Siddaramaiah | ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾಗಬೇಕು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದ ಆಡಳಿತ ಯಂತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಮಹಿಳಾ ನೌಕರರನ್ನು ಅಭಿನಂದಿಸಿ, ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆಯಾಗಿ ಘೋಷಣೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದರು.

ಅವರು ಇಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ ಬೆಂಗಳೂರು, ವತಿಯಿಂದ ಮಹಿಳಾ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಇದನ್ನು ಮಿಸ್‌ ಮಾಡದೇ ಓದಿ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ‘ಸಾಂದೀಪನಿ ಶಿಷ್ಯವೇತನ’ ಯೋಜನೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ

ಮಹಿಳಾ ನೌಕರರಿಗೆ ಋತುಚಕ್ರ ರಜೆಯನ್ನು ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆಯನ್ನು ಮಂಜೂರು ಮಾಡಲು ಸರ್ಕಾರ ನಿರ್ಧರಿಸಿದೆ. ಸಂಘದ ಕಚೇರಿಯ ಕಾರ್ಯಚಟುವಟಿಕೆಗಳಿಗೆ ಬಾಲಭವನದಲ್ಲಿ ಸ್ಥಳಾವಕಾಶ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರೊಂದಿಗೆ ಚರ್ಚಿಸಲಾಗಿದೆ. ಸೆಪ್ಟೆಂಬರ್ 13 ರಂದು ಮಹಿಳಾ ನೌಕರರ ದಿನಾಚರಣೆಯಾಗಿ ಘೋಷಣೆ ಮಾಡಲಾಗುವುದು ಎಂದರು.

Siddaramaiah
Image credit: https://www.facebook.com/Siddaramaiah.Official

ಲಿಂಗತಾರತಮ್ಯ ಹೋಗಲಾಡಿಸಲು ಸರ್ಕಾರ ಬದ್ಧ: ಸರ್ಕಾರದ ಆಡಳಿತ ಯಂತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಮಹಿಳಾ ನೌಕರರು ಪುರುಷರಿಗೆ ಸರಿಸಮನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಲಿಂಗತಾರತಮ್ಯ ಹೋಗಲಾಡಿಸಲು ಸರ್ಕಾರ ಬದ್ಧವಾಗಿದೆ. ಎಲ್ಲರನ್ನೂ ಸಮಾನವಾಗಿ ಕಾಣುವ ಬದ್ಧತೆ ನಮ್ಮ ಸರ್ಕಾರದ್ದಾಗಿದೆ ಎಂದರು.

ಮೂಢನಂಬಿಕೆ ಹಾಗೂ ಅಂಧಶ್ರದ್ಧೆಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ: ಹಿಂದಿನ ಕಾಲದಲ್ಲಿ ಮಹಿಳೆಯರು ಅಕ್ಷರ ಸಂಸ್ಕೃತಿಯನ್ನು ವಂಚಿತರಾಗಿದ್ದರು. ಸಂವಿಧಾನ ಜಾರಿಯ ನಂತರ ಎಲ್ಲರಿಗೂ ಶಿಕ್ಷಣ ಸೇರಿದಂತೆ ಸಮಾನ ಹಕ್ಕುಗಳನ್ನು ನೀಡಲಾಯಿತು. ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಸಾಕ್ಷರತೆಯ ಪ್ರಮಾಣ 10 ರಿಂದ ಶೇ.12 ರಷ್ಟಿತ್ತು. ಇಂದು ಈ ಪ್ರತಿಶತ ಸುಮಾರು 78 ಕ್ಕೆ ಏರಿದೆ. ಮಹಿಳೆಯರು ತಮ್ಮ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಅವರಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕತೆಯನ್ನು ಬೆಳೆಸಬೇಕು. ಸಮಾಜದಲ್ಲಿ ಮೂಢನಂಬಿಕೆ ಹಾಗೂ ಅಂಧಶ್ರದ್ಧೆಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.

