ಕರ್ನಾಟಕ ಬಜೆಟ್ 2026-27 ಮುಖ್ಯಾಂಶಗಳು | Karnataka Budget Highlights

2026-27ನೇ ಸಾಲಿನ ಕರ್ನಾಟಕ ಬಜೆಟ್‌ನ ಪ್ರಮುಖ ಮುಖ್ಯಾಂಶಗಳು ಮತ್ತು ಯೋಜನೆಗಳನ್ನು ವಿವರಿಸುವ ಇನ್ಫೋಗ್ರಾಫಿಕ್ಸ್

ಬೆಂಗಳೂರು: ಕರ್ನಾಟಕ ಸರ್ಕಾರವು 2026-27ನೇ ಸಾಲಿನ ಬಹುನಿರೀಕ್ಷಿತ ಆಯವ್ಯಯವನ್ನು ಮಂಡಿಸಿದ್ದು, ಈ ಬಾರಿಯ ಬಜೆಟ್ ಗಾತ್ರ 4,48,004 ಕೋಟಿ ರೂ.ಗಳಾಗಿದೆ. ಇದರಲ್ಲಿ ಒಟ್ಟು 4,47,240 ಕೋಟಿ ರೂ. ಸ್ವೀಕೃತಿಗಳ ನಿರೀಕ್ಷೆಯಿದ್ದು, ಕೃಷಿ, ನೀರಾವರಿ, ಶಿಕ್ಷಣ, ಹಾಗೂ ರಾಜಧಾನಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ.

ಬಜೆಟ್‌ನ ಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ವರದಿ ಇಲ್ಲಿದೆ:

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಬೆಂಗಳೂರು ಅಭಿವೃದ್ಧಿಗೆ ಸಿಂಹಪಾಲು

  • ಬೃಹತ್ ಅನುದಾನ: ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗಾಗಿ ಭರ್ಜರಿ 7,000 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ.
  • ಸುರಂಗ ಮಾರ್ಗಗಳ ನಿರ್ಮಾಣ: ನಗರದ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು BOOT ಮಾದರಿಯಲ್ಲಿ 40,000 ಕೋಟಿ ರೂ. ಅಂದಾಜು ಮೊತ್ತದಲ್ಲಿ 40 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣ ಮಾಡಲಾಗುವುದು. ಇದರ ಜೊತೆಗೆ 2,250 ಕೋಟಿ ರೂ. ವೆಚ್ಚದಲ್ಲಿ ಹೆಬ್ಬಾಳ ಜಂಕ್ಷನ್‌ನಿಂದ ಮೇಕ್ರಿ ಸರ್ಕಲ್‌ವರೆಗೆ ಸುರಂಗ ಮಾರ್ಗ ಮತ್ತು ಮೇಲು ಸೇತುವೆ ನಿರ್ಮಾಣವಾಗಲಿದೆ
  • ವೈಟ್ ಟ್ಯಾಪಿಂಗ್ & ಮೆಟ್ರೋ: 3,000 ಕೋಟಿ ರೂ. ಮೊತ್ತದಲ್ಲಿ 450 ಕಿ.ಮೀ ರಸ್ತೆಗೆ ವೈಟ್ ಟ್ಯಾಪಿಂಗ್ ಮಾಡಲಾಗುತ್ತಿದ್ದು, ಪ್ರಸಕ್ತ ಸಾಲಿಗೆ ಹೆಚ್ಚುವರಿ 41 ಕಿ.ಮೀ. ಮೆಟ್ರೋ ಮಾರ್ಗ ಸೇರ್ಪಡೆಯಾಗಲಿದೆ

ಕೃಷಿ ಮತ್ತು ನೀರಾವರಿ

  • ಹೊಸ ಯೋಜನೆಗಳು: ಕೃಷಿ ಬೆಳೆಗಳ ಮೌಲ್ಯವರ್ಧನೆಗಾಗಿ 100 ಕೋಟಿ ರೂ. ವೆಚ್ಚದಲ್ಲಿ ‘ಮುಖ್ಯಮಂತ್ರಿ ಕೃಷಿ ವಿಸ್ತಾರ’ ಯೋಜನೆ ಜಾರಿಗೆ ಬರಲಿದೆ. ಸಿರಿಧಾನ್ಯ ಉತ್ತೇಜನಕ್ಕೆ ‘ಮಿಲೆಟ್ ಹಬ್’ ಹಾಗೂ ಕೋಲಾರದಲ್ಲಿ MSIL ವತಿಯಿಂದ ‘ರೈತ ಮಾಲ್’ಗಳ ಸ್ಥಾಪನೆಯಾಗಲಿದೆ.
  • ಮೇಕೆದಾಟು & ಕಳಸಾ-ಬಂಡೂರಾ: ಕೇಂದ್ರ ಪರಿಸರ ಸಚಿವಾಲಯದಿಂದ ಅರಣ್ಯ ತೀರುವಳಿ ಪಡೆದು ಬಹುನಿರೀಕ್ಷಿತ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲಾಗುವುದು. ಹಾಗೆಯೇ ಕಳಸಾ-ಬಂಡೂರಾ ನಾಲಾ ಯೋಜನೆಗಳಿಗೂ ಅರಣ್ಯ ತೀರುವಳಿ ದೊರೆತ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು.
2026-27ನೇ ಸಾಲಿನ ಕರ್ನಾಟಕ ಬಜೆಟ್‌ನ ಪ್ರಮುಖ ಮುಖ್ಯಾಂಶಗಳು ಮತ್ತು ಯೋಜನೆಗಳನ್ನು ವಿವರಿಸುವ ಇನ್ಫೋಗ್ರಾಫಿಕ್ಸ್
Karnataka-Budget-2026-27-Highlights-Infographics

ಇದನ್ನು ಓದಿ : ಕರ್ನಾಟಕ ಬಜೆಟ್ 2026: ರೈತರಿಗೆ ₹30,000 ಕೋಟಿ ಸಾಲ, ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್!

ಇದನ್ನು ಓದಿ : ಕರ್ನಾಟಕ ಬಜೆಟ್ 2025: ಹೊಸ ಅಬಕಾರಿ ನೀತಿ ಜಾರಿ | ಶಿಕ್ಷಣಕ್ಕೆ ₹2,500 ಕೋಟಿ ಅನುದಾನ

ಶಿಕ್ಷಣ ಮತ್ತು ಮಕ್ಕಳ ಕಲ್ಯಾಣ

  • ಹೊಸ KPS ಶಾಲೆಗಳು: 3,900 ಕೋಟಿ ರೂ. ವೆಚ್ಚದಲ್ಲಿ 800 ಹೊಸ ‘ಕರ್ನಾಟಕ ಪಬ್ಲಿಕ್ ಶಾಲೆ’ಗಳನ್ನು (KPS) ಪ್ರಾರಂಭಿಸಲಾಗುವುದು.
  • ಉಚಿತ ಪಠ್ಯಪುಸ್ತಕ: ಉಚಿತ ಪಠ್ಯಪುಸ್ತಕಗಳ ವಿತರಣೆಯನ್ನು ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ (PUC) ಹಂತದವರೆಗೆ ವಿಸ್ತರಿಸಲಾಗಿದೆ.
  • ಸಾಮಾಜಿಕ ಜಾಲತಾಣ ನಿಷೇಧ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸುವ ದಿಟ್ಟ ಹೆಜ್ಜೆಯನ್ನು ಸರ್ಕಾರ ಇಟ್ಟಿದೆ.
  • ವಿಶ್ವವಿದ್ಯಾಲಯ ಉನ್ನತೀಕರಣ: 500 ಕೋಟಿ ರೂ. ವೆಚ್ಚದಲ್ಲಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ವಿಶ್ವವಿದ್ಯಾಲಯವನ್ನು (UVCE) IIT ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು

ಆರೋಗ್ಯ ವಿಭಾಗ

  • ಆಸ್ಪತ್ರೆಗಳ ಮರುನಾಮಕರಣ ಹಾಗೂ ಅಭಿವೃದ್ಧಿ: ಬೆಂಗಳೂರಿನ ಪ್ರಸಿದ್ಧ ವಿಕ್ಟೋರಿಯಾ ಆಸ್ಪತ್ರೆಯನ್ನು ‘ಶಾಂತವೇರಿ ಗೋಪಾಲಗೌಡ ಆಸ್ಪತ್ರೆ’ ಎಂದು ಮರುನಾಮಕರಣ ಮಾಡಲಾಗಿದೆ. ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯನ್ನು 600 ಹಾಸಿಗೆ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲು 180 ಕೋಟಿ ರೂ. ಒದಗಿಸಲಾಗಿದೆ.
  • ಡಿಜಿಟಲ್ ಹೆಲ್ತ್: ರೋಗಿಗಳ ಸಂಪೂರ್ಣ ಗಣಕೀಕೃತ ನೋಂದಣಿ ಹಾಗೂ ಆರೋಗ್ಯ ದಾಖಲೆಗಳ ಡಿಜಿಟಲೀಕರಣದೊಂದಿಗೆ UPI ಆಧಾರಿತ ಶುಲ್ಕ ಪಾವತಿ ವ್ಯವಸ್ಥೆ ಜಾರಿಗೆ ಬರಲಿದೆ.

ತೆರಿಗೆ ಮತ್ತು ಆದಾಯ

  • LNG ತೆರಿಗೆ ಇಳಿಕೆ: ದ್ರವೀಕೃತ ನೈಸರ್ಗಿಕ ಅನಿಲ (LNG) ಮೇಲಿನ ಕರ್ನಾಟಕ ಮಾರಾಟ ತೆರಿಗೆಯನ್ನು ಶೇ. 14.34 ರಿಂದ ಶೇ. 5 ಕ್ಕೆ ಗಣನೀಯವಾಗಿ ಇಳಿಕೆ ಮಾಡಲಾಗಿದೆ.
  • ಅಬಕಾರಿ ನೀತಿ ಬದಲು: ಏಪ್ರಿಲ್ 2026 ರಿಂದ ಪಾನೀಯಗಳಲ್ಲಿ ಇರುವ ಮದ್ಯದ ಅಂಶವನ್ನು (Alcohol-in-Beverage) ಆಧರಿಸಿ ಅಬಕಾರಿ ಸುಂಕ ವಿಧಿಸುವ ಹೊಸ ವ್ಯವಸ್ಥೆ ಜಾರಿಯಾಗಲಿದೆ. ವಾಣಿಜ್ಯ ತೆರಿಗೆ ಇಲಾಖೆಗೆ 1,25,000 ಕೋಟಿ ರೂ. ಮತ್ತು ಅಬಕಾರಿ ಇಲಾಖೆಗೆ 45,000 ಕೋಟಿ ರೂ. ರಾಜಸ್ವ ಸಂಗ್ರಹಣೆಯ ಗುರಿ ನಿಗದಿಪಡಿಸಲಾಗಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

  • ಅಂಗನವಾಡಿ ಕಾರ್ಯಕರ್ತೆಯರಿಗೆ ನೆರವು: ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಹೆಚ್ಚುವರಿಯಾಗಿ ಒಂದು ಜೊತೆ ಸಮವಸ್ತ್ರ ವಿತರಣೆ ಮಾಡಲಾಗುವುದು.
  • ಮಾತೃಪೂರ್ಣ ಯೋಜನೆ: ಈ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಮಧ್ಯಾಹ್ನದ ಬಿಸಿಯೂಟ ಒದಗಿಸಲಾಗುವುದು.
  • ದೇವದಾಸಿಯರ ಮಕ್ಕಳಿಗೆ ಬೆಂಬಲ: ಮಾಜಿ ದೇವದಾಸಿಯರ ಮಕ್ಕಳಿಗೆ ಉನ್ನತ ಶಿಕ್ಷಣ, ಸ್ವಯಂ ಉದ್ಯೋಗ ಹಾಗೂ ವೈಯಕ್ತಿಕ ಆದಾಯೋತ್ಪನ್ನ ಚಟುವಟಿಕೆಗಳಿಗಾಗಿ ಐದು ಕೋಟಿ ರೂ. ಮೀಸಲಿಡಲಾಗಿದೆ.

