ಬೆಂಗಳೂರು: ಕೃಷಿ ಜಮೀನಿನ ಮಾಲೀಕರು ಮರಣಹೊಂದಿದ ನಂತರ ಪೌತಿ/ವಾರಸಾ ರೀತ್ಯಾ ಮಾಲೀಕತ್ವವು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ ಅಂತಹ ಜಮೀನುಗಳ ಸ್ವಾಧೀನವನ್ನು ಹೊಂದಿದ್ದರೂ ಸಹ, ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿಪಡಿಸಲು ಸಾಲಸೌಕರ್ಯಗಳು ದೊರೆಯುವುದಿಲ್ಲ. ಪ್ರಕೃತಿ ವಿಕೋಪದಂತಹ ಅನಾಹುತಗಳಿಂದಾಗಿ ಫಸಲುನಾಶವಾದಾಗ ಸರ್ಕಾರದಿಂದ ನೀಡಲಾಗುವ ವಿಮೆ/ಪರಿಹಾರದ ಮೊತ್ತವನ್ನು ಪಡೆಯುವುದು ದುಸ್ತರವಾಗುತ್ತದೆ. ಪಿ.ಎಂ ಕಿಸಾನ್ ಸೌಲಭ್ಯವನ್ನು ಪಡೆಯಲು ಕಷ್ಟಸಾಧ್ಯವಾಗಿರುತ್ತದೆ.
ಈ ರೀತಿಯ ಅಸಂಗತತೆಗಳನ್ನು ಕೊಡವಿ ಹಾಕಿ, ರೈತಾಪಿ ವರ್ಗದವರ ಸಮಸ್ಯೆಗಳನ್ನು ಪರಿಹರಿಸಿ, ಪೌತಿ/ವಾರಸಾ ಸ್ವರೂಪದ ಮ್ಯುಟೇಷನ್ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಿ, ಪೌತಿ/ವಾರಸಾ ಖಾತೆ ಆಂದೋಲನವನ್ನು ಇ-ಪೌತಿ ತಂತ್ರಾಂಶದ ಮೂಲಕವೇ ನಡೆಸಲು ಕೆಳಕಂಡ ಮಾರ್ಗಸೂಚಿಗಳನ್ನು ನೀಡಲಾಗಿದೆ.
ಗ್ರಾಮ ಆಡಳಿತಾಧಿಕಾರಿಗಳು ಮರಣ ಹೊಂದಿದ ಖಾತೆದಾರರ ವಿವರಗಳನ್ನು ಕೆಳಕಂಡ ಮೂಲಗಳಿಂದ ಪಡೆಯಬಹುದಾಗಿದೆ:
ಪಹಣಿಯೊಂದಿಗೆ ಆಧಾರ್ ಸೀಡಿಂಗ್ ಸಮಯದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮಾಲೀಕರು ಮೃತ ಹೊಂದಿದ್ದು, ಆಧಾರ್ ಸೀಡಿಂಗ್ ಮಾಡಲು ಸಾಧ್ಯವಾಗದೆ, ಪೌತಿ ಎಂದು ಗುರುತಿಸಲಾಗಿರುತ್ತದೆ. ಹೀಗೆ ಗುರುತಿಸಿರುವ ಮೃತ ಹೊಂದಿದ ಮಾಲೀಕರ ಮಾಹಿತಿಯನ್ನು ಇ-ಪೌತಿ ತಂತ್ರಾಂಶದಲ್ಲಿ ಅಳವಡಿಸಿ, ಸಂಬಂಧಪಟ್ಟ ಗ್ರಾಮ ಆಡಳಿತಾಧಿಕಾರಿಗಳ ಲಾಗಿನ್ ಗೆ ಈಗಾಗಲೇ ವರ್ಗಾಯಿಸಲಾಗಿರುತ್ತದೆ.
ಮರಣ ನೋಂದಣಿ ರಿಜಿಸ್ಟರ್
ಮೃತ ಖಾತೆದಾರನ ಮರಣ ಪ್ರಮಾಣ ಪತ್ರ ಹಾಗೂ ಕುಟುಂಬದ ವಂಶವೃಕ್ಷ ಲಭ್ಯವಿದ್ದರೇ ಈ ಕೆಳಕಂಡಂತೆ ಕ್ರಮವಹಿಸಬೇಕಾಗಿರುತ್ತದೆ.
ಮರಣ ಪ್ರಮಾಣಪತ್ರ ಹಾಗೂ ಅಟಲ್ ಜೀ ಜನಸ್ನೇಹಿ ಕೇಂದ್ರದಿಂದ ಪಡೆದಿರುವ ವಂಶವೃಕ್ಷವನ್ನು ಮೃತಪಟ್ಟಿರುವ ಕುಟುಂಬದವರಿಂದ ಪಡೆದು ಇ-ಪೌತಿ ತಂತ್ರಾಂಶದಲ್ಲಿ ನಮೂದಿಸಲು ಕ್ರಮವಹಿಸತಕ್ಕದ್ದು.
ಒಂದು ವೇಳೆ ವಂಶವೃಕ್ಷ ಲಭ್ಯವಿಲ್ಲದಿದ್ದರೆ, ಈ ಕೆಳಕಂಡಂತೆ ಕ್ರಮವಹಿಸಬೇಕಾಗಿರುತ್ತದೆ.
ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನೋಟರಿಯವರ ಸಮಕ್ಷಮ ಸಹಿ ಮಾಡಿ, ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ಮನವಿ ದಾಖಲಿಸಿ, ವಂಶವೃಕ್ಷವನ್ನು ಪಡೆಯಬಹುದು. ಹೀಗೆ ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ಪಡೆದ ವಂಶವೃಕ್ಷದ ಮೇರೆಗೆ ಗ್ರಾಮ ಆಡಳಿತಾಧಿಕಾರಿಗಳು ಪೌತಿ/ವಾರಸಾ ವಿವರಗಳನ್ನು ದಾಖಲಿಸಲು ಅವಕಾಶವಿರುತ್ತದೆ.




4. ಒಂದು ವೇಳೆ ಮೃತ ಖಾತೆದಾರನ ಮರಣ ಪ್ರಮಾಣಪತ್ರ ಇಲ್ಲದಿದ್ದರೇ ಈ ಕೆಳಕಂಡಂತೆ ಕ್ರಮವಹಿಸಬೇಕಾಗಿರುತ್ತದೆ.
ಆಧಾರ್ ಮತ್ತು ಪಡಿತರ ಚೀಟಿ ದಾಖಲೆಗಳನ್ನು ಪರಿಶೀಲಿಸಿಕೊಂಡು ಗ್ರಾಮ ಆಡಳಿತಾಧಿಕಾರಿಗಳು ಸ್ಥಾನಿಕ ತನಿಖೆ / ಮಹಜರ್ ಮಾಡಿ, ಮೃತ ಖಾತೆದಾರರು ಮರಣ ಹೊಂದಿರುವ ಬಗ್ಗೆ ಸಂಬಂಧಪಟ್ಟ ವಾರಸುದಾರರಿಂದ ಅಫಿಡವಿಟ್ ಅನ್ನು ಪಡೆದು, ಅವರುಗಳ ಪಡಿತರಚೀಟಿ ಮತ್ತು ಆಧಾರ್ ದಾಖಲೆಯೊಂದಿಗೆ ಪೌತಿ ಖಾತೆ ಮಾಡಿಸಿಕೊಳ್ಳಲು ಅರ್ಜಿ ದಾಖಲಿಸಬಹುದು. ಈ ಸಂಬಂಧ ವಿಡಿಯೋ ಮಹಜರುನ್ನು ಮಾಡಿ ಕಡ್ಡಾಯವಾಗಿ ಇ-ಪೌತಿ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡುವುದು.
5. ಒಂದು ವೇಳೆ ಮೃತ ಖಾತೆದಾರನ ಮರಣ ಪ್ರಮಾಣಪತ್ರ, ಆಧಾರ್ ಮತ್ತು ಪಡಿತರ ಚೀಟಿಯು ಸಹ ಇಲ್ಲದಿದ್ದರೇ ಈ ಕೆಳಕಂಡಂತೆ ಕ್ರಮವಹಿಸಬೇಕಾಗಿರುತ್ತದೆ.
ಆಧಾರ್ ಮತ್ತು ಪಡಿತರ ಚೀಟಿ ಇಲ್ಲದಿದ್ದಲ್ಲಿ ಗ್ರಾಮಸ್ಥರ ಮಹಜರ್‌ನೊಂದಿಗೆ ಹಾಗೂ ಕುಟುಂಬ ಸದಸ್ಯರ ನೋಟರಿ ಪ್ರಮಾಣ ಪತ್ರ, ಕುಟುಂಬ ಸದಸ್ಯರ ಆಧಾರ್ ಪಡೆದು ಪೌತಿ ಖಾತೆಗೆ ಕ್ರಮವಹಿಸುವುದು.
6. ಇ-ಪೌತಿ ಖಾತೆ ಮಾಡಲು ಅರ್ಜಿ ಹಾಗೂ ಶುಲ್ಕ ಸ್ವೀಕೃತಿ ಮಾಡುವ ಬಗ್ಗೆ
ಇ-ಪೌತಿ ಖಾತೆ ಮಾಡಲು ಮ್ಯುಟೇಶನ್ ಶುಲ್ಕ ರೂ.35/- ಗಳಿಗೆ ವಿನಾಯಿತಿಯನ್ನು ನೀಡಲಾಗಿದ್ದು, ಅರ್ಜಿದಾರರಿಂದ ಯಾವುದೇ ಅರ್ಜಿ ಪಡೆಯದೆ, ವಾರಸುದಾರರ ಆಧಾರ್ ಇ-ಕೆವೈಸಿ ಪಡೆದು, ಸ್ವಯಂಪ್ರೇರಿತರಾಗಿ ಗ್ರಾಮ ಆಡಳಿತಾಧಿಕಾರಿಗಳೇ ಇ-ಪೌತಿ ತಂತ್ರಾಂಶದಲ್ಲಿ ಪೌತಿ/ವಾರಸಾ ಮ್ಯುಟೇಶನ್ ಮಾಡಲು ಕ್ರಮವಹಿಸಬಹುದಾಗಿದೆ.
7. ಪೌತಿ ಖಾತೆಯ ತಕರಾರು ಪ್ರಕರಣಗಳನ್ನು ಇತ್ಯರ್ಥಪಡಿಸುವ ಬಗ್ಗೆ
ಇ-ಪೌತಿ ತಂತ್ರಾಂಶದಲ್ಲಿ ನಮೂದಿಸಿದ ಅರ್ಜಿಗಳ ಕುರಿತು ಹಕ್ಕು ಬದಲಾವಣೆಯ ಪ್ರಕರಣಗಳಲ್ಲಿ ನಮೂನೆ-12 ಮತ್ತು ನಮೂನೆ-21 ಗಳನ್ನು ಹೊರಡಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ಮ್ಯುಟೇಶನ್ ವಿಲೇವಾರಿಗೆ 15 ದಿನಗಳ ಕಾಲಾವಕಾಶ ಇರುತ್ತದೆ. ಇಂತಹ ಪ್ರಕರಣಗಳಲ್ಲಿ ಆಸಕ್ತರು ತಕರಾರುಗಳನ್ನು ತಹಶೀಲ್ದಾರ್ ಕಚೇರಿಗೆ ಸಲ್ಲಿಸಬಹುದು. ತಕರಾರುಗಳು ಬಂದರೆ, ವಹಿವಾಟು ವಿವಾದಾಸ್ಪದ ಪ್ರಕರಣಗಳ ಪಟ್ಟಿಗೆ ಸೇರಿಸಲಾಗುತ್ತದೆ. ಸದರಿ ಆಂದೋಲನದಲ್ಲಿ ಸ್ವೀಕೃತವಾಗುವ ತಕರಾರುಗಳನ್ನು ಖುದ್ದಾಗಿ ತಹಶೀಲ್ದಾರ್ ಗ್ರೇಡ್-1 (ಕಸಬಾ ಹೋಬಳಿಗಳಿಗೆ) ತಹಶೀಲ್ದಾರ್ ಗ್ರೇಡ್-2 (ಇತರ ಹೋಬಳಿಗಳಿಗೆ) ಒಂದು ತಿಂಗಳೊಳಗೆ ಆರ್.ಸಿ.ಪಿ.ಎಂ.ಎಸ್ ತಂತ್ರಾಂಶದಲ್ಲಿ ನಿಯಮಾನುಸಾರ ವಿಲೇವಾರಿ ಮಾಡಬೇಕಾಗಿರುತ್ತದೆ. ಒಂದು ವೇಳೆ ತಹಶೀಲ್ದಾರ್ ಗ್ರೇಡ್-2 ಹುದ್ದೆ ಇಲ್ಲದಿದ್ದಲ್ಲಿ ಅಥವಾ ಖಾಲಿ ಇದ್ದಲ್ಲಿ, ಗ್ರೇಡ್-1 ತಹಶೀಲ್ದಾರರು ತಕರಾರುಗಳನ್ನು ಇತ್ಯರ್ಥಪಡಿಸುವುದು.
8. ಇ-ಪೌತಿ ಖಾತೆಯ ಸಮಯದಲ್ಲಿ ಎಲ್ಲಾ ವಾರಸುದಾರರು ಒಪ್ಪಿಗೆ ನೀಡಿದರೆ ಈ ಕೆಳಕಂಡಂತೆ ಕ್ರಮವಹಿಸಬೇಕಾಗಿರುತ್ತದೆ.
ಒಂದು ವೇಳೆ ಮೃತ ಖಾತೆದಾರರ ಎಲ್ಲಾ ವಾರಸುದಾರರು ಆಧಾರ್ ಇ-ಕೆವೈಸಿ ನೀಡುವ ಮೂಲಕ ಪೌತಿ ಖಾತೆಗೆ ಒಪ್ಪಿಗೆ ನೀಡಿ, 15 ದಿನಗಳ ನೋಟೀಸು ಅವಧಿಯೊಳಗೆ ಯಾವುದೇ ತಕರಾರು ಸ್ವೀಕೃತವಾಗದಿದ್ದರೆ ಇಂತಹ ಪ್ರಕರಣವನ್ನು ಭೂಮಿ ತಂತ್ರಾಂಶದಲ್ಲಿ ಮ್ಯುಟೇಶನ್ ಮೂಲಕ ಹೊಸ ವಾರಸುದಾರರನ್ನು ಪಹಣಿಯಲ್ಲಿ ನಮೂದಿಸಲಾಗುವುದು.
9. ಇ-ಪೌತಿ ಖಾತೆಯ ಸಮಯದಲ್ಲಿ ವಾರಸುದಾರರ ಪೈಕಿ ಒಬ್ಬ ಅಥವಾ ಹೆಚ್ಚಿನ ಸದಸ್ಯರು ಒಪ್ಪಿಗೆ ನೀಡದಿದ್ದರೆ ಈ ಕೆಳಕಂಡಂತೆ ಕ್ರಮವಹಿಸಬೇಕಾಗಿರುತ್ತದೆ.
