ಶಿವಮೊಗ್ಗ : ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ, ಗ್ರಾಮ ಸೇವಕರು ಮನೆ ಬಾಗಿಲಿಗೆ ಬಂದು ಮೃತ ವ್ಯಕ್ತಿಗಳ ಹೆಸರಿನಲ್ಲಿರುವ ಜಮೀನುಗಳನ್ನು ಅವರ ವಾರಸುದಾರರ ಹೆಸರಿಗೆ ಪೌತಿ ಖಾತೆ ಮಾಡಿಕೊಡುವ ಅಭಿಯಾನ ಕೈಗೊಂಡಿದ್ದು ವಾರಸುದಾರರು ಇದಕ್ಕೆ ಸಹಕರಿಸಬೇಕೆಂದು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರು ಮನವಿ ಮಾಡಿದರು.
ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದನ್ನು ಮಿಸ್ ಮಾಡದೇ ಓದಿ : ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಡಿಜಿಟಲ್ ವೇದಿಕೆ ಸೌಲಭ್ಯ
ಇ-ಪೌತಿ ಖಾತೆ ಮಾಡಿಸುವ ಸಂಬAಧ ವಿಎಓ ಗಳು ವಾರಸುದಾರರನ್ನು ಗುರುತು ಮಾಡಿ ವಿವರಗಳನ್ನು ಪಡೆದು ಕ್ರಮ ಕೈಗೊಳ್ಳಬೇಕು. ಓಟಿಪಿ ಸಮಸ್ಯೆ, ಕೋರ್ಟ್ ವ್ಯಾಜ್ಯ, ಹೆಣ್ಣು ಮಕ್ಕಳಿಗೆ ಆಸ್ತಿ ಕೊಡಬೇಕಾಗುತ್ತದೆಂದು ವಾರಸುದಾರರು ಮಾಹಿತಿ ನೀಡುತ್ತಿಲ್ಲ, ಎರಡು, ಮೂರು ತಲೆಮಾರಗಳ ಪ್ರಕರಣಗಳು ಕಷ್ಟ ಎಂಬ ಸಾಮಾನ್ಯ ಕಾರಣ ನೀಡದೇ ಪ್ರತಿ ಪ್ರಕರಣದಲ್ಲಿ ನಿಖರವಾದ ಕಾರಣ ತಿಳಿದು, ವಾರಸುದಾರರ ಮನವೊಲಿಸಿ ಕ್ರಮ ವಹಿಸಬೇಕು. ಹಾಗೂ 2021 ರ ಸುತ್ತೋಲೆ ಪ್ರಕಾರ ಅಭಿಯಾನ ಮಾದರಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ 89434 ಇ-ಪೌತಿ ಪ್ರಕರಣಗಳು ಇದ್ದು, 12726 ಪೂರ್ಣಗೊಂಡಿದೆ. 45470 ಪ್ರಕರಣಗಳು ಬಾಕಿ ಇದ್ದು ಸಂಬAಧಿಸಿದ ಅಧಿಕಾರಿಗಳು ಮಿಷನ್ ಮೋಡ್‌ಲ್ಲಿ ಕೆಲಸ ಮಾಡಿ ಮೊದಲ ಹಂತದಲ್ಲಿ ಶೇ.75 ರಷ್ಟು ಕೆಲಸ ಮಾಡುವಂತೆ ಸೂಚಿಸಿದ ಅವರು ರೂ. 5 ಕೋಟಿಯನ್ನು ಗ್ರಾಮ ಆಡಳಿತ ಅಧಿಕಾರಿ ಮತ್ತು ಗ್ರಾಮ ಸೇವಕರಿಗೆ ಪ್ರೋತ್ಸಾಹ ಧನ ರೂಪದಲ್ಲಿ ನೀಡಲಾಗುವುದು.

