ರೈತರ ಮನೆ ಬಾಗಿಲಿಗೆ ‘ಫೌತಿ ಖಾತೆ’ : ನಿಮ್ಮ ಮನೆ ಬಾಗಿಲಿಗೆ ಆನ್‌ಲೈನ್ ಸೇವೆ, ಭೂ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣ!

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳ ಸಭೆ ನಡೆಸುತ್ತಿರುವುದು.

ಬೆಂಗಳೂರು: ರೈತರು ಹಾಗೂ ಜನಸಾಮಾನ್ಯರು ಕಂದಾಯ ಇಲಾಖೆಯ ಕೆಲಸಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದ ಕಾಲವೊಂದು ಇತ್ತು. ಆದರೆ ಈಗ ಕಾಲ ಬದಲಾಗಿದೆ. ಪೋಡಿ ದುರಸ್ತಿ, ಫೌತಿ ಖಾತೆ, ಭೂ ಸುರಕ್ಷಾ ಅಭಿಯಾನ ಸೇರಿದಂತೆ ಕಂದಾಯ ಇಲಾಖೆಯ ಹತ್ತಾರು ಪ್ರಮುಖ ಸೇವೆಗಳು ಸಂಪೂರ್ಣ ಆನ್‌ಲೈನ್ ಡಿಜಿಟಲೀಕರಣಗೊಂಡಿದ್ದು, ನೇರವಾಗಿ ಜನರ ಮನೆ ಬಾಗಿಲಿಗೆ ತಲುಪುತ್ತಿವೆ. ಇದು ನಮ್ಮ ಸರ್ಕಾರದ ಸಾವಿರ ದಿನಗಳ ಆಡಳಿತದ ಅತಿ ದೊಡ್ಡ ಸಾಧನೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ನಡೆದ ಎಲ್ಲಾ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆಯಲ್ಲಿ ತಂದಿರುವ ತಂತ್ರಜ್ಞಾನ ಆಧಾರಿತ ಬದಲಾವಣೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

‘ನನ್ನ ಭೂಮಿ’ ಅಭಿಯಾನ: ರೈತರ ಜಮೀನಿಗೆ ಪಕ್ಕಾ ದಾಖಲೆ 

ಹಿಂದೆಲ್ಲಾ ಮಂಜೂರಾದ ಜಮೀನುಗಳಿಗೆ ಕೇವಲ ಆರ್.ಟಿ.ಸಿ (RTC) ನೀಡಿ ಕೈತೊಳೆದುಕೊಳ್ಳಲಾಗುತ್ತಿತ್ತು. ಇದರಿಂದ ಪಕ್ಕಾ ದಾಖಲೆಗಳಿಲ್ಲದೆ ರೈತರು ಅತಂತ್ರರಾಗಿದ್ದರು. ಕೇವಲ 5 ವರ್ಷಗಳಲ್ಲಿ 8,500 ಅರ್ಜಿಗಳಿಗೆ ಮಾತ್ರ ಪೋಡಿ ಮಾಡಲಾಗಿತ್ತು.
ಆದರೆ, ಪ್ರಸ್ತುತ:

  • ರೈತರು ಅರ್ಜಿ ಸಲ್ಲಿಸುವ ಬದಲು, ಅಧಿಕಾರಿಗಳೇ ಖುದ್ದಾಗಿ ದಾಖಲೆ ಕಲೆಹಾಕಿ ಆನ್‌ಲೈನ್‌ನಲ್ಲಿ ಕಡತ ತಯಾರಿಸುತ್ತಿದ್ದಾರೆ.
  • ಕಳೆದ ಒಂದು ವರ್ಷದಲ್ಲಿ 2,05,757 ರೈತರ ಜಮೀನುಗಳ ಸರ್ವೆ ಕೈಗೆತ್ತಿಕೊಳ್ಳಲಾಗಿದೆ.
  • ಮುಂದಿನ ಮೂರು ತಿಂಗಳಲ್ಲಿ ಮತ್ತೊಂದು ಲಕ್ಷ ಜಮೀನುಗಳ ಸರ್ವೆ ಗುರಿ ಹೊಂದಲಾಗಿದೆ.
  • ಮಿಸ್ಸಿಂಗ್ ರೆಕಾರ್ಡ್ ಕಮಿಟಿಗೆ ಕಳುಹಿಸಲಾದ 1,07,217 ಕಡತಗಳಲ್ಲಿ ಶೀಘ್ರ ವಿಲೇವಾರಿ ನಡೆಯುತ್ತಿದೆ.

ರೈತರ ಮನೆ ಬಾಗಿಲಿಗೆ ‘ಫೌತಿ ಖಾತೆ’

ರಾಜ್ಯದಲ್ಲಿ ಸುಮಾರು 49 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿದ್ದವು. ಇದರಿಂದ ವಾರಸುದಾರರು ಕ್ರಯ, ಸಾಲದಂತಹ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು. ಇದನ್ನು ತಪ್ಪಿಸಲು ಇಲಾಖೆಯೇ ಖುದ್ದಾಗಿ ವಾರಸುದಾರರ ಮನೆ ಬಾಗಿಲಿಗೆ ತೆರಳಿ, ಸ್ವಯಂಪ್ರೇರಣೆಯಿಂದ 13 ಲಕ್ಷ ಜಮೀನುಗಳ ಫೌತಿ ಖಾತೆ ಮಾಡಿಕೊಟ್ಟಿದೆ.

