ಬೆಂಗಳೂರು: ರಾಜ್ಯದಲ್ಲಿ ಅಪರಾಧ ಕೃತ್ಯಗಳಲ್ಲಿ ಪೊಲೀಸರೇ ಭಾಗಿಯಾಗಿ, ಇಲಾಖೆಗೆ ಕೆಟ್ಟ ಹೆಸರು ತರುವಂತ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ಹಿನ್ನಲೆಯಲ್ಲಿ ಇವುಗಳನ್ನು ನಿಯಂತ್ರಿಸಲು ಖಡಕ್ ಆದೇಶವನ್ನು ಡಿಜಿ ಮತ್ತು ಐಜಿಪಿ ಸಲೀಂ ಮಾಡಿದ್ದಾರೆ. ಅದರಂತೆ ಇನ್ಮುಂದೆ ರಾಜ್ಯದಲ್ಲಿ ಅಪರಾಧ ಪ್ರಕರಣಗಳಲ್ಲಿ ಸಿಕ್ಕಿಬಿದ್ರೆ, ಕಾನೂನು ಕ್ರಮ ಫಿಕ್ಸ್ ಆದಂತೆ ಆಗಿದೆ.
ಈ ಕುರಿತಂತೆ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾ ನಿರೀಕ್ಷಕರಾದಂತ ಡಾ.ಎಂ.ಎ ಸಲೀಂ ಅವರು ಆದೇಶ ಹೊರಡಿಸಿದ್ದು, ಇತ್ತೀಚೆಗೆ ಕೆಲವು ದರೋಡೆ, ಕಳ್ಳತನ ಮತ್ತು ವಂಚನೆ ಕೃತ್ಯಗಳಲ್ಲಿ ಕೆಲವು ಪೊಲೀಸ್ ಸಿಬ್ಬಂದಿಯವರುಗಳ ಹೆಸರುಗಳು ತಳಕು ಹಾಕಿಕೊಂಡಿರುವುದು ತೀರಾ ಕಳವಳಕಾರಿ ಬೆಳವಣಿಗೆಯಾಗಿದೆ. ಇಂತಹ ಪ್ರವೃತ್ತಿಗಳು ಪೊಲೀಸ್ ಇಲಾಖೆಯ ಮೇಲಿನ ವಿಶ್ವಾಸಾರ್ಹತೆಗೆ ಧಕ್ಕೆಯಾಗುವುದರೊಂದಿಗೆ ಇಲಾಖೆಯನ್ನು ಅಪಕೀರ್ತಿಗೆ ಗುರಿ ಮಾಡುತ್ತವೆ ಎಂಬುದಾಗಿ ಹೇಳಿದ್ದಾರೆ.
ಇದನ್ನು ಮಿಸ್ ಮಾಡದೇ ಓದಿ: ‘ಅಟಲ್ ಜೀ ಜನಸ್ನೇಹಿ ಕೇಂದ್ರʼಗಳಲ್ಲಿ ಈ ಎಲ್ಲಾ ಸೇವೆಗಳು ಲಭ್ಯ.!
ಈ ರೀತಿಯ ದುಷ್ಕೃತ್ಯಗಳು ಸಾರ್ವಜನಿಕರಿಗೆ ಪೊಲೀಸರ ಮೇಲಿನ ನಂಬಿಕೆಯನ್ನು ಕುಂದಿಸುವುದಲ್ಲದೆ, ಕಾನೂನು ಜಾರಿಯ ಸಂಪೂರ್ಣ ವ್ಯವಸ್ಥೆಯ ಮೂಲ ಸಿದ್ಧಾಂತಗಳನ್ನೇ ಸಂಶಯಾಸ್ಪದವಾಗಿ ನೋಡುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡುತ್ತದೆ. ಆದ್ದರಿಂದ ಇಂತಹ ಘಟನೆಗಳನ್ನು ಸಮರ್ಥವಾಗಿ ತಡೆಗಟ್ಟಿ, ಹೊಣೆಗಾರಿಕೆಯನ್ನು ನಿಗಧಿಪಡಿಸುವ ಮೂಲಕ ಪೊಲೀಸ್ ಇಲಾಖೆಯ ಸಮಗ್ರತೆಯನ್ನು ಪುನರ್ನಿಮಿ್ರಸುವ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದಿದ್ದಾರೆ.