ಭೂ ಸುರಕ್ಷಾ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಡಿಇಓ ಗಳ ಮೂಲಕ ದಾಖಲೆಗಳನ್ನು ಸ್ಕಾö್ಯನ್ ಮಾಡಿಸಬೇಕು. ಈ ಯೋಜನೆಯಡಿ ಸಾಗರ ತಾಲ್ಲೂಕಿನಲ್ಲಿ ನಿಗದಿತ ಪ್ರಮಾಣದಲ್ಲಿ ಪ್ರಗತಿಯಾಗಿಲ್ಲ. ರೆಕಾರ್ಡ್ ರೂಮ್ ಕೌಂಟರ್ ಮೂಲಕ ಪಡೆಯಲಾಗುವ ದಾಖಲಾತಿಗಳಲ್ಲಿ ಭದ್ರಾವತಿ ತಾಲ್ಲೂಕಿನಲ್ಲಿ ಕಡಿಮೆ ಪ್ರಗತಿ ಇದ್ದು, ಮ್ಯಾನುಯಲ್ ಆಗಿ ದಾಖಲಾತಿ ನೀಡಬಾರದು ಎಂದು ಸೂಚನೆ ನೀಡಿದರು.
ಕಂದಾಯ ಗ್ರಾಮಗಳ ರಚನೆ : ರಿಜಿಸ್ಟರ್ಡ್ ಸೇಲ್ ಡೀಡ್ ಇರುವುದನ್ನು ಬಿಟ್ಟು ಉಳಿದವರಿಗೆ ವಾಸಿಸುವ ಜಾಗಕ್ಕೆ ಹಕ್ಕು ಪತ್ರ ನೀಡಬೇಕು. 4000 ಅಡಿಗೆ ಒಂದು ಟೈಟಲ್ ಸಿಗುತ್ತದೆ. ಹಕ್ಕುಪತ್ರ ನೀಡುವುದರಿಂದ ವಾಸಿಸುವ ಮನೆಯಾದ್ರೂ ಸ್ವಂತ ಆಗುತ್ತದೆ. ಅಧಿಕಾರಿಗಳು ಕಾನೂನಿನಲ್ಲಿ ಅವಕಾಶ ಇರುವುದನ್ನು ಮಾಡಿಕೊಡಬೇಕು. ಅರ್ಹರನ್ನು ಗುರುತಿಸಿ ಮಾರ್ಚ್ 16 ರೊಳಗೆ ಹಕ್ಕುಪತ್ರ ನೀಡಲು ಕ್ರಮವಹಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಈ ಮೂಲಕ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಮೋಜಿನಿ ವರದಿ: ಮೋಜಿನಿ ಸರ್ವೆಗಾಗಿ 19462 ಅರ್ಜಿಗಳು ಬಂದಿದ್ದು, ಸರ್ವೇ ಇಲಾಖೆಯಲ್ಲಿ 10525 ಬಾಕಿ, ತಹಶಿಲ್ದಾರ್/ಎಸಿ ಕಚೇರಿಯಲ್ಲಿ 7032 ಬಾಕಿ ಸೇರಿದಂತೆ 13557 ಬಾಕಿ ಇದೆ. ಲಭ್ಯವಿರುವ ಸರ್ವೇಯರ್‌ಗಳು, ರೋವರ್‌ಗಳನ್ನು ಬಳಸಿಕೊಂಡು ಸಕಾಲಿಕವಾಗಿ ಸರ್ವೇ ಮಾಡಲು ಕ್ರಮ ವಹಿಸಬೇಕು. ಇಲಾಖೆ ಅಧಿಕಾರಿ, ನೌಕರರು ಆಸಕ್ತಿಯಿಂದ ಬಡವರ ಪರವಾಗಿ ಕೆಲಸ ಮಾಡಬೇಕು ಎಂದರು.