ವಿಶೇಷ ಪ್ರೋತ್ಸಾಹಧನ: ಈ ಅಭಿಯಾನದಲ್ಲಿ ಅತಿ ಹೆಚ್ಚು ಫೌತಿ ಖಾತೆ ಮಾಡಿಕೊಟ್ಟ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕರಿಗೆ ಸರ್ಕಾರದಿಂದ ಒಟ್ಟು ರೂ. 5.00 ಕೋಟಿ ಪ್ರೋತ್ಸಾಹಧನ ನೀಡುವುದಾಗಿ ಸಚಿವರು ಘೋಷಿಸಿದರು.

ಭೂ ಸುರಕ್ಷಾ ಅಭಿಯಾನ: ದಾಖಲೆಗಳಿಗೆ ಡಿಜಿಟಲ್ ಕವಚ 

ಹಿಂದೆ ದಾಖಲೆಗಳು ಕಳೆದುಹೋಗುವುದು ಅಥವಾ ತಿದ್ದುಪಡಿ ಆಗುವ ಆತಂಕವಿತ್ತು. ಇದಕ್ಕೆ ಕಡಿವಾಣ ಹಾಕಲು 71.19 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲಾಗಿದೆ. ಉಳಿದ 30 ಕೋಟಿ ಪುಟಗಳ ಸ್ಕ್ಯಾನಿಂಗ್ ಪ್ರಕ್ರಿಯೆ ಪ್ರತಿದಿನ 1.75 ಲಕ್ಷ ಪುಟಗಳ ವೇಗದಲ್ಲಿ ನಡೆಯುತ್ತಿದ್ದು, ಏಪ್ರಿಲ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ರೈತರು ತಾವೇ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಸರ್ಚ್ ಮಾಡಿ ಪರಿಶೀಲನೆ ಮಾಡಿಕೊಳ್ಳುವ ವ್ಯವಸ್ಥೆ ಜಾರಿಯಲ್ಲಿದೆ.

ಸರ್ವೇ ಇಲಾಖೆಗೂ ತಂತ್ರಜ್ಞಾನದ ಸರ್ಜರಿ

ಸರ್ವೇ ಇಲಾಖೆ ನೂತನ ಆಯುಕ್ತ ವೆಂಕಟರಾಜು ಅವರೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, ಸರ್ವೇ ಇಲಾಖೆಯನ್ನು ಸಂಪೂರ್ಣ ಕಾಗದರಹಿತ (Paperless) ಮಾಡಲು ಸೂಚಿಸಿದರು. ರೋವರ್ (Rover) ಮೂಲಕ ಸರ್ವೇ ಪೂರ್ಣಗೊಳಿಸಿ ಸ್ಕೆಚ್, ಟಿಪ್ಪಣಿ ಸೇರಿದಂತೆ ಪ್ರತಿಯೊಂದನ್ನೂ ಎಂಡ್-ಟು-ಎಂಡ್ ಡಿಜಿಟಲ್ ಮಾಡುವ ಗುರಿಯನ್ನು ಈ ವರ್ಷಾಂತ್ಯಕ್ಕೆ ಸಾಧಿಸಲಾಗುವುದು ಎಂದರು.

ಸಾವಿರ ದಿನಗಳ ಸವಾಲಿನ ಹಾದಿ

“ಒಂದು ಕಾಲದಲ್ಲಿ ಯಾವ ಅಧಿಕಾರಿಯ ಬಳಿ ಎಷ್ಟು ಫೈಲ್ ಬಾಕಿ ಇದೆ ಎಂಬ ಮಾಹಿತಿಯೇ ಇರಲಿಲ್ಲ. ಆದರೆ, ಇಂದು ಇ-ಆಫೀಸ್ (e-Office) ವ್ಯವಸ್ಥೆಯಿಂದಾಗಿ ಗ್ರಾಮ ಆಡಳಿತಾಧಿಕಾರಿಯಿಂದ ಹಿಡಿದು ಸರ್ವೇಯರ್ ವರೆಗಿನ ಎಲ್ಲಾ ಕೆಲಸಗಳ ಟ್ರ್ಯಾಕಿಂಗ್ ಆನ್‌ಲೈನ್‌ನಲ್ಲೇ ಲಭ್ಯವಿದೆ. ಇಷ್ಟೆಲ್ಲಾ ಕೆಲಸವನ್ನು ಕೇವಲ 1000 ದಿನಗಳಲ್ಲಿ ಸಾಧಿಸಲು ಶ್ರಮಿಸಿದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳು” ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

RECENT NEWS