ಯುವನಿಧಿ, ಕಾರ್ಮಿಕ ಹಾಗೂ ಕೌಶಲ್ಯಾಭಿವೃದ್ಧಿ

  • ಯುವನಿಧಿ ಭತ್ಯೆ: ಮುಂದಿನ ಮೂರು ವರ್ಷಗಳಲ್ಲಿ ಯುವನಿಧಿ ಯೋಜನೆಯಡಿ ಒಟ್ಟು 3,08,267 ಅರ್ಹ ಫಲಾನುಭವಿಗಳಿಗೆ 913 ಕೋಟಿ ರೂ. ಮೊತ್ತದ ನಿರುದ್ಯೋಗ ಭತ್ಯೆಯನ್ನು ಪಾವತಿಸಲಾಗುವುದು.
  • ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ: ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ತಲಾ 60 ಕೋಟಿ ರೂ.ಗಳ ವೆಚ್ಚದಲ್ಲಿ 10 GTTC ಕೇಂದ್ರಗಳನ್ನು ಸ್ಥಾಪಿಸಲಾಗುವುದು.
  • ಅನ್ನಭಾಗ್ಯ ಕಿಟ್: ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲಾಗಿ ಇನ್ಮುಂದೆ ‘ಇಂದಿರಾ ಆಹಾರ ಕಿಟ್’ ವಿತರಣೆ ಮಾಡಲಾಗುವುದು.
  • ಮಹಿಳೆಯರಿಗೆ ಉಚಿತ ತರಬೇತಿ: ಐಟಿಐ (ITI) ಮಹಿಳಾ ತರಬೇತಿದಾರರಿಗೆ 1,200 ರೂ.ಗಳ ವಾರ್ಷಿಕ ಬೋಧನಾ ಶುಲ್ಕ ವಿನಾಯಿತಿ ನೀಡಲಾಗುವುದು.

ಸಾರಿಗೆ ಹಾಗೂ ಒಳಾಡಳಿತ (ಪೊಲೀಸ್)

  • ಶಕ್ತಿ ಯೋಜನೆಗೆ 5,300 ಕೋಟಿ ರೂ.: ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ಯಡಿ ಇದುವರೆಗೆ 684 ಕೋಟಿ ಟ್ರಿಪ್‌ಗಳಲ್ಲಿ ಮಹಿಳೆಯರು ಪ್ರಯಾಣಿಸಿದ್ದು, ಈ ಯೋಜನೆಯ ಮುಂದುವರಿಕೆಗಾಗಿ 5,300 ಕೋಟಿ ರೂ. ಒದಗಿಸಲಾಗಿದೆ.
  • ಹೊಸ ಬಸ್‌ಗಳ ಸೇರ್ಪಡೆ: ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 1,000 ಡೀಸೆಲ್ ಬಸ್ಸುಗಳನ್ನು ಒದಗಿಸಲಾಗುವುದು. ಅಲ್ಲದೆ, ವಿಶ್ವಬ್ಯಾಂಕ್ ನೆರವಿನ 2,000 ಕೋಟಿ ರೂ.ಗಳ ಯೋಜನೆಯಡಿ 4,000 ವಿದ್ಯುತ್ ಚಾಲಿತ (ಎಲೆಕ್ಟ್ರಿಕ್) ಬಸ್ಸುಗಳನ್ನು ಪೂರೈಸಲಾಗುವುದು.
  • ಪೊಲೀಸ್ ನೇಮಕಾತಿ: ಗೃಹ ಇಲಾಖೆಯಲ್ಲಿ ಖಾಲಿ ಇರುವ 8,000 ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. ಗೃಹ ಇಲಾಖೆ ಹುದ್ದೆಗಳ ನೇಮಕಾತಿಗಾಗಿಯೇ ಪ್ರತ್ಯೇಕ ‘ಪೊಲೀಸ್ ಮತ್ತು ಪೊಲೀಸ್ ಸಹಾಯಕ ಸೇವೆಗಳ ನೇಮಕಾತಿ ಮಂಡಳಿ’ ಸ್ಥಾಪನೆಯಾಗಲಿದೆ.
  • ಮಾದಕ ದ್ರವ್ಯ ನಿಗ್ರಹ: ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಘಟಕದ ಬಲವರ್ಧನೆಗೆ 10 ಕೋಟಿ ರೂ. ಮೀಸಲಿಡಲಾಗಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಇಂಧನ

  • ಗ್ರಾಮ ಪಂಚಾಯಿತಿಗಳ ಮರುನಾಮಕರಣ: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ‘ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ’ ಎಂದು ನಾಮಕರಣ ಮಾಡಲಾಗುವುದು.
  • ಗೃಹಜ್ಯೋತಿ ಯೋಜನೆ: ಉಚಿತ ವಿದ್ಯುತ್ ಒದಗಿಸುವ ಗೃಹಜ್ಯೋತಿ ಯೋಜನೆಗೆ ಬರೋಬ್ಬರಿ 10,578 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
  • ರೈತರಿಗೆ ವಿದ್ಯುತ್ ಸಬ್ಸಿಡಿ: 36 ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಹಾಯಧನ ಒದಗಿಸಲು 19,290 ಕೋಟಿ ರೂ. ನೀಡಲಾಗಿದೆ.

ಪ್ರವಾಸೋದ್ಯಮ, ಪರಿಸರ ಹಾಗೂ ಸಂಸ್ಕೃತಿ

  • ಅಂಜನಾದ್ರಿ ಬೆಟ್ಟ ಅಭಿವೃದ್ಧಿ: ಭಾರತ ಸರ್ಕಾರದಿಂದ ಅರಣ್ಯ ತೀರುವಳಿ ಹಾಗೂ UNESCO ಸಹಮತಿ ಪಡೆದು ಕೊಪ್ಪಳದ ಅಂಜನಾದ್ರಿ ಬೆಟ್ಟವನ್ನು ವಿಶ್ವ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು.
  • ರೋಪ್-ವೇ ನಿರ್ಮಾಣ: ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ – ಸೀತಾಳಯ್ಯನಗಿರಿಯಿಂದ ಕೈಮರದವರೆಗೆ PPP ಮಾದರಿಯಲ್ಲಿ ‘ರೋಪ್-ವೇ’ ನಿರ್ಮಿಸಲಾಗುವುದು.
  • ಗುಬ್ಬಿ ವೀರಣ್ಣ ರಂಗಮಂದಿರ: ತುಮಕೂರಿನ ಪ್ರತಿಷ್ಠಿತ ಗುಬ್ಬಿ ವೀರಣ್ಣ ರಂಗಮಂದಿರದ ಉನ್ನತೀಕರಣಕ್ಕಾಗಿ ಐದು ಕೋಟಿ ರೂ. ವೆಚ್ಚ ಮಾಡಲಾಗುವುದು.
    ಸಾಲುಮರದ ತಿಮ್ಮಕ್ಕ ಸ್ಮಾರಕ: ವೃಕ್ಷಮಾತೆ ‘ಸಾಲುಮರದ ತಿಮ್ಮಕ್ಕ’ ರವರ ಸ್ಮಾರಕವನ್ನು ನಿರ್ಮಾಣ ಮಾಡಲಾಗುವುದು.

ವಸತಿ ಮತ್ತು ಕ್ರೀಡಾ ಮೂಲಸೌಕರ್ಯ

  • ಮನೆ ನಿರ್ಮಾಣ ಸಹಾಯಧನ ಹೆಚ್ಚಳ: ರಾಜ್ಯದ ವಸತಿ ಯೋಜನೆಗಳಡಿ ಬಿಎಲ್‌ಸಿ ಆಧಾರಿತ ಒಂದು ಲಕ್ಷ ಮನೆಗಳ ಹೊಸ ಗುರಿ ಹೊಂದಲಾಗಿದೆ. ಹೊಸ ಗುರಿಯಡಿ ಆಯ್ಕೆಯಾಗುವ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ನೀಡುತ್ತಿದ್ದ ಸಹಾಯಧನವನ್ನು 2 ಲಕ್ಷ ರೂ.ಗಳಿಗೆ ಹಾಗೂ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳ ಸಹಾಯಧನವನ್ನು 3 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ.
  • ನಿವೇಶನಗಳ ವಿತರಣೆ: ‘ನಮ್ಮ ಮನೆ’ ಯೋಜನೆಯಡಿ ರಿಯಾಯಿತಿ ದರದಲ್ಲಿ 50 ಸಾವಿರ ನಿವೇಶನಗಳನ್ನು ವಿತರಿಸಲಾಗುವುದು.
  • ಹೊಸ ಕ್ರಿಕೆಟ್ ಸ್ಟೇಡಿಯಂ: ಕರ್ನಾಟಕ ಗೃಹ ಮಂಡಳಿ ವತಿಯಿಂದ ಆನೇಕಲ್ ತಾಲ್ಲೂಕಿನಲ್ಲಿ ‘ಕೆ.ಹೆಚ್.ಬಿ. ಸೂರ್ಯ ಕ್ರೀಡಾ ಗ್ರಾಮ’ ಎಂಬ ಹೆಸರಿನಲ್ಲಿ 80,000 ಆಸನ ಸಾಮರ್ಥ್ಯವುಳ್ಳ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗಲಿದೆ

ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ

  • ಬಡ್ಡಿ ಮನ್ನಾ ಯೋಜನೆ: 31.03.2021ರ ಅಂತ್ಯದವರೆಗೆ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ನಿಗಮಗಳಿಂದ ಪಡೆದ ಸಾಲದ ಅಸಲನ್ನು ಪಾವತಿಸುವವರಿಗೆ ಬಡ್ಡಿ ಮನ್ನಾ ಮಾಡುವ ‘ಒಂದಾವರ್ತಿ ತೀರುವಳಿ ಯೋಜನೆ’ ಜಾರಿಗೆ ಬರಲಿದೆ. ಈ ಎಲ್ಲಾ ನಿಗಮಗಳಿಗೆ ಒಟ್ಟಾರೆ 1,500 ಕೋಟಿ ರೂ. ಅನುದಾನ ಒದಗಿಸಲಾಗಿದೆ.
  • ಮಹರ್ಷಿ ವಾಲ್ಮೀಕಿ ಆಡಳಿತ ಸೌಧ: ಬೆಂಗಳೂರಿನ ಸುಮನಹಳ್ಳಿಯಲ್ಲಿ 50 ಕೋಟಿ ರೂ.ಗಳ ವೆಚ್ಚದಲ್ಲಿ ‘ಶ್ರೀ ಮಹರ್ಷಿ ವಾಲ್ಮೀಕಿ ಆಡಳಿತ ಸೌಧ’ ಸಂಕೀರ್ಣ ನಿರ್ಮಾಣ ಮಾಡಲಾಗುವುದು.
  • ಅಲ್ಪಸಂಖ್ಯಾತರ ಶಾಲೆಗಳ ಉನ್ನತೀಕರಣ: 100 ಮೌಲಾನಾ ಆಜಾದ್ ಮಾದರಿ ಹಾಗೂ ಉರ್ದು ಶಾಲೆಗಳನ್ನು 400 ಕೋಟಿ ರೂ.ಗಳ ವೆಚ್ಚದಲ್ಲಿ ಕೆ.ಪಿ.ಎಸ್. ಮಾದರಿಯಲ್ಲಿ ಉನ್ನತೀಕರಿಸಲಾಗುವುದು. ಜೈನ್, ಬೌದ್ಧ ಮತ್ತು ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಲಾಗಿದೆ.

ಐಟಿ-ಬಿಟಿ, ವಾಣಿಜ್ಯ ಮತ್ತು ಕೈಗಾರಿಕೆ

  • ಎರಡನೇ ಐಟಿ ಸಿಟಿ: ಮೈಸೂರು ನಗರವನ್ನು ರಾಜ್ಯದ ಎರಡನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಜೊತೆಗೆ ಮೈಸೂರು ವಿಮಾನ ನಿಲ್ದಾಣದ ಬಳಿ ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿಗೊಳ್ಳಲಿದೆ.
  • ಭಾರೀ ಹೂಡಿಕೆ ನಿರೀಕ್ಷೆ: ಇ.ಎಸ್.ಡಿ.ಎಂ (ESDM) ಮತ್ತು ಸೆಮಿಕಂಡಕ್ಟರ್ ವಲಯದಲ್ಲಿ ಬೃಹತ್ ಕಂಪನಿಗಳಿಂದ ಬರೋಬ್ಬರಿ 45 ಸಾವಿರ ಕೋಟಿ ರೂ.ಗಳ ಹೂಡಿಕೆಯನ್ನು ಅಂದಾಜಿಸಲಾಗಿದೆ.
  • ಎರಡನೇ ವಿಮಾನ ನಿಲ್ದಾಣ: ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವ ಕುರಿತು AAI ತಾಂತ್ರಿಕ ಅಭಿಪ್ರಾಯ ಪಡೆದು ಕಾರ್ಯಸಾಧ್ಯತಾ ವರದಿ ತಯಾರಿಸಲಾಗುವುದು.
  • ವಾಹನ ಸ್ಕ್ರ್ಯಾಪಿಂಗ್: KIADB ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 100 ಎಕರೆ ಪ್ರದೇಶದಲ್ಲಿ ವಾಹನ ಸ್ಕ್ಯಾಪಿಂಗ್ ಸೌಲಭ್ಯ ಘಟಕ ಸ್ಥಾಪನೆಯಾಗಲಿದೆ.

ಕಂದಾಯ ಮತ್ತು ನೋಂದಣಿ

  • ಕಾಗದರಹಿತ ನೋಂದಣಿ: 65 ಕೋಟಿ ರೂ. ವೆಚ್ಚದಲ್ಲಿ ಕಾವೇರಿ 3.0 ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಸಂಪೂರ್ಣ ಕಾಗದರಹಿತ ನೋಂದಣಿ (End to End Paperless Registration) ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.
  • ಬೃಹತ್ ಉಪ-ನೋಂದಣಿ ಕೇಂದ್ರಗಳು: ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಮಾದರಿಯಲ್ಲಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಐದು ವಿಶ್ವದರ್ಜೆಯ ಬೃಹತ್ ಉಪ-ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.
  • ವಿಪತ್ತು ನಿರ್ವಹಣೆ: ವಿಶ್ವಬ್ಯಾಂಕ್ ನೆರವಿನಿಂದ ಒಟ್ಟು 5,000 ಕೋಟಿ ರೂ. ವೆಚ್ಚದಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣ ಮತ್ತು ವಿಪತ್ತು ನಿರ್ವಹಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.

ಜಲಸಂಪನ್ಮೂಲ ಮತ್ತು ಸಣ್ಣ ನೀರಾವರಿ

  • ಎತ್ತಿನಹೊಳೆ ಹಾಗೂ ಭದ್ರಾ ಯೋಜನೆ: ಹೆಚ್ಚುವರಿ ನೀರು ಸಂಗ್ರಹಣೆಗಾಗಿ ಎತ್ತಿನಹೊಳೆ ಯೋಜನೆಯಡಿ ಕೊರಟಗೆರೆ ತಾಲ್ಲೂಕಿನ ವಡೇರಹಳ್ಳಿ ಸಮೀಪ 1.2 ಟಿ.ಎಂ.ಸಿ. ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಿಸಲಾಗುವುದು. ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಿ 157 ಕೆರೆಗಳನ್ನು ತುಂಬಿಸಲು ಕ್ರಮಕೈಗೊಳ್ಳಲಾಗುವುದು.
  • UKP-III ಪರಿಹಾರ ಹೆಚ್ಚಳ: UKP-III ಯೋಜನೆಯಡಿ ಮುಳುಗಡೆಯಾಗುವ ಖುಷ್ಕಿ ಜಮೀನಿಗೆ ಎಕರೆಗೆ 30 ಲಕ್ಷ ರೂ. ಹಾಗೂ ತರಿ ಜಮೀನಿಗೆ ಎಕರೆಗೆ 40 ಲಕ್ಷ ರೂ. ನಿಗದಿಪಡಿಸಲಾಗಿದೆ.
  • ವೃಷಭಾವತಿ ವ್ಯಾಲಿ: 650 ಕೋಟಿ ರೂ. ಮೊತ್ತದಲ್ಲಿ ವೃಷಭಾವತಿ ವ್ಯಾಲಿಯಡಿ ದ್ವಿತೀಯ ಹಂತದ ಕೆರೆ ತುಂಬಿಸುವ ಯೋಜನೆ ಅನುಷ್ಠಾನಗೊಳ್ಳಲಿದೆ.

ಸಹಕಾರ, ಪಶುಸಂಗೋಪನೆ ಮತ್ತು ಮೀನುಗಾರಿಕೆ

  • ಶೂನ್ಯ ಬಡ್ಡಿದರದಲ್ಲಿ ಸಾಲ: ರಾಜ್ಯದ 38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಬರೋಬ್ಬರಿ 30,000 ಕೋಟಿ ರೂ.ಗಳ ಕೃಷಿ ಸಾಲ ವಿತರಣೆಯ ಗುರಿ ಹೊಂದಲಾಗಿದೆ.
  • ಹಸು/ಕುರಿ ಖರೀದಿಗೆ ಸಹಾಯಧನ: ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಕುರಿ/ಮೇಕೆ ಮತ್ತು ಹಸು/ಎಮ್ಮೆ ಖರೀದಿಗೆ ತಲಾ 10,000 ಫಲಾನುಭವಿಗಳಿಗೆ ಶೇ. 25 ರಷ್ಟು ಸಹಾಯಧನ ನೀಡಲಾಗುವುದು.
  • ಶ್ವಾನ ಸಂತಾನ ನಿಯಂತ್ರಣ ಕೇಂದ್ರ: ಬೆಂಗಳೂರು ಹಾಗೂ ಬೀದರ್‌ನಲ್ಲಿ “ಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರ” ಸ್ಥಾಪನೆಯಾಗಲಿದೆ.
    ಮೀನುಗಾರರಿಗೆ ಕಿಟ್: ಮೀನುಗಾರರಿಗೆ ಉಚಿತವಾಗಿ ಸರಬರಾಜು ಮಾಡುವ ಸಲಕರಣೆ ಕಿಟ್‌ನ ಘಟಕ ವೆಚ್ಚವನ್ನು 20,000 ರೂ.ಗಳಿಗೆ ಹೆಚ್ಚಿಸಲಾಗಿದೆ.

ಮುಜರಾಯಿ, ವಾರ್ತಾ ಮತ್ತು ಕಾನೂನು

  • ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ನೆರವು: ಶ್ರೀ ಮಾತಾ ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ತಲಾ 5,000 ರೂ.ಗಳ ಸಹಾಯಧನ ನೀಡಲಾಗುವುದು.
  • ದೇವಾಲಯ ಅಭಿವೃದ್ಧಿ ಪ್ರಾಧಿಕಾರ: ‘ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ’ ಮತ್ತು ‘ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ’ಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರಗಳನ್ನು ರಚಿಸಲಾಗುವುದು.
  • ಪುಟ್ಟಣ್ಣ ಕಣಗಾಲ್ ಮ್ಯೂಸಿಯಂ: ದಿವಂಗತ ಪುಟ್ಟಣ್ಣ ಕಣಗಾಲ್‌ರವರ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ರೂಪಿಸಲಾಗುವುದು.
  • ಏಕಗವಾಕ್ಷಿ ‘ಸಿನಿ ಮಿತ್ರ’: ಚಲನಚಿತ್ರ ಚಿತ್ರೀಕರಣಗಳಿಗೆ ಅಗತ್ಯವಿರುವ ಅನುಮತಿಗಳನ್ನು ತ್ವರಿತವಾಗಿ ನೀಡಲು ‘ಸಿನಿ ಮಿತ್ರ’ ಎಂಬ ಡಿಜಿಟಲ್ ಏಕಗವಾಕ್ಷಿ ವ್ಯವಸ್ಥೆ ತರಲಾಗುತ್ತಿದೆ.
  • ಕಾನೂನುಗಳ ಕನ್ನಡೀಕರಣ: ಕೇಂದ್ರದ ಎಲ್ಲಾ ಕಾನೂನುಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಯೋಜನೆ ಮತ್ತು ಕಲ್ಯಾಣ ಕರ್ನಾಟಕ

  • ಕಲ್ಯಾಣ ಕರ್ನಾಟಕಕ್ಕೆ 5,000 ಕೋಟಿ: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ 5,000 ಕೋಟಿ ರೂ.ಗಳ ವಿವೇಚನಾ ಮತ್ತು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಒಟ್ಟು 4,291 ಕೋಟಿ ರೂ. ಮೀಸಲಿಡಲಾಗಿದೆ.