ರೆವೆನ್ಯು ನಿವೇಶನಗಳಿಗೆ ಬಿ-ಖಾತೆ ನೀಡಬೇಕು. ಈ ಕುರಿತು ಅರಿವಿನ ಕೊರತೆ ಇದ್ದು ಅರಿವನ್ನು ಹೆಚ್ಚಿಸಬೇಕು. ಇಲ್ಲವಾದಲ್ಲಿ ಆಸ್ತಿ ವ್ಯವಹಾರಗಳಿಗೆ ಕಷ್ಟವಾಗುತ್ತದೆ. ಹಳೇ ಆಸ್ತಿಗಳಿಗೆ ಇಸ್ವತ್ತು ಸಿಗುತ್ತಿಲ್ಲ. ಆದ್ದರಿಂದ ಡಿಸಿ, ಸಿಇಓ, ಗಳು ಜನರಿಗೆ ತೊಂದರೆಯಾಗದAತೆ ಅಂತಹ ಪ್ರಕರಣಗಳ ಕುರಿತು ಸೂಕ್ತ ಕ್ರಮ ವಹಿಸಬೇಕು ಎಂದು ತಿಳಿಸಿದರು.
ರಿಜಿಸ್ರ‍್ಡ್ ಸೇಲ್ ಡೀಡ್ ಇಲ್ಲದವರಿಗೆ ಕಂದಾಯ ಗ್ರಾಮ ರಚನೆ (ನಗರ ಸೇರಿ)ಮೂಲಕ ಮಾತ್ರ ಸಹಾಯ ಮಾಡಬಹುದು. ಇಲ್ಲವಾದಲ್ಲಿ ಅವರಿಗೆ ತ್ರಿಶಂಕು ಪರಿಸ್ಥಿತಿ ಉಂಟಾಗುತ್ತದೆ. ಅದೂ ಕೂಡ ಮಾರ್ಚ್ 16 ರೊಳಗೆ ಮಾಡಬೇಕು ಎಂದರು. ಇನ್ನು ಮುಂದೆ ಪಹಣಿಯೊಂದಿಗೆ ಸ್ಕೆಚ್, ಆಕಾರ್ ಬಂದ್ ಮತ್ತು ಮ್ಯುಟೇಷನ್ ಸೇರಿದಂತೆ ಸಮಗ್ರ ದಾಖಲೆಗಳು ಜನರಿಗೆ ಲಭ್ಯವಾಗುವಂತಹ ಭೂ ಆಧಾರ್ ಎಂಬ ಯೋಜನೆಗೆ ನೀಲಿನಕ್ಷೆ ಹಾಕಿಕೊಳ್ಳಲಾಗಿದೆ.
ನನ್ನ ಭೂಮಿ ಹೆಸರಿನಲ್ಲಿ ದರಕಾಸ್ತು ಜಮೀನುಗಳ ಪೋಡಿ ಅಭಿಯಾನ ಶುರು ಮಾಡಿದ್ದು, ಹಿಂದೆ ಸರ್ಕಾರದಿಂದ ರೈತರಿಗೆ ಮಂಜೂರಾಗಿರುವ ಭೂಮಿಗೆ ಪಕ್ಕಾ ದಾಖಲೆ ಇಲ್ಲದೇ, ಮಾರಾಟ ಮಾಡಲು, ಭಾಗ ಮಾಡಲು, ಬ್ಯಾಂಕ್ ಸೌಲಭ್ಯ ಪಡೆಯಲು ಆಗದೇ ಅತಂತ್ರ ಸ್ಥಿತಿಯಲ್ಲಿರುವ ರೈತರಿಗೆ ಸರ್ಕಾರವೇ ಜಮೀನಿಗೆ ಹೋಗಿ ದರಕಾಸ್ತು ಪೋಡಿ ಮಾಡಿಸುವ ಅಭಿಯಾನವನ್ನು ಕೈಗೊಂಡಿದೆ. ಈ ಯೋಜನೆಯಡಿ ವೇಗವಾಗಿ ಕೆಲಸ ಆಗುತ್ತಿದೆ. ಹಿಂದಿನ ಐದು ವರ್ಷದಲ್ಲಿ 8542 ಪೋಡಿಯಾಗಿದ್ದರೆ 2025 ರ ಜನವರಿಯಿಂದ 2026 ರ ಜನವರಿಯೊಳಗೆ 1.93 ಲಕ್ಷ ಪೋಡಿ ಮಾಡುವ ಮೂಲಕ ರೈತರ ಭೂಮಿ ಮಾಲೀಕತ್ವಕ್ಕೆ ಖಚಿತತೆ ನೀಡಲಾಗಿದೆ ಅಂತ ಅವರು ಇದೇ ವೇಳೆ ತಿಳಿಸಿದರು.