ಒಂದು ವೇಳೆ ಮೃತ ಖಾತೆದಾರರ ಪೈಕಿ ಯಾರಾದರೂ ಒಬ್ಬ ವಾರಸುದಾರರು ಆಧಾರ್ ಇ-ಕೆವೈಸಿ ಮಾಡಲು ಒಪ್ಪಿಗೆ ನೀಡದಿದ್ದಲ್ಲಿ, ಗ್ರಾಮ ಆಡಳಿತಾಧಿಕಾರಿಗಳು ಇ-ಪೌತಿ ತಂತ್ರಾಂಶದಲ್ಲಿ “ಆಧಾರ್ ಇ-ಕೆವೈಸಿ ನೀಡಲು ನಿರಾಕರಿಸಿರುತ್ತಾರೆ” ಎಂದು ಆಯ್ಕೆ ಮಾಡುವುದು. ಇಂತಹ ಪ್ರಕರಣವನ್ನು ತಕರಾರು ಎಂದು ಭಾವಿಸಿ, 15 ದಿನಗಳ ನೋಟೀಸು ಅವಧಿ ಮುಕ್ತಾಯವಾದ ನಂತರ ಸ್ವಯಂಚಾಲಿತವಾಗಿ ಆರ್.ಸಿ.ಪಿ.ಎಂ.ಎಸ್ ತಂತ್ರಾಂಶಕ್ಕೆ ವರ್ಗಾಯಿಸಲಾಗುವುದು. ತಹಶೀಲ್ದಾರರು ಆರ್.ಸಿ.ಪಿ.ಎಂ.ಎಸ್ ತಂತ್ರಾಂಶದಲ್ಲಿ ಪ್ರಕರಣದ ವಿಚಾರಣೆ ನಡೆಸಿ, ನಿಯಮಾನುಸಾರ ವಾರಸುದಾರರ ಹೆಸರನ್ನು ಪಹಣಿಯಲ್ಲಿ ಇಂಡೀಕರಿಸಬಹುದಾಗಿದೆ. ಒಂದು ವೇಳೆ ಜಂಟಿಯಾಗಿ ಪಹಣಿ ದಾಖಲಿಸಲು ಒಪ್ಪದೇ ಇದ್ದಲ್ಲಿ ಪಹಣಿ ಕಾಲಂ 11 ರಲ್ಲಿ “ಉತ್ತರಾಧಿಕಾರಿಗಳ ತಕರಾರು ಇದ್ದು, ಪೌತಿ ಖಾತೆ ಮಾಡಲು ಒಪ್ಪಿರುವುದಿಲ್ಲ” ಎಂದು ನಮೂದಿಸಬಹುದಾಗಿರುತ್ತದೆ.
ಮುಂದುವರೆದು, ತಹಶೀಲ್ದಾರ್ ಆರ್.ಸಿ.ಪಿ.ಎಂ.ಎಸ್ ತಂತ್ರಾಂಶದಲ್ಲಿಯೂ ಸಹ ವಾರಸುದಾರರ ಆಧಾರ್ ಇ-ಕೆವೈಸಿ ಮಾಡುವ ಅವಕಾಶವಿರುತ್ತದೆ.
10. ಮೃತ ಸ್ವಾಧೀನದಾರರ ವಾರಸುದಾರರ ಹೆಸರನ್ನು ಜಂಟಿಯಾಗಿ ದಾಖಲಿಸುವ ಬಗ್ಗೆ ಈ ಕೆಳಕಂಡಂತೆ ಕ್ರಮವಹಿಸಬಹುದಾಗಿರುತ್ತದೆ.
ಮೃತ ಸ್ವಾಧೀನದಾರರು ಹೊಂದಿದ್ದ ಜಮೀನಿನ ಪೂರ್ಣ ವಿಸ್ತೀರ್ಣವನ್ನು ವಂಶವೃಕ್ಷದಲ್ಲಿ ಹೆಸರು ಹೊಂದಿರುವ ಎಲ್ಲಾ ವ್ಯಕ್ತಿಗಳ ಹೆಸರಿಗೆ ಜಂಟಿಯಾಗಿ ದಾಖಲಿಸುವುದರಿಂದ ಯಾವುದೇ ವ್ಯಕ್ತಿಯ ಹಕ್ಕುಗಳನ್ನು ಮೊಟಕುಗೊಳಿಸುವ ಅಥವಾ ಅಲ್ಲಗಳೆಯುವ ಸಂಭವ ಇರುವುದಿಲ್ಲ. ಹೀಗೆ ಜಂಟಿಯಾಗಿ ಕಾಲೋಚಿತಗೊಂಡಿರುವ ಹಕ್ಕುದಾಖಲೆಗಳನ್ನು ಮುಂದೆ ಕುಟುಂಬದ ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ನಡೆಯಬಹುದಾದ ವಿಭಾಗ / ಪಾಲುಪಟ್ಟಿಯ ಮೇರೆಗೆ ಆಸ್ತಿವಿಭಾಗದ ಮ್ಯುಟೇಷನ್ ನಡೆಸಲು ಅವಕಾಶವಿರುತ್ತದೆ.