ಲೋಕೋಪಯೋಗಿ (ರಸ್ತೆ ಮತ್ತು ಸೇತುವೆಗಳ ನಿರ್ಮಾಣ)

  • ಸೇತುವೆಗಳಿಗೆ ಬೃಹತ್ ಅನುದಾನ: ಮುಂದಿನ ಎರಡು ವರ್ಷಗಳಲ್ಲಿ 2,000 ಕೋಟಿ ರೂ. ಮೊತ್ತದಲ್ಲಿ ಸೇತುವೆಗಳನ್ನು ನಿರ್ಮಾಣ ಮಾಡಲಾಗುವುದು.
  • ಮಲೆನಾಡು ಮತ್ತು ಕರಾವಳಿಗೆ ಆದ್ಯತೆ: ಮಲೆನಾಡು ಮತ್ತು ಕರಾವಳಿ ಪ್ರದೇಶದ ಜನವಸತಿಗಳಿಗೆ ಸುಲಭ ಸಂಪರ್ಕ ಕಲ್ಪಿಸಲು 300 ಫುಟ್ ಬ್ರಿಡ್ಜ್ (Foot bridge) ಗಳ ನಿರ್ಮಾಣ ಮಾಡಲಾಗುವುದು.
  • ರಾಜ್ಯ ಹೆದ್ದಾರಿಗಳ ಅಭಿವೃದ್ಧಿ: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ (ಹಂತ-5 ಘಟ್ಟ-2) 5,000 ಕೋಟಿ ರೂ. ಮೊತ್ತದಲ್ಲಿ 1846 ಕಿ.ಮೀ ರಸ್ತೆಯ ಅಭಿವೃದ್ಧಿ ಮಾಡಲಾಗುವುದು. ಇದರ ಜೊತೆಗೆ ಎಡಿಬಿ (ADB) ನೆರವಿನೊಂದಿಗೆ 5,736 ಕೋಟಿ ರೂ. ವೆಚ್ಚದಲ್ಲಿ 875 ಕಿ.ಮೀ ರಸ್ತೆ ನಿರ್ಮಾಣಕ್ಕೆ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ.

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ

  • ಮಾನವ-ವನ್ಯಪ್ರಾಣಿ ಸಂಘರ್ಷಕ್ಕೆ ಬ್ರೇಕ್: ಕಾಡುಪ್ರಾಣಿಗಳ ಹಾವಳಿ ಹಾಗೂ ಸಂಘರ್ಷ ನಿವಾರಣಾ ಕಾರ್ಯತಂತ್ರ ಯೋಜನೆಗೆ ಮುಂದಿನ ಐದು ವರ್ಷಗಳಲ್ಲಿ 1,500 ಕೋಟಿ ರೂ. ವೆಚ್ಚ ಮಾಡಲಾಗುವುದು.
  • ಚಿರತೆ ಪುನರ್ವಸತಿ ಕೇಂದ್ರ: 5 ಕೋಟಿ ರೂ. ವೆಚ್ಚದಲ್ಲಿ ಬನ್ನೇರುಘಟ್ಟದಲ್ಲಿ ‘ಚಿರತೆ ಪುನರ್ವಸತಿ ಕೇಂದ್ರ’ ಸ್ಥಾಪನೆಯಾಗಲಿದೆ.
  • ಬಸವಣ್ಣ ಜೈವಿಕ ಉದ್ಯಾನ & ಅರಣ್ಯೀಕರಣ: ಬೆಂಗಳೂರಿನ ಮಾದಪ್ಪನಹಳ್ಳಿಯಲ್ಲಿ ‘ಸಾಂಸ್ಕೃತಿಕ ನಾಯಕ ಬಸವಣ್ಣ ಜೈವಿಕ ವೈವಿಧ್ಯ ಉದ್ಯಾನ’ ನಿರ್ಮಾಣವಾಗಲಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಮಾರು 75,000 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಕಾರ್ಯ ಹಮ್ಮಿಕೊಳ್ಳಲಾಗುವುದು.
  • ನೇಮಕಾತಿ: ಅರಣ್ಯ ಇಲಾಖೆಯಲ್ಲಿನ ವಿವಿಧ ವೃಂದಗಳಲ್ಲಿನ 2,000 ಹುದ್ದೆಗಳನ್ನು ಭರ್ತಿ ಮಾಡಲಾಗುವುದು

ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರು

  • ಮಹಾತ್ಮಾ ಗಾಂಧಿ ನಗರ ವಿಕಾಸ: ರಾಯಚೂರು, ಬೀದರ್ ಮತ್ತು ಹಾಸನ ಮಹಾನಗರ ಪಾಲಿಕೆಗಳಿಗೆ ‘ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ 2.0’ ರಡಿ ತಲಾ 200 ಕೋಟಿ ರೂ. ಅನುದಾನ ಒದಗಿಸಲಾಗಿದೆ.
  • ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್: ಧಾರವಾಡದಲ್ಲಿ ನಾಲ್ಕು ಮತ್ತು ಬೆಂಗಳೂರಿನಲ್ಲಿ ಎರಡು ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲಾಗುವುದು.
  • ನರೇಗಾ (MGNREGA) ಹೋರಾಟ: ನರೇಗಾ ಯೋಜನೆಯನ್ನು ಪುನಃಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗುವುದು. ಅಗತ್ಯವಿದ್ದಲ್ಲಿ ಕಾನೂನು ಹೋರಾಟ ಮಾಡಲು ಸರ್ಕಾರ ಮುಂದಾಗಿದೆ.
  • ಜಲ ಜೀವನ್ ಮಿಷನ್: ಈ ಯೋಜನೆಯಡಿ 69,488 ಕೋಟಿ ರೂ. ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಪ್ರಸಕ್ತ ಸಾಲಿಗೆ 10,433 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಆಡಳಿತ ಸುಧಾರಣೆ, ಇ-ಆಡಳಿತ ಮತ್ತು ಖಜಾನೆ