ಸಾವಿರ ದಿನ ಸಾವಿರಾರು ಕೆಲಸ : ಸರ್ಕಾರ ಈ ಸಾವಿರ ದಿನಗಳಲ್ಲಿ ಇಲಾಖೆಯ ಎಲ್ಲರ ಸಹಕಾರದಿಂದ ಸಾಕಷ್ಟು ಕೆಲಸಗಳನ್ನು ಮಾಡಿದೆ. ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ದಾಖಲಾತಿಗಳಿಗಾಗಿ ಕೋರ್ಟ್, ಕಚೇರಿ ಅಲೆಯುತ್ತಿರುವ ಜನರಿಗೆ ಪರಿಹಾರ ನೀಡಲು ಕಂದಾಯ ಇಲಾಖೆ ಬದ್ದವಾಗಿದೆ. ದಾಖಲೆ ಇಲ್ಲದೆ ವಾಸಿಸುತ್ತಿರುವವರಿಗೆ ಕಂದಾಯ ಗ್ರಾಮಗಳ ರಚನೆ ಮೂಲಕ ಅವರ ಸೂರಿಗೆ ಗ್ಯಾರಂಟಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 2.20 ಲಕ್ಷ ಹಕ್ಕು ಪತ್ರಗಳನ್ನು ನೀಡಲಾಗುತ್ತಿದೆ.
ತಹಶೀಲ್ದಾರ್ ಕಚೇರಿಯಲ್ಲಿ ಅವಧಿ ಮೀರಿದ 10774 ಪ್ರಕರಣಗಳು ಇದ್ದು ಪರಿಶೀಲಿಸಿ ವಿಲೇವಾರಿ ಮಾಡಿದ್ದು ಈಗ 492 ಮಾತ್ರ ಬಾಕಿ ಇವೆ. ಎಸಿ ಕಚೇರಿಯಲ್ಲಿದ್ದ 73624 ಅವಧಿ ಮೀರಿದ ಪ್ರಕರಣಗಳನ್ನು ವಿಲೇ ಮಾಡಲು ವಿಶೇಷ ಎಸಿ ಗಳನ್ನು ನೇಮಿಸಿ ಈ ಸಂಖ್ಯೆಯನ್ನು 11400 ಕ್ಕೆ ಇಳಿಸಲಾಗಿದೆ.
ಡಿಜಟಲೀಕರಣ : ಜನರಿಗೆ ದಾಖಲಾತಿಗಳು ಸುಲಭವಾಗಿ ಲಭ್ಯವಾಗಬೇಕೆಂಬ ಉದ್ದೇಶದಿಂದ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಭೂ ಸುರಕ್ಷಾ ಯೋಜನೆಯಡಿ ದಾಖಲೆಗಳನ್ನು ಸ್ಕಾö್ಯನ್ ಮಾಡಲು ಎಲ್ಲ ತಾಲ್ಲೂಕುಗಳಿಗೆ ಕಂಪ್ಯೂಟರ್‌ಗಳು ಮತ್ತು ಸ್ಕಾö್ಯನರ್‌ಗಳನ್ನು ನೀಡಿದ್ದು ಕಾರ್ಯ ಪ್ರಗತಿಯಲ್ಲಿದೆ. ಮಾರ್ಚ್ನಿಂದ ಕಡ್ಡಾಯವಾಗಿ ಇ-ಆಫೀಸ್ ಜಾರಿ ಮಾಡಲು ಸೂಚಿಸಿದ್ದು ಎಲ್ಲ ವಿಎಓ ಗಳಿಗೆ ಟ್ಯಾಬ್‌ಗಳನ್ನು ನೀಡಲಾಗುವುದು.