11. ಇ-ಪೌತಿ ಖಾತೆಯ ಸಮಯದಲ್ಲಿ ವಾರಸುದಾರರ ಪೈಕಿ ಒಬ್ಬ ಅಥವಾ ಒಬ್ಬರಿಗಿಂತ ಹೆಚ್ಚು ಸದಸ್ಯರ ಹೆಸರಿಗೆ ಖಾತೆ ಮಾಡಲು ಒಪ್ಪಿಗೆ ನೀಡಿದರೆ ಈ ಕೆಳಕಂಡಂತೆ ಕ್ರಮವಹಿಸಬೇಕಾಗಿರುತ್ತದೆ.
ಇ-ಪೌತಿ ತಂತ್ರಾಂಶದಲ್ಲಿ ನಾಡಕಚೇರಿ ವಂಶವೃಕ್ಷದಂತೆ ಮೃತ ವಾರಸುದಾರರು ಕುಟುಂಬದ ಒಬ್ಬ ಅಥವಾ ಒಬ್ಬರಿಗಿಂತ ಹೆಚ್ಚು ಸದಸ್ಯರ ಹೆಸರಿಗೆ ಖಾತೆ ಮಾಡಲು ಒಪ್ಪಿಗೆ ಇದೆ ಎಂದು ಹೇಳಿದಾಗ ಅದನ್ನು ಗ್ರಾಮ ಆಡಳಿತಾಧಿಕಾರಿಗಳು ತಂತ್ರಾಂಶದಲ್ಲಿ ದಾಖಲಿಸತಕ್ಕದ್ದು. ನಂತರ 15 ದಿನಗಳ ನೋಟೀಸ್ ಅವಧಿ ಮುಗಿದ ನಂತರ ಈ ಪ್ರಕರಣಗಳು ಆರ್.ಸಿ.ಪಿ.ಎಂ.ಎಸ್ ತಂತ್ರಾಂಶದಲ್ಲಿ ತಹಶೀಲ್ದಾರ್ ಲಾಗಿನ್ ಗೆ ವರ್ಗಾಯಿಸಲಾಗುತ್ತದೆ. ಕುಟುಂಬದ ಸದಸ್ಯರು ತಹಶೀಲ್ದಾರ್ ಸಮ್ಮುಖದಲ್ಲಿ ನೋಟರಿ ಪ್ರಮಾಣ ಪತ್ರದಲ್ಲಿ ಒಪ್ಪಿಗೆ ನೀಡಿದರೇ ಖಾತೆ ಮಾಡಲು ತಹಶೀಲ್ದಾರ್ ಕ್ರಮವಹಿಸತಕ್ಕದ್ದು.
12. ಇ-ಪೌತಿ ಖಾತೆಗೆ ಮ್ಯುಟೇಷನ್ ಪೂರ್ವ ನಕ್ಷೆಯು ಅಗತ್ಯವಿದೆಯೇ?
ಇ-ಪೌತಿ ಖಾತೆ ಮಾಡುವಾಗ ಮೃತರಾದ ಭೂಮಾಲೀಕರ ಹೆಸರನ್ನು ತೆಗೆದು ವಂಶವೃಕ್ಷದಲ್ಲಿರುವ ಎಲ್ಲಾ ವ್ಯಕ್ತಿಗಳ ಹೆಸರಿಗೆ ಮಾಲೀಕತ್ವವನ್ನು ಜಂಟಿಯಾಗಿ ಖಾತೆ ಮಾಡುವುದರಿಂದ ಮ್ಯುಟೇಷನ್ ಪೂರ್ವ ನಕ್ಷೆಯ ಅಗತ್ಯವಿರುವುದಿಲ್ಲ.
13. ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರು ಇ-ಪೌತಿ ಡ್ಯಾಶ್ ಬೋರ್ಡ್ ನಲ್ಲಿ ಲಭ್ಯವಿರುವ ವರದಿಯನ್ನು ಕಾಲಕಾಲಕ್ಕೆ ಪರಿಶೀಲಿಸತಕ್ಕದ್ದು ಅಂತ ತಿಳಿಸಿದೆ.