  • AI ಆಧಾರಿತ ಹಾಜರಾತಿ: ಆಡಳಿತದಲ್ಲಿ ಪಾರದರ್ಶಕತೆ ತರಲು ಎಲ್ಲಾ ಅಂಗನವಾಡಿಗಳು, ಶಾಲಾ-ಕಾಲೇಜುಗಳು ಹಾಗೂ ವಸತಿ ನಿಲಯಗಳಲ್ಲಿ AI ಆಧಾರಿತ ಫೇಶಿಯಲ್ ರೆಕಗ್ನಿಷನ್ (Facial Recognition) ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು.
  • ವೇತನ ಮತ್ತು ಪಿಂಚಣಿ ಸುಧಾರಣೆ: ಹೊಸದಾಗಿ ಸರ್ಕಾರಿ ಸೇವೆಗೆ ಸೇರಿದ ನೌಕರರ ವೇತನ ಪ್ರಕ್ರಿಯೆಯನ್ನು ಕೇವಲ ಒಂದು ವಾರದೊಳಗೆ ಬಗೆಹರಿಸಲಾಗುವುದು. ಪಿಂಚಣಿ ದಾಖಲೆಗಳ ಡಿಜಿಟಲ್ ಸಲ್ಲಿಕೆ ಮತ್ತು ಟ್ರ್ಯಾಕಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ.
  • ಸ್ಮಾರ್ಟ್ ಅನ್ನವಾಣಿ: ಆಹಾರ ಇಲಾಖೆಯ ಸಹಾಯವಾಣಿ 1967 ವ್ಯವಸ್ಥೆಯನ್ನು AI ಆಧಾರಿತ ‘Smart Annavani’ ಯನ್ನಾಗಿ ಪರಿವರ್ತನೆ ಮಾಡಲಾಗುವುದು.

ಯುವಸಬಲೀಕರಣ ಮತ್ತು ಕ್ರೀಡೆ

  • ಕಯಾಕಿಂಗ್ ಕೇಂದ್ರ: ಬೆಂಗಳೂರಿನ ಹೆಸರಘಟ್ಟ ಕೆರೆಯಲ್ಲಿ ಪಿಪಿಪಿ ಮಾದರಿಯಲ್ಲಿ Kayaking, Canoeing Centre of Excellence ಅನ್ನು ಪ್ರಾರಂಭಿಸಲಾಗುವುದು.
  • ರಾಷ್ಟ್ರಮಟ್ಟದ ಮ್ಯಾರಾಥಾನ್: ‘ಸಶಕ್ತ ಕರ್ನಾಟಕ’ದಡಿ ಬೆಳಗಾವಿ, ಗೋಕರ್ಣ, ಚಿತ್ರದುರ್ಗ ಮತ್ತು ಹಂಪಿಯಲ್ಲಿ ರಾಷ್ಟ್ರಮಟ್ಟದ ಮ್ಯಾರಾಥಾನ್ ಆಯೋಜಿಸಲಾಗುವುದು.

ತೋಟಗಾರಿಕೆ ಮತ್ತು ರೇಷ್ಮೆ ಕೃಷಿ

  • ಶೀತಲಗೃಹಗಳ ನಿರ್ಮಾಣ: ತೋಟಗಾರಿಕೆ ಉತ್ಪನ್ನಗಳಿಗಾಗಿ 64 ಕೋಟಿ ರೂ.ಗಳಲ್ಲಿ 12,000 ಮೆಟ್ರಿಕ್ ಟನ್ ಸಾಮರ್ಥ್ಯದ ಎರಡು ಶೀತಲಗೃಹಗಳ ನಿರ್ಮಾಣ ಮಾಡಲಾಗುವುದು.
  • ರೋಗ ನಿಯಂತ್ರಣಕ್ಕೆ ಅನುದಾನ: ಅಡಿಕೆ ಮತ್ತು ತೆಂಗು ಬೆಳೆಗಳಲ್ಲಿ ಸಮುದಾಯ ಆಧಾರಿತ ರೋಗ-ಕೀಟ ನಿಯಂತ್ರಣ ಕ್ರಮಗಳಿಗಾಗಿ 10 ಕೋಟಿ ರೂ. ಒದಗಿಸಲಾಗಿದೆ.
  • ರೇಷ್ಮೆ ಬೆಳೆಗಾರರಿಗೆ ಬಂಪರ್: ಉತ್ತರ ಕರ್ನಾಟಕದಲ್ಲಿ ಬೆಳೆಯುವ ರೇಷ್ಮೆಗೂಡುಗಳನ್ನು ಎಲ್ಲಾ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪ್ರತಿ ಕೆ.ಜಿ. ಗೂಡಿನ ಸಾಗಾಣಿಕಾ ವೆಚ್ಚವನ್ನು 20 ರೂ. ಗೆ ಹೆಚ್ಚಿಸಲಾಗಿದೆ.
  • ಹೊಸ ಸಿಲ್ಕ್ ಪಾರ್ಕ್‌ಗಳು: ರಾಮನಗರ, ಶಿಡ್ಲಘಟ್ಟ, ಹಾವೇರಿ, ತಾಂಡವಪುರ ಹಾಗೂ ಕಲಬುರಗಿಯಲ್ಲಿ ಸಿಲ್ಕ್ ಪಾರ್ಕ್‌ಗಳ (Silk Parks) ಸ್ಥಾಪನೆ ಮಾಡಲಾಗುವುದು. ತೋಟಗಾರಿಕಾ ಇಲಾಖೆಯ ಕ್ಷೇತ್ರಗಳಲ್ಲಿ ಮತ್ತು ನರ್ಸರಿಗಳಲ್ಲಿ PPP ಮಾದರಿಯಲ್ಲಿ ತೋಟಗಾರಿಕೆ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಮಾಡಲಾಗುವುದು.

ಮೂಲಸೌಕರ್ಯ ಮತ್ತು ವಿಮಾನಯಾನ

  • ದೇಶೀಯ ವಿಮಾನ ನಿಲ್ದಾಣಗಳ ಅಭಿವೃದ್ಧಿ: ರಾಜ್ಯದಲ್ಲಿನ ಏಳು ದೇಶೀಯ ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ 200 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
  • ಫ್ಲೈಟ್ ಟ್ರೈನಿಂಗ್ & ವಿಮಾನ ಜೋಡಣೆ: ವಿಜಯಪುರ ವಿಮಾನ ನಿಲ್ದಾಣದ ಆವರಣದಲ್ಲಿ ಫ್ಲೈಟ್ ಟ್ರೈನಿಂಗ್ ಸ್ಕೂಲ್ (Flight Training School) ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣದ ಆವರಣದಲ್ಲಿ ವಿಮಾನಗಳ ತಯಾರಿಕೆ/ಜೋಡಣಾ ಘಟಕ (Manufacturing/Assembly of Aircraft) ಸ್ಥಾಪಿಸಲಾಗುವುದು.
  • ರೈಲ್ವೆ ಯೋಜನೆಗಳು: ರಾಜ್ಯದಲ್ಲಿ ರೈಲ್ವೆ ಮಾರ್ಗಗಳ ಅಭಿವೃದ್ಧಿಗೆ 600 ಕೋಟಿ ರೂ. ಹಾಗೂ BSRP ಯೋಜನೆಯಡಿ 2 ಮತ್ತು 4 ಕಾರಿಡಾರ್ ಗಳನ್ನು ಪೂರ್ಣಗೊಳಿಸಲು 500 ಕೋಟಿ ರೂ. ನೀಡಲಾಗಿದೆ. ಬೈಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ದ್ವಿಪಥೀಕರಣ ಕಾಮಗಾರಿಗೆ 100 ಕೋಟಿ ರೂ. ಒದಗಿಸಲಾಗಿದೆ.