750 ಎಡಿಎಲ್‌ಆರ್ ನೇಮಕ ಮಾಡಲು ಅಧಿಸೂಚನೆ ಹೊರಡಿಸಿದ್ದು ಕೆಲ ತಾಂತ್ರಿಕ ಕಾರಣದಿಂದ ಬಾಕಿ ಇದೆ. ಇದು ಸರಿಹೋದ ಮೇಲೆ ನೇಮಕ ಪ್ರಕ್ರಿಯೆ ಆರಂಭವಾಗುತ್ತದೆ. ಇಲಾಖೆಯಲ್ಲಿ ಸಾಕಷ್ಟು ಟೆಕ್ನಾಲಜಿ ಬಳಕೆ ಮಾಡಲಾಗುತ್ತಿದ್ದು ಸರ್ವೇ ಕಾರ್ಯಕ್ಕೆ ರೋವರ್ಸ್ ನೀಡಲಾಗಿದೆ. ಮತ್ತೆ 600 ರೋವರ್‌ಗಳಿಗೆ ಕಾರ್ಯಾದೇಶ ನೀಡಲಾಗಿದೆ. ಒಟ್ಟು 5000 ರೋವರ್ ಖರೀದಿಗೆ ಸರ್ಕಾರ ಮಂಜೂರಾತಿ ನೀಡಿದ್ದು ಪೂರೈಕೆದಾರರು ಲಭ್ಯವಾದ ನಂತರ ಖರೀದಿಸಲಾಗುವುದು. ಭೂ ಸುರಕ್ಷೆ ಯೋಜನೆಯಡಿ ದಾಖಲೆಗಳನ್ನು ಸ್ಕಾö್ಯನ್ ಮಾಡಿ ಡಿಟಿಜಲೀಕರಣ ಮಾಡಲಾಗುತ್ತಿದೆ ಬರುವ ವರ್ಷ ಹೊಸ ಸಾಫ್ಟ್ ವೇರ್ ಸಿದ್ದಪಡಿಸುತ್ತಿದ್ದು ಆಕಾರ್ ಬಂದ್ ಶೇ. 100 ಡಿಜಿಟಲ್ ಆಗಬೇಕು.
1857 ರಿಂದ 2004 ನೇ ಇಸವಿವರೆಗಿನ ದಾಖಲೆಗಳನ್ನು ಡಿಜಿಟಲ್ ಮಾಡಲಾಗುತ್ತಿದ್ದು ಇದರಿಂದ ಹಳೆಯ ದಾಖಲಾತಿ ಪಡೆಯಲು ಸುಲಭವಾಗಲಿದೆ ಮತ್ತು ಪಾರದರ್ಶಕತೆ ಇರಲಿದ್ದು ಭೂ ಗ್ಯಾರಂಟಿ ತರಲು ಪ್ರಯತ್ನಗಳು ಸಾಗಿವೆ ಎಂದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ದಿ.14-02-2026 ರಂದು ಹಾವೇರಿಯಲ್ಲಿ ನಡೆಯಲಿರುವ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶಕ್ಕೆ ಜಿಲ್ಲೆಯಿಂದ ಹೊಸ ಕಂದಾಯ ಗ್ರಾಮದ ಹಕ್ಕುಪತ್ರ ಪಡೆಯಲು 2558 ಫನಾನುಭವಿಗಳು, ಇ ಪೌತಿ 5405, ದರಕಾಸ್ತು ಪೋಡಿ 1438 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಸಚಿವರು, ಎಲ್ಲರೂ ಸೇರಿ ಶ್ರಮವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಪ್ರೊಬೊಷನರಿ ಐಎಎಸ್ ಅಧಿಕಾರಿ ನಾಗೇಂದ್ರ ಬಾಬು, ಜಿ.ಪಂ ಉಪ ಕಾರ್ಯದರ್ಶಿ ಸುಜಾತಾ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಎಸಿ ಗಳು, ತಹಶೀಲ್ದಾರರು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿಎಓ ಗಳು ಪಾಲ್ಗೊಂಡಿದ್ದರು.