ಬೆಂಗಳೂರು: ಮಹಿಳೆಯರ ಸುರಕ್ಷತೆ ಮತ್ತು ಅವರ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯಕ್ಕೆ ಮೊದಲು ಯಾವುದೇ ಕಾರಣಕ್ಕೂ ವಿಚಾರಣೆ ಅಥವಾ ತನಿಖೆಗಾಗಿ ಮಹಿಳೆಯರನ್ನು ಪೊಲೀಸ್ ಠಾಣೆಗೆ ಕರೆತರಬಾರದು ಎಂದು ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಿಗೆ ಡಿಜಿ ಮತ್ತು ಐಜಿಪಿ ಕಚೇರಿಯು ಕಟ್ಟುನಿಟ್ಟಾದ ನಿರ್ದೇಶನ ನೀಡಿದೆ. ಈ ಹೊಸ ಆದೇಶವು ರೈಲ್ವೆ ಮತ್ತು ಕೆಜಿಎಫ್ ಸೇರಿದಂತೆ ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರು, ರೇಂಜ್ ಇನ್ಸ್ಪೆಕ್ಟರ್ ಜನರಲ್ಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಅನ್ವಯವಾಗಲಿದೆ.
ಈ ಹೊಸ ನಿಯಮ ಜಾರಿಗೆ ಬರುವ ಹಿಂದೆ ಕಳೆದ ವರ್ಷದ ಜುಲೈ ತಿಂಗಳಲ್ಲಿ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯ ಪ್ರಮುಖ ಕಾರಣವಾಗಿದೆ. ನೆರೆಹೊರೆಯವರ ನಡುವಿನ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ರಾತ್ರಿ ವೇಳೆ ಸುಮಾರು ಎರಡು ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಈ ಘಟನೆಯು ಸಂತ್ರಸ್ತೆಯ ಸುರಕ್ಷತೆ ಹಾಗೂ ಘನತೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಅವರು ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಮಹಿಳೆಯರನ್ನು ರಾತ್ರಿ ಸಮಯದಲ್ಲಿ ಠಾಣೆಗೆ ಕರೆಸುವುದು ಅವರ ಸುರಕ್ಷತೆ ಮತ್ತು ಹಕ್ಕುಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಆಯೋಗವು ಈ ಪ್ರಕರಣದ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿತ್ತು.
ಇದನ್ನೂ ಓದಿ : 2026ರ ಅಂಗಾರಕ ಸಂಕಷ್ಟ ಚತುರ್ಥಿ: ಇಂದೇ ವಿಶೇಷ ಪೂಜೆ; ಶುಭ ಮುಹೂರ್ತ, ಪೂಜಾ ವಿಧಾನ ಮತ್ತು ಮಂತ್ರಗಳು
ಇದನ್ನೂ ಓದಿ : ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ಸಂಚಾರ ನಿರ್ಬಂಧ
ಪೊಲೀಸ್ ಇಲಾಖೆಯು ಈ ಹಿಂದೆ ತನ್ನ ಸಮರ್ಥನೆಯಲ್ಲಿ, ವೈದ್ಯಕೀಯ ಪರೀಕ್ಷೆ ಸೇರಿದಂತೆ ತನಿಖಾ ಪ್ರಕ್ರಿಯೆಯ ಭಾಗವಾಗಿ ಮತ್ತು ವಿವಾದಗಳು ಉಲ್ಬಣಗೊಳ್ಳದಂತೆ ತಡೆಯುವ ಉದ್ದೇಶದಿಂದ ದೂರುದಾರರು ಹಾಗೂ ಪ್ರತಿ ದೂರುದಾರರನ್ನು ಕರೆಸಲಾಗಿತ್ತು ಎಂದು ತಿಳಿಸಿತ್ತು. ಆದಾಗ್ಯೂ, ಈ ರೀತಿಯ ಪ್ರಕರಣಗಳಲ್ಲಿ ಕಂಡುಬಂದ ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿರುವ ಹಿರಿಯ ಅಧಿಕಾರಿಗಳು, ಈಗ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದಾರೆ.
ಒಂದು ವೇಳೆ ಅನಿವಾರ್ಯ ಅಥವಾ ತುರ್ತು ಸಂದರ್ಭಗಳಲ್ಲಿ ರಾತ್ರಿ ವೇಳೆಯೂ ವಿಚಾರಣೆ ನಡೆಸಲೇಬೇಕಾದ ಪರಿಸ್ಥಿತಿ ಎದುರಾದರೆ, ಅಂತಹ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಉಪಸ್ಥಿತಿಯನ್ನು ಕಡ್ಡಾಯಗೊಳಿಸಲಾಗಿದೆ. ಇನ್ನು ಮುಂದೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಈ ನಿಯಮವನ್ನು ಉಲ್ಲಂಘಿಸದಂತೆ ಮತ್ತು ಮಹಿಳೆಯರ ಹಕ್ಕುಗಳಿಗೆ ಗೌರವ ನೀಡುವಂತೆ ಉನ್ನತ ಮಟ್ಟದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.