ದಾವಣಗೆರೆ : ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಇ-ಪೌತಿ ಖಾತೆ ಅಭಿಯಾನ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಫೆಬ್ರವರಿ 6 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯಲ್ಲಿ 91505 ಆಸ್ತಿಗಳು ಮೃತರ ಹೆಸರಿನಲ್ಲಿದ್ದು ಇದನ್ನು ಇ-ಪೌತಿ ಖಾತೆ ಅಭಿಯಾನದ ಮೂಲಕ ಖಾತೆ ಮಾಡಲು ಅಭಿಯಾನ ಪ್ರಾರಂಭಿಸಲಾಗಿದೆ. ಆದರೆ ದಾವಣಗೆರೆ ತಾಲೂಕಿನ ಪ್ರಗತಿ ಕಡಿಮೆ ಇದೆ, ಆದರೆ ಬೇರೆ ತಾಲ್ಲೂಕಿನವರು ಮಾಡಲು ಸಾಧ್ಯವಾಗಿದ್ದರೆ ಇಲ್ಲಿನ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಕೆಲಸದ ವಿಳಂಬಕ್ಕೆ ನೀಡಿದ ಸಬೂಬುಗಳನ್ನು ಸಚಿವರು ಸಾರಾಸಗಟಾಗಿ ತಿರಸ್ಕರಿಸಿದರು.
ಇದನ್ನು ಮಿಸ್ ಮಾಡದೇ ಓದಿ : ನಮೀಬಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ‘ಎ’ ತಂಡಕ್ಕೆ 130 ರನ್‌ಗಳ ಜಯ
ನೀಡಲಾದ ಗುರಿ ಮತ್ತು ಸಾಧನೆಯಲ್ಲಿ ಭಾರಿ ವ್ಯತ್ಯಾಸವಿದೆ. ಇ-ಪೌತಿ ಅಭಿಯಾನದಲ್ಲಿ ತಾಲೂಕಿನಲ್ಲಿ ಸುಮಾರು 20636 ಅರ್ಜಿಗಳು ಬಾಕಿ ಇದ್ದು, ಈವರೆಗೆ ಕೇವಲ 728 ಅರ್ಜಿಗಳನ್ನು ಭೂಮಿ ಸಾಪ್ಟ್ವೇರ್ಗೆ ಬರುವಂತೆ ಮಾಡಲಾಗಿದೆ. ಈ ಕಳಪೆ ಸಾಧನೆಯ ಬಗ್ಗೆ ತಹಶೀಲ್ದಾರ್ ಮತ್ತು ಸಿಬ್ಬಂದಿಯನ್ನು ಸಚಿವರು ಪ್ರಶ್ನಿಸಿ, ಮಹಿಳೆಯರ ಆಧಾರ್ ಕಾರ್ಡ್ ಲಿಂಕ್ ಆಗದಿರುವುದು ಅಥವಾ ಒಟಿಪಿ ಸಮಸ್ಯೆಗಳನ್ನು ಮುಂದಿಟ್ಟು ಕೆಲಸ ವಿಳಂಬ ಮಾಡುತ್ತಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

“ಇದೇ ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಕೆಲಸವಾಗುತ್ತಿರುವಾಗ ದಾವಣಗೆರೆಯಲ್ಲಿ ಮಾತ್ರ ಏಕೆ ಸಾಧ್ಯವಾಗುತ್ತಿಲ್ಲ?” ಎಂದು ಪ್ರಶ್ನಿಸಿದರು. ಕೆಲವು ಗ್ರಾಮ ಆಡಳಿತ ಅಧಿಕಾರಿಗಳು ಅತ್ಯುತ್ತಮವಾಗಿ ಕೆಲಸ ಮಾಡಿ ಒಬ್ಬರೇ 125ಕ್ಕೂ ಹೆಚ್ಚು ಅರ್ಜಿ ವಿಲೇವಾರಿ ಮಾಡಿ ಸಾಧನೆ ಮಾಡಿದ್ದರೆ, ಶೇ. 50ರಷ್ಟು ಸಿಬ್ಬಂದಿ ಕನಿಷ್ಠ ಆಸಕ್ತಿ ತೋರದೆ ಇರುವುದು ಸಭೆಯಲ್ಲಿ ಚರ್ಚೆಯಾಯಿತು.