ಇತ್ತೀಚೆಗೆ ದಾವಣಗೆರೆಯಲ್ಲಿ ಒಬ್ಬ ಚಿನ್ನದ ವ್ಯಾಪಾರಿಯ ಮೇಲೆ ದರೋಡೆ ನಡೆಸಿದ ಆರೋಪದಲ್ಲಿ ಇಬ್ಬರು ಪೊಲೀಸ್ ಉಪನಿರೀಕ್ಷಕರನ್ನು ದಸ್ತಗಿರಿ ಮಾಡಲಾಗಿದೆ. ಅವರು ಸಂತ್ರಸ್ತ ವ್ಯಕ್ತಿಗೆ ತಾವಿಬ್ಬರೂ ಐಜಿ ಸ್ಯಾಡ್ ಅಧಿಕಾರಿಗಳೆಂದು ಸುಳ್ಳು ಹೇಳಿ, ಬಸ್ ನಿಲ್ದಾಣದಲ್ಲಿ ಆತನನ್ನು ವಶಕ್ಕೆ ಪಡೆದುಕೊಂಡು, ನಕಲಿ ಬಂದೂಕಿನಿಂದ ಸಂತ್ರಸ್ತ ವ್ಯಕ್ತಿಯನ್ನು ಬೆದರಿಸಿ, ಆತನಿಂದ ಸುಮಾರು 80 ಗ್ರಾಂ ಬೆಲೆಬಾಳುವ ಚಿನ್ನಾಭರಣಗಳನ್ನು ದೋಚಿ, ನಂತರ ಅದೇ ಬಸ್ ನಿಲ್ದಾಣದಲ್ಲಿ ಆತನನ್ನು ಬಿಟ್ಟು ಹೋಗಿರುತ್ತಾರೆ. ಸಂತ್ರಸ್ತ ವ್ಯಕ್ತಿಯ ಆಪ್ತ ವಲಯದ ಅಕ್ಕಸಾಲಿಗರೊಬ್ಬರ ಸಹಾಯದೊಂದಿಗೆ ಒಳಸಂಚು ರೂಪಿಸುವ ಮೂಲಕ ಈ ದರೋಡೆಯನ್ನು ಯೋಜಿತವಾಗಿತ್ತು ಎನ್ನಲಾಗಿದೆ.

ಬೆಂಗಳೂರು ನಗರದಲ್ಲಿ ನಗದು ನಿರ್ವಹಣಾ ಸೇವೆಯ (ಕ್ಯಾಷ್ ಮ್ಯಾನೇಜ್‌ಮೆಂಟ್ ಸರ್ವಿಸಸ್) ಮಾಜಿ ಸಿಬ್ಬಂದಿಯೊಂದಿಗೆ ಅತ್ಯಂತ ಕರಾರುವಕ್ಕಾಗಿ ಒಳಸಂಚು ರೂಪಿಸಿ ಕೋಟ್ಯಂತರ ರೂಪಾಯಿಗಳ ದರೋಡೆ ಮಾಡಿರುವ ಪ್ರಕರಣದಲ್ಲಿ ಬೆಂಗಳೂರು ನಗರದ ಗೋವಿಂದಪುರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಒಬ್ಬಾತನನ್ನು ಬಂಧಿಸಲಾಗಿದೆ. ಅತ್ಯಂತ ಎಚ್ಚರಿಕೆಯಿಂದ ಒಳಸಂಚು ರೂಪಿಸಿ, ಅತಿ ಹೆಚ್ಚು ಮೌಲ್ಯದ ನಗದು ದರೋಡೆ ಕೃತ್ಯದಲ್ಲಿ ಪೊಲೀಸರ ಸಹಭಾಗಿತ್ವವಿರುವ ಈ ಪ್ರಕರಣವು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುತ್ತದೆ ಎಂದು ಹೇಳಿದ್ದಾರೆ.

ಅದೇ ರೀತಿ ಬಿ.ಪಿ.ಒ ಸಂಸ್ಥೆಯ ಮ್ಯಾನೇಜರ್‌ನ ಅಪಹರಣ, ಹಣದ ಸುಲಿಗೆ ಯತ್ನದ ಪ್ರಕರಣದಲ್ಲಿ ಮಾಲೂರಿನ ಹೆಡ್ ಕಾನ್ಸ್ಟೇಬಲ್ ಒಬ್ಬರನ್ನು ಶಂಕಿಸಿ, ಆತನನ್ನು ದಸ್ತಗಿರಿ ಮಾಡಲಾಗಿದೆ.
ಇಂತಹ ಅಪರಾಧ ಪ್ರಕರಣಗಳಲ್ಲಿ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ಪೊಲೀಸರು ಒಳಗೊಂಡಿರುವುದು ಯಾವುದೇ ಕಾರಣಕ್ಕೂ ಒಪ್ಪಲಾಗದು. ಇಡೀ ಪೊಲೀಸ್ ಇಲಾಖೆಯ ಅಪಕೀರ್ತಿಗೆ ಕಾರಣವಾಗುವ ಇಂತಹ ಸನ್ನಿವೇಶಗಳು ಸಾರ್ವಜನಿಕರಲ್ಲಿ ಪೊಲೀಸರ ಮೇಲಿನ ವಿಶ್ವಾಸಾರ್ಹತೆಗೆ ತೀವ್ರತರವಾದ ಹಾನಿ ಮಾಡುತ್ತವೆ ಮತ್ತು ಕಾನೂನು ಜಾರಿಯ ಸಂಪೂರ್ಣ ವ್ಯವಸ್ಥೆಯ ಮೂಲ ಸಿದ್ಧಾಂತಗಳನ್ನೇ ಸಂಶಯಾಸ್ಪದವಾಗಿ ನೋಡುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡುತ್ತದೆ. ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಪೊಲೀಸ್ ಇಲಾಖೆಯ ಪ್ರತಿಯೊಬ್ಬ ಅಧಿಕಾರಿ/ಸಿಬ್ಬಂದಿಯವರುಗಳಿಗೆ ತೀವ್ರತರವಾದ ಶಿಸ್ತಿನ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಕಠಿಣ ಎಚ್ಚರಿಕೆಯನ್ನು ಈ ಜ್ಞಾಪನದ ಮೂಲಕ ನೀಡಲಾಗಿದೆ.
ಘಟಕಾಧಿಕಾರಿಗಳು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವುದು:-
- ಘಟಕದ ಎಲ್ಲಾ ಅಧಿಕಾರಿಗಳು ಅಧೀನದ ಪೊಲೀಸ್ ಅಧಿಕಾರಿ/ಸಿಬ್ಬಂದಿಯವರುಗಳ ಪೂರ್ವಾಪರಗಳ ಪರಿಶೀಲನೆ ಮತ್ತು ಸಮಗ್ರತೆಯ ಮೌಲ್ಯಮಾಪನಗಳನ್ನು ನಿಯತವಾಗಿ ನಡೆಸುವುದು.
- ನೈತಿಕ ಮಾನದಂಡಗಳು, ಕಾನೂನುಬದ್ಧ ಕರ್ತವ್ಯಗಳು, ಮತ್ತು ಭ್ರಷ್ಟಾಚಾರ/ಅಪರಾಧಗಳ ಗಂಭೀರ ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
- ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರುಗಳ ದುರ್ವತ್ರನೆ, ಅಕ್ರಮ ಚಟುವಟಿಕೆಗಳು ಹಾಗೂ ಅಪರಾಧಿಕ ಕೃತ್ಯಗಳಲ್ಲಿ ತೊಡಗಿರುವ ಮಾಹಿತಿಗಳನ್ನು ತಕ್ಷಣವೇ ಪೊಲೀಸ್ ಪ್ರಧಾನ ಕಛೇರಿಗೆ ವರದಿ ಮಾಡುವುದು.
- ಇಲಾಖೆಯ ಘನತೆಯನ್ನು ಕಾಪಾಡುವ ಹೊಣೆಗಾರಿಕೆ ಮತ್ತು ಸಮಗ್ರತೆಯ ಸಂಸ್ಕೃತಿಯು ಎಲ್ಲಾ ಹಂತದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರುಗಳ ಸಮಾನ ಹೊಣೆಗಾರಿಕೆ ಎಂಬುದನ್ನು ಸಾರಿ ಹೇಳುವುದು.
- ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರುಗಳ ಮನೋಬಲ ಕಗ್ಗುವಿಕೆಯನ್ನು ಮತ್ತು ಇತರ ನೈತಿಕ ಲೋಪದೋಷಗಳಿಗೆ ಕಾರಣವಾಗುವ ಅಂಶಗಳಿಗೆ ಸೂಕ್ತವಾಗಿ ಮತ್ತು ಸೂಕ್ಷ್ಮವಾಗಿ ಸ್ಪಂದಿಸಿ, ಪರಿಹರಿಸಲು ಅಗತ್ಯ ಮಾರ್ಗದರ್ಶನ ಮತ್ತು ಸಲಹಾ ಕಾರ್ಯಕ್ರಮಗಳನ್ನು ಉತ್ತೇಜಿಸುವುದು.
- ಪ್ರಸ್ತುತ ಜಾರಿಯಲ್ಲಿರುವ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು ಮತ್ತು ಈ ಸಂಹಿತೆಯ ಅಡ್ಡದಾರಿಗಳಿಗೆ ಆಸ್ಪದವಾಗದಂತೆ ಕ್ರಮವಹಿಸುವುದು.
- ಇಲಾಖೆಯಲ್ಲಿ ದುರ್ನಡತೆಯನ್ನು ತಡೆಯುವ ಮೇಲ್ಕಂಡ ಎಲ್ಲಾ ಕ್ರಮಗಳನ್ನು ಸ್ವಯಂಪ್ರೇರಿತರಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲರಾಗುವ ಘಟಕಾಧಿಕಾರಿಗಳ ವಿರುದ್ಧ ಘೋರ ನಿರ್ಲಕ್ಷತೆ ಎಂದು ಪರಿಗಣಿಸಿ ಅವರುಗಳನ್ನು ಇಲಾಖಾ ಶಿಸ್ತಿನ ಕ್ರಮಕ್ಕೆ ಗುರಿಪಡಿಸಲಾಗುವುದು. ಪೊಲೀಸ್ ಇಲಾಖೆಯ ಘನತೆ, ಗೌರವ ಮತ್ತು ಸಮಗ್ರತೆಗಳಲ್ಲಿನ ರಾಜಿ ಸಮಂಜಸವಲ್ಲ ಮತ್ತು ಸಹಿಸಲು ಸಾಧ್ಯವಿಲ್ಲ.
- ಪೊಲೀಸ್ ಇಲಾಖೆಯ ಹಿರಿಮೆ ಮತ್ತು ಗೌರವಾದರಗಳನ್ನು ಹೆಚ್ಚಿಸುವ ಶಿಸ್ತುಬದ್ಧ ಜವಾಬ್ದಾರಿಗಳು ಘಟಕಾಧಿಕಾರಿಗಳದ್ದಾಗಿವೆ. ಈ ಸಂಸ್ಥೆಯ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂಬುದನ್ನು ನಾವಾರೂ ಮರೆಯಕೂಡದು ಎಂಬುದಾಗಿ ತಿಳಿಸಿದ್ದಾರೆ.
Henceforth, the state police personnel warned of police disciplinary action in criminal acts












Follow Me