ಕೈಗಾರಿಕೆ, ಜವಳಿ ಮತ್ತು ಕಬ್ಬು ಬೆಳೆಗಾರರು

  • ಕೈಗಾರಿಕಾ ಕಾರಿಡಾರ್: ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ಯೋಜನೆಗೆ ಬರೋಬ್ಬರಿ 600 ಕೋಟಿ ರೂ. ಮೀಸಲಿಡಲಾಗಿದೆ.
  • ನೇಕಾರರಿಗೆ ನೆರವು: ನೇಕಾರರ ಆರ್ಥಿಕ ಸ್ವಾವಲಂಬನೆಗೆ ಒಟ್ಟಾರೆಯಾಗಿ 225 ಕೋಟಿ ರೂ. ಮೀಸಲಿಡಲಾಗಿದ್ದು, ಸಹಕಾರಿ ನೂಲಿನ ಗಿರಣಿಗಳನ್ನು ಪ್ರೋತ್ಸಾಹಿಸಲು ಪ್ರತಿ ಯೂನಿಟ್‌ಗೆ 3 ರೂ.ರಂತೆ ವಿದ್ಯುತ್ ಸಹಾಯಧನ ನೀಡಲಾಗುವುದು. ಕಲಬುರಗಿಯಲ್ಲಿ ಪಿ.ಎಂ. ಮಿತ್ರ ಮೆಗಾ ಜವಳಿ ಪಾರ್ಕ್‌ಗೆ 75 ಕೋಟಿ ರೂ. ಅನುದಾನ ಒದಗಿಸಲಾಗಿದೆ.
  • ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹಧನ: 2025-26 ಸಾಲಿನ ಸಕ್ಕರೆ ಹಂಗಾಮಿನಲ್ಲಿ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 50 ರೂ.ಗಳ ಸಹಾಯಧನ ಘೋಷಿಸಲಾಗಿದ್ದು, ಒಟ್ಟಾರೆಯಾಗಿ 300 ಕೋಟಿ ರೂ. ಒದಗಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ, ವಿಜ್ಞಾನ-ತಂತ್ರಜ್ಞಾನ

  • ಹೊಸ ಅಕಾಡೆಮಿ & ಪ್ರತಿಷ್ಠಾನ: ಹವ್ಯಕ ಭಾಷಾ ಅಕಾಡೆಮಿ ಸ್ಥಾಪಿಸಲಾಗುವುದು. ಸಂತ ಶಿಶುನಾಳ ಶರೀಫ ಹಾಗೂ ವೀರರಾಣಿ ಬೆಳವಡಿ ಮಲ್ಲಮ್ಮ ಇವರ ಹೆಸರಿನಲ್ಲಿ ಪ್ರತ್ಯೇಕ ಪ್ರತಿಷ್ಠಾನ ಸ್ಥಾಪನೆ ಮಾಡಲಾಗುವುದು.
  • ಸಾಂಸ್ಕೃತಿಕ ಕಾರ್ಯಕ್ರಮಗಳು: ‘ಬೆಂಗಳೂರು ಹಬ್ಬ’ ಸಹಯೋಗದೊಂದಿಗೆ ಕಾರ್ಯಕ್ರಮಗಳ ಆಯೋಜನೆಗೆ ಐದು ಕೋಟಿ ರೂ. ಹಾಗೂ ‘ಜಾನಪದ ಸಂಗಮ’ ಸಮಾವೇಶಕ್ಕೆ ಎರಡು ಕೋಟಿ ರೂ. ನೀಡಲಾಗಿದೆ. ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪರವರ ಜನ್ಮಶತಮಾನೋತ್ಸವ ಕಾರ್ಯಕ್ರಮಗಳಿಗೆ ಎರಡು ಕೋಟಿ ರೂ. ಮೀಸಲಿಡಲಾಗಿದೆ.
  • ಹೊಸ ತಾರಾಲಯಗಳು: ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಯಾದಗಿರಿ, ಕೊಪ್ಪಳ ಹಾಗೂ ಬೀದರ್ ಜಿಲ್ಲೆಗಳಲ್ಲಿ ಒಟ್ಟು 24 ಕೋಟಿ ರೂ. ವೆಚ್ಚದಲ್ಲಿ ಆರು ಹೊಸ ತಾರಾಲಯಗಳನ್ನು (Planetariums) ಸ್ಥಾಪಿಸಲಾಗುವುದು.

ಪಂಚಾಯತ್ ರಾಜ್ ಮತ್ತು ಸ್ಥಳೀಯ ಸಂಸ್ಥೆಗಳು

  • ಅನುದಾನ ಹಂಚಿಕೆ ಹೆಚ್ಚಳ: ಐದನೇ ರಾಜ್ಯ ಹಣಕಾಸು ಆಯೋಗದ ವರದಿ ಆಧಾರದಲ್ಲಿ ಸ್ಥಳೀಯ ಸಂಸ್ಥೆಗಳ ಹಂಚಿಕೆಯನ್ನು ಶೇ. 48 ರಿಂದ ಶೇ. 50 ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ ಶೇ. 35 ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಾಗೂ ಶೇ. 15 ನಗರ ಸ್ಥಳೀಯ ಸಂಸ್ಥೆಗಳಿಗೆ ಹಂಚಿಕೆಯಾಗಲಿದೆ.
  • ಸೌರ ವಿದ್ಯುತ್ ಯೋಜನೆ: ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (PPP) Solar Micro Grid ಸ್ಥಾಪಿಸುವ ‘ಅನಂತ’ ಯೋಜನೆ ಅನುಷ್ಠಾನ ಮಾಡಲಾಗುವುದು.