ರಾಮನಗರ : ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರೈತರಿಂದ ರಾಗಿ ಮತ್ತು ಭತ್ತ ಖರೀದಿಸಲು ನಿಗಧಿಯಾಗಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಜ.21ರ ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಎಂ.ಎಸ್.ಪಿ ರಾಗಿ ಮತ್ತು ಭತ್ತ ಖರೀದಿಸಲು ನಿಗಧಿಯಾಗಿರುವ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದನ್ನು ಮಿಸ್ ಮಾಡದೇ ಓದಿ : ರಾಜ್ಯಪಾಲರ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ ಮುಖ್ಯಮಂತ್ರಿ ಸಿದ್ದರಾಮಯ್ಯ
ಇದನ್ನು ಮಿಸ್ ಮಾಡದೇ ಓದಿ : ಜನವರಿ 29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಲನಚಿತ್ರೋತ್ಸವಕ್ಕೆ ಚಾಲನೆ
ಜಿಲ್ಲೆಯಲ್ಲಿ ತಾಲ್ಲೂಕುವಾರು ಚನ್ನಪಟ್ಟಣದಲ್ಲಿ 373, ಕನಕಪುರದಲ್ಲಿ 3,325, ಹಾರೋಹಳ್ಳಿಯಲ್ಲಿ 937, ಮಾಗಡಿಯಲ್ಲಿ 7,158 ಹಾಗೂ ರಾಮನಗರದಲ್ಲಿ 472 ರೈತರು ಸೇರಿದಂತೆ ಒಟ್ಟಾರೆ 12,265 ರೈತರು ರಾಗಿ ಖರೀದಿಗೆ ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ನೋಂದಾಯಿತ ರೈತರಿಂದ 2,88,284 ಕ್ವಿಂಟಾಲ್ ರಾಗಿ ಖರೀದಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದಾಗ ಜಿಲ್ಲಾಧಿಕಾರಿಗಳು ಮಾತನಾಡಿ ರೈತರಿಂದ ಖರೀದಿಸಲಾಗುವ ರಾಗಿ ದಾಸ್ತಾನನ್ನು ಸುರಕ್ಷಿತವಾಗಿ ಸಂಗ್ರಹಣೆ ಮಾಡಲು ಹಾಗೂ ದಾಸ್ತಾನಿನ ಪ್ರಮಾಣಿನಲ್ಲಿ ವ್ಯತ್ಯಯವಾಗದಂತೆ ಅಧಿಕಾರಿ, ಸಿಬ್ಬಂದಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದರು.

ಪ್ರತೀ ಕ್ವಿಂಟಾಲ್ ರಾಗಿಗೆ 4,886 ರೂ.ಗಳು, ಭತ್ತ (ಸಾಮಾನ್ಯ) 2,369 ರೂ.ಗಳು ಹಾಗೂ ಗ್ರೇಡ್ ಎ ಭತ್ತಕ್ಕೆ 2,389 ರೂ.ಗಳ ಬೆಂಬಲ ಬೆಲೆಯನ್ನು ಸರ್ಕಾರ ನಿಗಧಿಪಡಿಸಿದೆ. ಖರೀದಿ ಕೇಂದ್ರಗಳಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ರೈತರೇ ನೇರವಾಗಿ ರಾಗಿ ಖರೀದಿಯಲ್ಲಿ ಪಾಲ್ಗೊಳ್ಳಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು, ಗುಣಮಟ್ಟ ಪರಿವೀಕ್ಷಕರು ರೈತರಿಂದ ಉತ್ತಮ ಗುಣಮಟ್ಟದ ರಾಗಿಯನ್ನು ಖರೀದಿ ಮಾಡಬೇಕು. ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಾದಲ್ಲಿ ಅಥವಾ ಕಳಪೆ ಗುಣಮಟ್ಟದ ರಾಗಿ ಖರದೀ ಮಾಡಿದಲ್ಲಿ ಸಂಬಂಧಿಸಿದ ಗುಣಮಟ್ಟ ಪರಿವೀಕ್ಷಕರುಗಳು ಹಾಗೂ ಖರೀದಿ ಅಧಿಕಾರಿಗಳ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಐದು ತಾಲ್ಲೂಕುಗಳಿಗೆ ಒಂದರಂತೆ ಒಟ್ಟು ಐದು ಖರೀದಿ ಕೇಂದ್ರ ಮತ್ತು ಸಂಗ್ರಹಣ ಕೇಂದ್ರಗಳನ್ನು 2026ರ ಜನವರಿ ಮಾಹೆಯ ಅಂತ್ಯದೊಳಗೆ ತೆರೆಯಲಾಗುವುದು. ಖರೀದಿ ಕೇಂದ್ರಗಳಲ್ಲಿ ರೈತರು ಮಾತ್ರ ಹಾಜರಿರಬೇಕು. ರಾಗಿ ಹಾಗೂ ಭತ್ತ ನೀಡಿದ ರೈತರಿಗೆ ನಿಗಧಿತ ದಿನಾಂಕದೊಳಗೆ ಹಣ ಪಾವತಿಸಬೇಕು. ಖರೀದಿ ಕೇಂದ್ರಗಳ ಮುಂಭಾಗ ಬ್ಯಾನರ್‌ಗಳನ್ನು ಅಳವಡಿಸಿ ನೋಡಲ್ ಅಧಿಕಾರಿಗಳ ಹೆಸರು ಹಾಗೂ ದೂರವಾಣಿ ಸಂಖ್ಯೆಯನ್ನು ಪ್ರದರ್ಶಿಸುವಂತೆ ಹಾಗೂ ಖರೀದಿ ಕೇಂದ್ರಗಳಲ್ಲಿ ರೈತರಿಗೆ ನೆರಳು, ಕುಡಿಯುವ ನೀರು ಮತ್ತು ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ತಿಳಿಸಿದರು.
ಕನಕಪರು ತಾಲ್ಲೂಕಿನ ಖರೀದಿ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದ ಅವರು ಕಳೆದ ವರ್ಷ ತಮಿಳುನಾಡಿನ ರಾಗಿಯನ್ನು ಕನಕಪುರ ತಾಲ್ಲೂಕಿನ ಖರೀದಿ ಕೇಂದ್ರಕ್ಕೆ ತರುತ್ತಿರುವುದಾಗಿ ದೂರುಗಳು ಸ್ವೀಕೃತವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಅತ್ಯಂತ ಎಚ್ಚರಿಕೆಯಿಂದ ಹೊರ ರಾಜ್ಯದ ರೈತರು ಬಾರದಂತೆ ಕ್ರಮ ವಹಿಸುವಂತೆ ನಿರ್ದೇಶಿಸಿದರು.
ಮಾಗಡಿ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಗಿ ಖರೀದಿ ನಡೆದಿರುಯುವುದರಿಂದ ಮುಂದಿನ ದಿನಗಳಲ್ಲಿ ಅವಶ್ಯಕತೆಗಳಿಗೆ ಅನುಗುಣವಾಗಿ ಖರೀದಿ ಕೇಂದ್ರ ತೆರೆಯಲು ಅಗತ್ಯ ಕ್ರಮ ವಹಿಸುವಂತೆ ಸಲಹೆ ನೀಡಿದರು. ಜಿಲ್ಲೆಯಲ್ಲಿ ಉಪ ಏಜೆನ್ಸಿಗಳ ಮೂಲಕ ಖರದೀ ಪ್ರಕ್ರಿಯೆ ನಡೆಸದೆ ಕೆ.ಎಫ್.ಸಿಎಸ್.ಸಿ ಮುಖಾಂತರವೇ ಹಿಂದಿನಂತೆ ಖರೀದಿ ಪ್ರಕ್ರಿಯೆ ನಡೆಸಬೇಕೆಂದ ಅವರು ಒಟ್ಟಾರೆ ಪ್ರಸಕ್ತ ಸಾಲಿನ ಕನಿಷ್ಠ ಬೆಂಬಲ ಯೋಜನೆಯನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಶಿಲ್ಪ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಅಂಬಿಕಾ, ಕೆ.ಎಫ್.ಸಿ.ಎಸ್.ಸಿ ಜಿಲ್ಲಾ ವ್ಯವಸ್ಥಾಪಕರು, ಕಾನೂನು ಮಾಪನಾ ಶಾಸ್ತç ಇಲಾಖೆಯ ಸಹಾಯಕ ನಿಯಂತ್ರಕರು, ಎಲ್ಲಾ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು, ಕೆ.ಎಫ್.ಸಿ.ಎಸ್.ಸಿ ಖರೀದಿ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
Ramanagara Deputy Commissioner Yashwant V. Gurukar has made it mandatory to follow the guidelines for purchasing millet and paddy