭ್ರಷ್ಟಾಚಾರ ಮತ್ತು ನೇಮಕಾತಿ ಯೋಜನೆಯ ಕೊರತೆಯಿಂದ ಸೃಷ್ಟಿಯಾದ ದುಸ್ಥಿತಿ,” ಎಂದು ಸಿಎಂ ಟೀಕಿಸಿದ್ದಾರೆ. ವಿರೋಧ ಪಕ್ಷದ ನಾಯಕರು ವಿದ್ಯಾರ್ಥಿಗಳನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದು ಅವರು ಕಿಡಿಕಾರಿದ್ದಾರೆ.

ಪಾರದರ್ಶಕ ನೇಮಕಾತಿಗೆ ಬದ್ಧತೆ : ಕಳೆದ ಎರಡೂವರೆ ವರ್ಷಗಳಲ್ಲಿ ಈಗಾಗಲೇ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು ಮಾಡಲಾಗಿದೆ ಎಂದು ತಿಳಿಸಿದ ಸಿಎಂ, ಉಳಿದ ಖಾಲಿ ಹುದ್ದೆಗಳನ್ನು ಪಾರದರ್ಶಕ ಮತ್ತು ಕಾಲಮಿತಿಯೊಳಗೆ ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಒಳ ಮೀಸಲಾತಿ ಕುರಿತಾದ ಕಾನೂನು ಅಡೆತಡೆಗಳಿದ್ದರೂ, ಸಂವಿಧಾನದ ಚೌಕಟ್ಟಿನೊಳಗೆ ಯುವಜನರ ಭವಿಷ್ಯಕ್ಕೆ ಧಕ್ಕೆ ಬಾರದಂತೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Dharwad job seekers protest: Age limit relaxed by 5 years, CM Siddaramaiah promises massive recruitment soon