ಶಿಸ್ತು ಕ್ರಮದ ಎಚ್ಚರಿಕೆ : ಸರ್ಕಾರಿ ಕೆಲಸಗಳನ್ನು ಗಾಳಿಗೆ ತೂರಿ, ಜನ ಸಾಮಾನ್ಯರನ್ನು ಕಚೇರಿಗಳಿಗೆ ಅಲೆದಾಡಿಸುವ ಪ್ರವೃತ್ತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ದಕ್ಷತೆಯಿಂದ ಕೆಲಸ ಮಾಡುವ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರಿಗೆ ರಾಜ್ಯದಲ್ಲಿ ಪ್ರೋತ್ಸಾಹಧನ ನೀಡಲು ಮಾರ್ಚ್ನಲ್ಲಿ 7 ರಿಂದ 8 ಕೋಟಿ ರೂಪಾಯಿಗಳ ಪೆÇ್ರೀತ್ಸಾಹಧನವನ್ನು ಮಾರ್ಚ್ ಅಂತ್ಯದೊಳಗೆ ಅವರ ಪ್ರಗತಿಯನ್ನು ಆಧರಿಸಿ ನೀಡಲಾಗುತ್ತದೆ ಎಂದರು.
ಜಂಟಿ ಖಾತೆ ಮಾಡುವಾಗ ತಾಂತ್ರಿಕ ಸಮಸ್ಯೆಗಳಿದ್ದರೆ ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಪರಿಹರಿಸಿಕೊಳ್ಳಬೇಕು. ಮಾರ್ಚ್ ಅಂತ್ಯದೊಳಗೆ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಪಡಿಸಲು ಕಟ್ಟುನಿಟ್ಟಿನ ಗಡುವು ನೀಡಲಾಗಿದೆ. ಸಾರ್ವಜನಿಕರ ಕೆಲಸದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಭೆಯಲ್ಲಿ ನೇರ ಎಚ್ಚರಿಕೆ ನೀಡಿದರು.
ಮುಂದಿನ ದಿನಗಳಲ್ಲಿ ಆಧಾರ್ ಅನ್ವಯ ಇ-ಜನ್ಮ ಪೋರ್ಟಲ್ಗೆ ಲಿಂಕ್ ಮಾಡುವುದರಿಂದ ಮರಣ ಹೊಂದಿದವರ ಜಮೀನುಗಳ ವಿವರ ಭೂಮಿಯಲ್ಲಿ ಲಭ್ಯವಾಗುತ್ತದೆ. ಮೊದಲು ಮೇ ತಿಂಗಳಲ್ಲಿ ಜಮಾಬಂದಿ ಮಾಡಲಾಗುತ್ತಿತ್ತು, ಆದರೆ ಜಮಾಬಂದಿ ಮಾಡುವುದನ್ನು ಬಿಟ್ಟಿದ್ದರಿಂದ ಪೌತಿ ಖಾತೆಯು ಉಳಿದಿದೆ. ಮುಂದಿನ ದಿನಗಳಲ್ಲಿ ಜಮಾಬಂದಿ ಆರಂಭಿಸಲಾಗುತ್ತದೆ. ರಾಜ್ಯದಲ್ಲಿ ಸುಮಾರು 50 ಲಕ್ಷ ಪಹಣಿಗಳು ಮೃತರ ಹೆಸರಿಗೆ ಇರುವುದರಿಂದ ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯ ಲಾಭ, ನೀರಾವರಿ ಸಬ್ಸೀಡಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.
ಇ-ಕಚೇರಿ : ಕಂದಾಯ ಇಲಾಖೆಯಲ್ಲಿ ಎಲ್ಲಾ ಕಡೆ ಇ-ಕಚೇರಿ ಮೂಲಕವೇ ಕಡತ ನಿರ್ವಹಣೆ ಮಾಡಲಾಗುತ್ತಿದೆ. ಎಲ್ಲಾ ತಾಲ್ಲೂಕು ಕಚೇರಿ, ಎಸಿ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗಳು ಇ-ಕಚೇರಿ ಮೂಲಕ ಕಡತ ನಿರ್ವಹಣೆ, ಅರ್ಜಿ ವಿಲೇವಾರಿ ಮಾಡಲಾಗುತ್ತಿದೆ. ಜಿಲ್ಲೆಯ 3 ನಾಡ ಕಚೇರಿಗಳನ್ನು ಇ-ಕಚೇರಿ ಮಾಡಲಾಗಿದ್ದು ಇಲ್ಲಿ ಕೇಸ್ವಾನ್ ನೆಟ್ವರ್ಕ್ ನೀಡಲಾಗಿದೆ. ಉಳಿದ ನಾಡ ಕಚೇರಿಗಳಿಗೂ ಕೇಸ್ವಾನ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ಟಾಪ್ ನೀಡಿದ್ದು ಮುಂದಿನ ದಿನಗಳಲ್ಲಿ ಕಂದಾಯ ನಿರೀಕ್ಷಕರು ಸೇರಿದಂತೆ ಎಲ್ಲಾ ಹಂತದಲ್ಲಿ ಕಂಪ್ಯೂಟರ್ ಒದಗಿಸಲಾಗುತ್ತದೆ ಎಂದರು.
ಡಿಜಿಟಲ್ ದಾಖಲೆ : ಕಂದಾಯ ಇಲಾಖೆಯಿಂದ ಎಲ್ಲಾ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗುತ್ತಿದ್ದು ದಾಖಲೆ ಕೋರುವ ಸಾರ್ವಜನಿಕರಿಗೆ ಡಿಜಿಟಲ್ ದಾಖಲೆಗಳನ್ನು ನೀಡಲಾಗುತ್ತಿದೆ. ಸಾರ್ವಜನಿಕರು ಕಂದಾಯ ದಾಖಲೆಗಳಿಗಾಗಿ ತಾಲ್ಲೂಕು ಕಚೇರಿಗೆ ಬರುವಂತಿಲ್ಲ, ನೇರವಾಗಿ ಆನ್ಲೈನ್ ಮೂಲಕವೇ ತಮ್ಮ ಮನೆಯಲ್ಲಿ ಕುಳಿತು ಬೆರಳತುದಿಯಲ್ಲಿ ದಾಖಲೆಗಳನ್ನು ಪಡೆಯಬಹುದಾಗಿದೆ ಎಂದರು.
ಹಾವೇರಿಯಲ್ಲಿ ಹಕ್ಕುಪತ್ರ ವಿತರಣೆ : ಕಳೆದ ಎರಡೂವರೆ ವರ್ಷಗಳಲ್ಲಿ ಸುಮಾರು 2.20 ಲಕ್ಷ ಹಕ್ಕುಪತ್ರಗಳನ್ನು ಸಿದ್ದಪಡಿಸಲಾಗಿದ್ದು ಕಳೆದ ಮೇ 20 ರಂದು ಹೊಸಪೇಟೆಯಲ್ಲಿ ನಡೆದ ಸಮಾರಂಭದಲ್ಲಿ 1,11,000 ಹಕ್ಕುಪತ್ರಗಳನ್ನು ನೀಡಲಾಗಿತ್ತು. ಫೆಬ್ರವರಿ 14 ರಂದು ಸರ್ಕಾರದ 1000 ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಹಾವೇರಿಯಲ್ಲಿ ನಡೆಯುವ ಹಕ್ಕುಪತ್ರ ವಿತರಣೆ ಸಮಾರಂಭದಲ್ಲಿ 1.10 ಲಕ್ಷ ಜನರಿಗೆ ಹಕ್ಕಪತ್ರ ನೀಡಲಾಗುತ್ತದೆ. ದಾವಣಗೆರೆ ಜಿಲ್ಲೆಯಿಂದ ಬರುವ ಫಲಾನುಭವಿಗಳಿಗೆ ಆಸ್ತಿಯ ಪತ್ರವನ್ನು ನೊಂದಣಿ ಮಾಡಿಸಿ ಸಿದ್ದತೆ ಮಾಡಿಕೊಂಡು ಜನರನ್ನು ಕರೆದುಕೊಂಡು ಬಂದು ಕೊಡಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಸಭೆಯಲ್ಲಿ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿತ್ತೆ ಮಾಧವ ವಿಠ್ಠಲರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
1.10 lakh title deeds distributed on Feb. 14: Revenue Department service at doorstep