Siddaramaiah
Image credit: https://www.facebook.com/Siddaramaiah.Official

ಮಹಿಳೆಯರು ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಬೆಳೆಸಿಕೊಳ್ಳಬೇಕು: ಮಹಿಳೆಯರು ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಬೆಳೆಸಿಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು. ಸಾಧ್ಯವಾದ ಮಟ್ಟಿಗೆ ಮೂಢ ನಂಬಿಕೆಗಳು ಮತ್ತು ಅಂಧ ಶ್ರದ್ಧೆಗಳನ್ನ ದೂರ ಮಾಡುವಂಥ ಕೆಲಸ ಮಾಡಬೇಕು. ಮಕ್ಕಳಿಗೂ ಇದನ್ನು ಹೇಳಿಕೊಡಿ ಎಂದರು. ಆಗ ಮಾತ್ರ ಆರೋಗ್ಯಕರ, ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ. ಸಂವಿಧಾನವೂ ಇದನ್ನೇ ಹೇಳುತ್ತದೆ. ಈ ಬಾರಿ ನಾನು ಮುಖ್ಯಮಂತ್ರಿಯಾದ ಬಳಿಕ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆಯನ್ನು ಓದಿಸಲಾಗುತ್ತಿದೆ. ನಮ್ಮ ಸಮಾಜದಲ್ಲಿ ಅನೇಕ ಜಾತಿ, ಧರ್ಮಗಳಿವೆ. ಯಾವುದೇ ಕಾರಣಕ್ಕೂ ಮಕ್ಕಳಿಗೆ ಜಾತಿಯನ್ನು ಮುಂದಿಟ್ಟುಕೊಂಡು ಜಾತೀಯತೆಯನ್ನು ತುಂಬುವ ಕೆಲಸ ಮಾಡಬಾರದು. ಶಿಕ್ಷಣ ನೀಡುವುದು ಜಾತಿ ವ್ಯವಸ್ಥೆ ಹೋಗಬೇಕೆನ್ನುವ ಕಾರಣಕ್ಕೆ. ಅದರ ಉದ್ದೇಶ ಸಫಲವಾಗಬೇಕು ಎಂದರು. ವೈದ್ಯರು, ವಿಜ್ಞಾನಿಗಳೂ ಸೇರಿದಂತೆ ವಿದ್ಯಾವಂತರು ಕೂಡ ಮೂಢನಂಬಿಕೆಗಳನ್ನು ಉಳ್ಳವರಾಗಿದ್ದಾರೆ. ಮಕ್ಕಳನ್ನು ಮೂಢನಂಬಿಕೆಗಳಿಂದ ದೂರ ಇಡಬೇಕು ಹಾಗೂ ಮಹಿಳೆಯರು ಹಾಗೂ ಮಕ್ಕಳು ಜಾತ್ಯತೀತವಾಗಿರಬೇಕು ಎಂದರು.

Siddaramaiah
Image credit: https://www.facebook.com/Siddaramaiah.Official

ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾಗಬೇಕು: ಮಹಿಳೆಯರ ಸಬಲೀಕರಣವಾಗಬೇಕು ಎಂಬ ಉದ್ದೇಶದಿಂದ 3.5 ಕೋಟಿ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತವಾಗಿ ಓಡಾಡುತ್ತಿದ್ದಾರೆ. ಇದನ್ನು ಸಾಮಾಜಿಕ ಬಂಡವಾಳ ಎಂದು ಕರೆಯುತ್ತೇವೆ. ಉಳಿತಾಯವಾಗುವ ಹಣವನ್ನು ಮಕ್ಕಳ ಶಿಕ್ಷಣ ಮುಂತಾದವುಕ್ಕೆ ಬಳಸಿಕೊಳ್ಳಲಾಗುತ್ತದೆ. ಆರನೇ ಮತ್ತು ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಿದ್ದು ನಮ್ಮ ಸರ್ಕಾರವೇ ಎಂದ ಮುಖ್ಯಮಂತ್ರಿಗಳು, ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾಗಬೇಕು. ಸ್ವಾತಂತ್ರ್ಯ ದೊರಕಿದ್ದು ಯಶಸ್ವಿಯಾಗಲು ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು ಎಂದು ಡಾ: ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಸರ್ಕಾರದ ಕೆಲಸಗಳಲ್ಲಿ ದಕ್ಷತೆ ಹೆಚ್ಚಾಗಲಿ ಎಂದರು.

Women should be economically and socially empowered: CM Siddaramaiah