ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಸಿಹಿ ಸುದ್ದಿ ನೀಡಿದೆ. ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪರೀಕ್ಷಾ ದಿನಗಳಂದು ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಘೋಷಿಸಲಾಗಿದೆ.
ಪರೀಕ್ಷಾ ವೇಳಾಪಟ್ಟಿ ಮತ್ತು ಉಚಿತ ಪ್ರಯಾಣ : 2026ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ನಡೆಯಲಿವೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಮತ್ತು ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗಲು ಕೆಎಸ್ಆರ್ಟಿಸಿ ಬಸ್ಸುಗಳನ್ನು ಉಚಿತವಾಗಿ ಬಳಸಿಕೊಳ್ಳಬಹುದು.
ಉಚಿತ ಪ್ರಯಾಣದ ನಿಯಮಗಳೇನು :
ದಾಖಲೆ: ವಿದ್ಯಾರ್ಥಿಗಳು ಪ್ರಯಾಣಿಸುವಾಗ ತಮ್ಮ ಪರೀಕ್ಷಾ ಪ್ರವೇಶ ಪತ್ರವನ್ನು (Hall Ticket) ಕಡ್ಡಾಯವಾಗಿ ನಿರ್ವಾಹಕರಿಗೆ ತೋರಿಸಬೇಕು.
ಬಸ್ಸುಗಳ ವಿಧ: ಈ ಸೌಲಭ್ಯವು ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ (Express) ಬಸ್ಸುಗಳಲ್ಲಿ ಮಾತ್ರ ಲಭ್ಯವಿರುತ್ತದೆ.
ಅವಧಿ : ಪರೀಕ್ಷೆ ನಡೆಯುವ ದಿನಗಳಂದು ಮಾತ್ರ ಈ ಸೌಲಭ್ಯ ಅನ್ವಯವಾಗಲಿದೆ.
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಸಕಾಲದಲ್ಲಿ ತಲುಪಲು ಮತ್ತು ಸಂಚಾರದ ಹೊರೆ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷಾರ್ಥಿಗಳು ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಛೇರಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.