ಬೆಳಗಾವಿ ಹೆದ್ದಾರಿ ದರೋಡೆ ಪ್ರಕರಣ: ಸ್ನೇಹಿತರೇ ನೀಡಿದ್ದರು 3 ಲಕ್ಷ ರೂ ಸುಪಾರಿ, ಕಂಟ್ರಿ ಪಿಸ್ತೂಲ್ ಸಮೇತ 8 ಮಂದಿ ಬಂಧನ

High ranking law enforcement administration officers sitting at a regional media conference desk with seized physical components and documents displayed during daylight

ಬೆಳಗಾವಿ: ಗೋವಾಕ್ಕೆ ತೆರಳುತ್ತಿದ್ದ ಚಿನ್ನಾಭರಣ ತಯಾರಿಕಾ ಕಾರ್ಮಿಕರನ್ನು ಅಪಹರಿಸಿ ಪಿಸ್ತೂಲ್ ಹಾಗೂ ಚಾಕು ತೋರಿಸಿ ದರೋಡೆ ನಡೆಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಟು ಆರೋಪಿಗಳನ್ನು ಬಂಧಿಸಿ 40.50 ಲಕ್ಷ ಮೌಲ್ಯದ ನಗದು, ವಾಹನಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಬೆಳಗಾವಿಯ ಶಹಾಪೂರದಲ್ಲಿ ವಾಸವಾಗಿರುವ ಎಸ್.ಕೆ. ಇಬಾದುಲ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಇಬಾದುಲ್ ಅವರು ತಮ್ಮ ಸ್ನೇಹಿತರಾದ ರಬಿಯುಲ್ ಘಾಜಿ ಹಾಗೂ ಅಲಿ ಹುಸೇನ ಮಂಡಲ್ ಅವರೊಂದಿಗೆ ಕಾರಿನಲ್ಲಿ ಗೋವಾಕ್ಕೆ ತೆರಳುತ್ತಿದ್ದ ವೇಳೆ ಖಾನಾಪೂರ ತಾಲೂಕಿನ ಉಚವಡ ಗ್ರಾಮದ ಬೈಲೂರು ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 748ರಲ್ಲಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದರು.

ಬಳಿಕ ಮೂವರನ್ನು ರಸ್ತೆಯ ಪಕ್ಕದ ಜಮೀನಿಗೆ ಎಳೆದುಕೊಂಡು ಹೋಗಿ ಪಿಸ್ತೂಲ್ ಹಾಗೂ ಚಾಕು ತೋರಿಸಿ ಬೆದರಿಕೆ ಹಾಕಿ, ಇಬಾದುಲ್ ಅವರ ಬಳಿಯಿದ್ದ 1,00,200 ನಗದು ಹಣವನ್ನು ದೋಚಿದ್ದರು. ಅಲ್ಲದೆ ರಬಿಯುಲ್ ಘಾಜಿ ಅವರ ಬಳಿಯಿದ್ದ 225 ಗ್ರಾಂ ಚಿನ್ನವನ್ನೂ ಕಸಿದುಕೊಂಡು ಪರಾರಿಯಾಗಿದ್ದರು ಎಂದರು.
ಪ್ರಕರಣದ ತನಿಖೆ ವೇಳೆ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಪಿರ್ಯಾದಿದಾರನ ಸ್ನೇಹಿತರಾದ ರಬಿಯುಲ್ ಘಾಜಿ ಹಾಗೂ ಅಲಿ ಹುಸೇನ ಮಂಡಲ್ ಅವರೇ ದರೋಡೆ ಸಂಚು ರೂಪಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಇವರು ಶಹಾಪೂರದ ಸಾದೀಕ ತೋರಗಲ್ ಜೊತೆಗೆ ಸೇರಿ ದರೋಡೆಗೆ ಸಂಚು ರೂಪಿಸಿ, ವಿವೇಕ ಚಂದ್ರಕಾಂತ ಪಾಟೀಲ ಎಂಬಾತನಿಗೆ ₹
3 ಲಕ್ಷ ಸುಪಾರಿ ನೀಡಿದ್ದರೆಂದು ತಿಳಿಸಿದರು.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಸುಪಾರಿ ಪಡೆದ ವಿವೇಕ ಪಾಟೀಲ ತನ್ನ ನಾಲ್ವರು ಸಹಚರರೊಂದಿಗೆ ಸೇರಿ ದರೋಡೆ ಕೃತ್ಯ ಎಸಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ರಚಿಯುಲ್ ರೂಹುಲ್ ಅಮೀನ ಘಾಜಿ (29), ಅಲಿ ಹುಸೇನ ಕವಿರುದ್ದೀನ್ ಮಂಡಲ್ (27),ಸಾದೀಕ ಅಬ್ದುಲ್ ರೆಹಮಾನ್ ತೋರಗಲ್ (37), ವಿವೇಕ ಚಂದ್ರಕಾಂತ ಪಾಟೀಲ (33), ಪ್ರಶಾಂತ ಮಹಾದೇವ ಚವ್ಹಾಣ (37), ನಿತೀನ್ ರಾಜಾರಾಮ ಚವ್ಹಾಣ (36), ದಿಗಂಬರ ನಾಗೇಶ ಪಾಟೀಲ (26), ಮಯೂರ ರಾಜು ಘಾಡಿ (26) ಇವರೆಲ್ಲರೂ ಬೆಳಗಾವಿ ನಗರದ ವಿವಿಧ ಭಾಗಗ ನಿವಾಸಿಗಳಾಗಿದ್ದಾರೆ ಎಂದರು.

40.50 ಲಕ್ಷ ಮೌಲ್ಯದ ವಸ್ತುಗಳ ವಶ
ಬಂಧಿತರಿಂದ ಪೊಲೀಸರು ಸುಜುಕಿ ಬ್ರೆಝಾ ಕಾರು, ಎರ್ಟಿಗಾ ಕಾರು, ಮತ್ತೊಂದು ಕಾರು, 1,00,200 ನಗದು, ಕಂಟ್ರಿ ಪಿಸ್ತೂಲ್, ಚಾಕು, ಎಂಟು ಮೊಬೈಲ್ ಫೋನ್‌ಗಳು, ಒಂದು ಮೋಟಾರ್ ಸೈಕಲ್, 205 ಗ್ರಾಂ ತೂಕದ ನಕಲಿ ಚಿನ್ನದ ಬಿಸ್ಕೆಟ್ ಸೇರಿದಂತೆ ಒಟ್ಟು 40,50,200 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದರು.