ಬೆಂಗಳೂರು : ಮಾಸ್ಟರ್ ಪ್ಲಾನ್ (CDP) ಪ್ರದೇಶದಲ್ಲಿ ಭೂಮಿಯನ್ನು ಸ್ವಯಂ ಪರಿವರ್ತನೆ ಮಾಡುವ ಅಗತ್ಯವನ್ನು ಸರ್ಕಾರ ಇದೀಗ ತೆಗೆದುಹಾಕಿದೆ. ಮಾಸ್ಟರ್ ಪ್ಲಾನ್ ಪ್ರಕಾರ ನೇರವಾಗಿ ಯೋಜನೆ ಅನುಮೋದನೆ ಪಡೆಯಬಹುದು. ಯೋಜನಾ ಅನುಮೋದನೆಯ ಭಾಗವಾಗಿ ಪರಿವರ್ತನೆ ಮಾಡಲಾಗುತ್ತದೆ. ಅಲ್ಲದೆ, ಮಾಸ್ಟರ್ ಪ್ಲಾನ್ ಪ್ರಕಾರ, ಲಕ್ಷಾಂತರ ಜಿಬಿಎ ಬಿ ಖಾತಾ ಸೈಟ್ ಮಾಲೀಕರಿಗೆ ಪ್ರಯೋಜನವಾಗುವಂತೆ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಸಕ್ರಿಯಗೊಳಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಶನಿವಾರ ವಿಕಾಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಬಿಎ ವ್ಯಾಪ್ತಿಯ ಭೂಮಿ ಸ್ವಯಂ ಪರಿವರ್ತನೆ (Land auto conversion) ನೂತನ ತಂತ್ರಾಂಶವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಈವರೆಗೆ, ಮಾಸ್ಟರ್ ಪ್ಲಾನ್ ಒಳಗೆ ಬರುವ ಪ್ರದೇಶಗಳಲ್ಲಿಯೂ ಸಹ ಭೂಮಿಯನ್ನು ಪರಿವರ್ತಿಸುವುದು ಅಗತ್ಯವಾಗಿತ್ತು. ‘ಡೀಮ್ಡ್ ಕನ್ವರ್ಷನ್’ ಹೊರತಾಗಿಯೂ, ಈ ಪ್ರಕ್ರಿಯೆ ಕನಿಷ್ಟ 4-6 ತಿಂಗಳು ಸಮಯ ತೆಗೆದುಕೊಳ್ಳುತ್ತಿತ್ತು. ಅಲ್ಲದೆ, ಮಧ್ಯವರ್ತಿಗಳು ಡೆವಲಪರ್ಗಳನ್ನು ಶೋಷಿಸಲು ಅವಕಾಶ ನೀಡುತ್ತಿತ್ತು. ವಿಳಂಬ, ಕಿರುಕುಳ, ಭ್ರಷ್ಟಾಚಾರ ಮತ್ತು ವೆಚ್ಚ ಹೆಚ್ಚಳವು ಅಂತಿಮವಾಗಿ ಸೈಟ್-ಖರೀದಿದಾರರಾದ ಸಾಮಾನ್ಯ ಜನರ ಮೇಲೆ ಹೊರೆಯಾಗುತ್ತಿತ್ತು. ಇಂತಹ ಬೆಳವಣಿಗೆಗಳು ಸರ್ಕಾರ ಮತ್ತು ಕಂದಾಯ ಇಲಾಖೆಯ ಅಪಖ್ಯಾತಿಗೆ ಕಾರಣವಾಗಿತ್ತು ” ಎಂದು ವಿಷಾದಿಸಿದರು.
“ಪ್ರಸ್ತುತ ಜಿಬಿಎ ವ್ಯಾಪ್ತಿಯಲ್ಲಿ ಸ್ವಯಂ ಪರಿವರ್ತನೆಯನ್ನು ಜಾರಿಗೆ ತರುವುದರೊಂದಿಗೆ, ಕಂದಾಯ ಇಲಾಖೆಯು ಕಿರುಕುಳ, ಭ್ರಷ್ಟಾಚಾರ, ವಿಳಂಬ ನೀತಿ ಹಾಗೂ ಸಾಮಾನ್ಯ ಜನರ ಮೇಲಿನ ಹೊರೆ ತಡೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಇದೇ ಸಮಯದಲ್ಲಿ ಆಡಳಿತದಲ್ಲಿ ಸುಧಾರಣೆಗಳನ್ನು ತರಲು ಮಹತ್ವದ ನಿರ್ಧಾರವಾಗಿದೆ. ಕಾನೂನುಬದ್ಧ ಭೂ ಅಭಿವೃದ್ಧಿಯನ್ನು ಸರಳ, ಸುಳಲಿತ ಮತ್ತು ಶೀಘ್ರವಾಗಿ ಮಾಡುವುದು ಉದ್ದೇಶವಾಗಿದೆ. ಹೀಗಾಗಿ, ಸಾಮಾನ್ಯ ಜನರಿಗೆ ಕೈಗೆಟುಕುವ ನಿವೇಶನಗಳನ್ನು ಖರೀದಿಸಲು ಇದು ಸಹಾಯ ಮಾಡುತ್ತದೆ” ಎಂದು ಭರವಸೆ ನೀಡಿದರು.
ಅಲ್ಲದೆ, “ ಈ ಸುಧಾರಣೆಯು ಆಡಳಿತ ಪಾಲನೆ ಮತ್ತು ಭೂ ಅಭಿವೃದ್ಧಿಯ ವೆಚ್ಚ ಸಮಯ ಕಡಿಮೆ ಮಾಡುತ್ತದೆ. ಈ ಸುಧಾರಣೆಗಳು ವಸತಿ ಅಭಿವೃದ್ಧಿಗೆ ಮಾತ್ರವಲ್ಲದೆ ಮಾಸ್ಟರ್ ಪ್ಲಾನ್ನಲ್ಲಿ ಅನುಮತಿಸಲಾದ ಕೈಗಾರಿಕಾ ಮತ್ತು ಇತರ ಬಳಕೆಗಳಿಗೂ ಲಭ್ಯವಿರಲಿದೆ. ಈ ಸುಧಾರಣೆಯೊಂದಿಗೆ, ಕಂದಾಯ ಇಲಾಖೆಯು ಶೋಷಣೆ ಮತ್ತು ಭ್ರಷ್ಟಾಚಾರವನ್ನು ಮೂಲದಲ್ಲೇ ತಡೆಯಲು ಮುಂದಾಗಿದೆ” ಎಂದು ಆಶಯ ವ್ಯಕ್ತಪಡಿಸಿದರು.

“ಸ್ವಯಂ ಪರಿವರ್ತನೆಯಿಂದ ಹಾಲಿ ಬಿ-ಖಾತಾ ನಿವೇಶನಗಳೂ ಅನುಕೂಲ ಪಡೆಯಲಿವೆ. ಬಿ ಖಾತಾ ಆಸ್ತಿಗಳನ್ನು ಎ ಖಾತಾ ಆಗಿ ಪರಿವರ್ತಿಸಲು ಜಿಬಿಎ ಈಗ ಕಾನೂನು ಚೌಕಟ್ಟನ್ನು ಸರಳೀಕರಿಸಲಾಗಿದೆ. ಈ ಹಿಂದೆ ಅನಧಿಕೃತ ಸೈಟ್ಗಳನ್ನು ಖರೀದಿಸಿದ ಲಕ್ಷಾಂತರ ಆಸ್ತಿ ಮಾಲೀಕರಿಗೆ ಇದು ಸಹಾಯವಾಗಲಿದೆ. ಎ-ಖಾತಾ ಪಡೆಯುವುದು ಇಂತಹ ಸೈಟ್ಗಳಿಗೆ ಕಾನೂನು ಬಲವನ್ನು ನೀಡುತ್ತದೆ. ಸಾಲಗಳನ್ನು ಪಡೆಯಲು, ಅವರ ಆಸ್ತಿಯ ಮೌಲ್ಯವನ್ನು ಹೆಚ್ಚಿಸುವ ಸೇರಿದಂತೆ ಎಲ್ಲಾ ವಹಿವಾಟುಗಳೂ ಇದೀಗ ಸುಲಭಗೊಳಿಸಲಾಗಿದೆ. ಆನ್ಲೈನ್ ಪಾರದರ್ಶಕತೆ, ಸಮಯ-ಪರಿಮಿತಿ ಮತ್ತು ಸ್ವಯಂಚಾಲಿತ ಪ್ರಕ್ರಿಯೆಯ ಮೂಲಕ ಈ ಸೇವೆಗಳನ್ನೂ ಮತ್ತಷ್ಟು ಜನಪರಗೊಳಿಸಲಾಗಿದೆ. ಅಲ್ಲದೆ, ಇ ಖಾತಾ ಜೊತೆಗೆ ಎಲ್ಲಾ ದಾಖಲೆಗಳನ್ನೂ ಇಂಟಗ್ರೇಷನ್ ಮಾಡುವ ಮೂಲಕ ಜನರ ಆಸ್ತಿ ಮಾಲೀಕತ್ವಕ್ಕೆ ಮತ್ತಷ್ಟು ಬಲ ತುಂಬಲಾಗಿದೆ ಹಾಗೂ ಕಾನೂನು ತಕರಾರುಗಳಿಗೂ ಆಸ್ಪದ ಇಲ್ಲದಂತಾಗುತ್ತಿದೆ” ಎಂದರು.
“ನಗರೀಕರಣ ಹೆಚ್ಚಾದಂತೆ, ನಗರ ಆಸ್ತಿಗಳಿಗೆ ಬೇಡಿಕೆ ವೇಗವಾಗಿ ಹೆಚ್ಚಾಗುತ್ತಿದೆ ಯೋಜನಾ ಬದ್ಧ ಅಭಿವೃದ್ಧಿಯನ್ನು ಸುಗಮಗೊಳಿಸಲು ಮತ್ತು ಜನರಿಗೆ ಕೈಗೆಟುವ ದರದಲ್ಲಿ ಆಸ್ತಿ ಖರೀದಿಗೆ ಸಹಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅದೇ ಸಮಯದಲ್ಲಿ ಜನಸಾಮಾನ್ಯರು ಉತ್ತಮ ಆಡಳಿತ ಪಡೆಯಲು ಹಾಗೂ ಸುಗಮವಾಗಿ ತಮ್ಮ ವ್ಯವಹಾರವನ್ನು ನಡೆಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ನಿರಂತರ ಸುಧಾರಣೆಗಳನ್ನು ತರುತ್ತಿದೆ. ಮಾಸ್ಟರ್ ಪ್ಲಾನ್ನಲ್ಲಿ ಸ್ವಯಂಚಾಲಿತ ಪರಿವರ್ತನೆಯು ಆ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ದುರಾಡಳಿತದ ಒಂದು ಸಂಕೇತವಾಗಿ ನಡೆಯುತ್ತಿದ್ದ ಪರಿವರ್ತನೆ ಪ್ರಕ್ರಿಯೆಗಳನ್ನು ಸುಧಾರಿಸುವ ಮತ್ತು ಸರಳಗೊಳಿಸುವ ಮೂಲಕ, ಸರ್ಕಾರವು ದಿಟ್ಟ ಹೆಜ್ಜೆಯನ್ನು ಇಟ್ಟಿದೆ”. ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ನಗರಾಭಿವೃದ್ದಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಸರ್ಕಾರದ ಪ್ರಧಾನ ಕಾರ್ದರ್ಶಿಗಳಾದ (ವಿಪತ್ತು ನಿವರ್ಹಣೆ) ಮೌನೀಶ್ ಮುದ್ಗಿಲ್, ಕಂದಾಯ ಆಯುಕ್ತರಾದ ಮೀನಾ ನಾಗರಾಜ್ ಉಪಸ್ಥಿತರಿದ್ದರು.
Good news for B-Khata site owners