ಏಳು ಮಹಾನಗರ ಪಾಲಿಕೆಗೆ ರೂ.1,400 ಕೋಟಿ ವಿಶೇಷ ಅನುದಾನ ಬಿಡುಗಡೆ : ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್

byrathi suresh
byrathi suresh

ಬೆಳಗಾವಿ: ರಾಜ್ಯದ 7 ಮಹಾನಗರ ಪಾಲಿಕೆಗಳಿಗೆ ತಲಾ ರೂ.200 ಕೋಟಿಯಂತೆ ರೂ.1,400 ಕೋಟಿ ವಿಶೇಷ ಅನುದಾವನ್ನು ನೀಡಲಾಗಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದರು.

ಇಂದು ವಿಧಾನ ಸಭೆ ಪ್ರಶ್ನೋತ್ತರ ಕಲಾಪದ ವೇಳೆ ಕುಮಟ ಶಾಸಕ ದಿನಕರ್ ಕೇಶವ್ ಶೆಟ್ಟಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳನ್ನಾಗಿ ಉನ್ನತೀಕರಿಸುವ ವೇಳೆ ಹತ್ತಿರ ಇರುವ ಗ್ರಾಮಾಂತರ ಪ್ರದೇಶಗಳನ್ನು ಸಹ ಸೇರ್ಪಡೆ ಮಾಡಿ ಸರಹದ್ದು ನಿಗದಿಪಡಿಸಲಾಗುತ್ತಿದೆ. ಆದರೆ ಕೆಲ ಶಾಸಕರು ನಗರಸಭೆ ವ್ಯಾಪ್ತಿಯಿಂದ ಗ್ರಾಮಗಳನ್ನು ಕೈಬಿಡುವಂತೆ ಮನವಿ ಮಾಡುತ್ತಾರೆ. ಇದು ಕಷ್ಟದ ಕೆಲಸವಾಗಿದೆ. ಸರ್ಕಾರ ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿದ ಗ್ರಾಮಗಳ ಅಭಿವೃದ್ಧಿಗೆ ಹಣ ನೀಡಲಿದೆ, ಶಾಸಕರು ತಾಳ್ಮೆ ವಹಿಸಬೇಕು ಎಂದು ತಿಳಿಸಿದರು.

byrathi suresh
byrathi suresh

ಕರ್ನಾಟಕ ಪೌರಸಭೆಗಳ ಅಧಿನಿಯಮದ ಮಾನದಂಡಗಳ ಪ್ರಕಾರ 20,000 ದಿಂದ 50,000 ಜನಸಂಖ್ಯೆ, ಅಥವಾ ಚದರ ಮೀಟರ್‍ಗೆ 1,500 ಜನಸಾಂದ್ರತೆ, ರೂ.9 ಲಕ್ಷ ರಾಜಸ್ವ ಆದಾಯ, ಇಲ್ಲವೆ ಶೇ.50 ರಷ್ಟು ಕೃಷಿಯೇತರ ಚಟುವಟಿಕೆ ನಡೆಯುತ್ತಿದ್ದರೆ ಅಂತಹ ಸ್ಥಳವನ್ನು ಪುರಸಭೆಯನ್ನಾಗಿ ಉನ್ನತಿಕರಿಸಲಾಗುವುದು. ಆದರೆ ಹೊನ್ನಾವರ ಪಟ್ಟಣದಲ್ಲಿ 2011ರ ಜನಗಣತಿ ಅನ್ವಯ 19,109 ಜನಸಂಖ್ಯೆಯಿದೆ. ಈ ಹಿನ್ನಲೆಯಲ್ಲಿ ಹೊನ್ನಾವರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ತಿರಸ್ಕರಿಸಲಾಗಿದೆ ಎಂದು ಸಚಿವ ಬಿ.ಎಸ್.ಸುರೇಶ್ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರ ಪರವಾಗಿ ಶಾಸಕ ದಿನಕರ್ ಕೇಶವ್ ಶೆಟ್ಟಿ ಅವರಿಗೆ ಉತ್ತರಿಸಿದರು.

ಪ್ರಸ್ತುತ ಹೊನ್ನಾವರದಲ್ಲಿ 20 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ವ್ಯಾಪಾರ ವಹಿವಾಟುಗಳು ಪಟ್ಟಣದಲ್ಲಿ ಹೆಚ್ಚಾಗಿವೆ. ಜನರು ಕೃಷಿಯೇತರ ಆದಾಯದಿಂದಲೇ ಬದುಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರ ಹೊನ್ನಾವರನ್ನು ಪುರಸಭೆಯನ್ನಾಗಿ ಮೇಲ್ದೆರ್ಜೆಗೆ ಏರಿಸಬೇಕು. ಪ್ರಮುಖ ಪ್ರವಾಸಿ ತಾಣವಾದ ಗೋಕರ್ಣ 33 ಸದಸ್ಯರು ಇರುವ ದೊಡ್ಡ ಗ್ರಾಮ ಪಂಚಾಯಿತಿಯಾಗಿದೆ. ನಿತ್ಯ ಸಾವಿರಾರು ಪ್ರವಾಸಿಗರು ಗೋಕರ್ಣಕ್ಕೆ ಭೇಟಿ ನೀಡುತ್ತಾರೆ. ಸರ್ಕಾರ ಗೋಕರ್ಣವನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸಬೇಕು ಎಂದು ಶಾಸಕ ದಿನಕರ್ ಕೇಶವ್ ಶೆಟ್ಟಿ ಕೋರಿದರು.

Rs.1,400 crore special grant released for seven municipal corporations Urban Development Minister B.S. Suresh