ಶಿವಮೊಗ್ಗ: ಡಿ.17ರಂದು ‘ಸಾಗರ ಜಿಲ್ಲೆ’ಗೆ ಒತ್ತಾಯಿಸಿ ‘ಸಾಗರ ಬಂದ್’ಗೆ ಕರೆ

Call for 'Sagar Bandh' on December 17th, demanding 'Sagar District'
Call for 'Sagar Bandh' on December 17th, demanding 'Sagar District'

ಶಿವಮೊಗ್ಗ: ಡಿ.17ರಂದು ಬುಧವಾರದಂದು ಸಾಗರವನ್ನು ಜಿಲ್ಲೆಯಾಗಿ ಮಾಡಬೇಕು ಎಂಬುದಾಗಿ ಒತ್ತಾಯಿಸಿ ಸಾಗರ ಬಂದ್ ಮಾಡುವುದಾಗಿ ಸಾಗರ ಜಿಲ್ಲೆ ಹೋರಾಟ ಸಮಿತಿಯ ತಿ.ನಾ ಶ್ರೀನಿವಾಸ್ ಘೋಷಿಸಿದ್ದಾರೆ.

ಈ ಕುರಿತು ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರ ಜಿಲ್ಲೆ ಮಾಡಬೇಕು ಎಂಬ ಒತ್ತಾಯಕ್ಕೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಡಿಸೆಂಬರ್.17ರಂದು ಸಾಗರ ಬಂದ್ ಮಾಡುವುದಾಗಿ ತಿಳಿಸಿದರು.

ಸಾಗರ ತಾಲ್ಲೂಕು ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಶಿಕಾರಿಪುರ, ತೀರ್ಥಹಳ್ಳಿಯಲ್ಲಿ ರಸ್ತೆ ಅಗಲೀಕರಣ ಆದಷ್ಟು ಸಾಗರದಲ್ಲಿ ಆಗಿಲ್ಲ. ಸೊರಬ ರಸ್ತೆ ಅಗಲೀಕರಣ ನೆನೆಗುದಿಗೆ ಬಿದ್ದಿದೆ. ಯುಜಿಡಿ ಕಾಮಗಾರಿ 16 ವರ್ಷದಿಂದ ಸರಿಯಾಗಿ ನಡೆಯುತ್ತಿಲ್ಲ. ಜೋಗ ಕಾಮಗಾರಿ ಕುಂಟುತ್ತಾ ಸಾಗಿದೆ. ಸಾಗರ ತಾಲ್ಲೂಕಿನ ಅಭಿವೃದ್ಧಿಗೆ ಕಾಣದ ಕೈಗಳಿಂದ ತಡೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರು ನಮ್ಮ ಮನವಿಗೆ ಸ್ಪಂದಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ಸಾಗರ ಜಿಲ್ಲಾ ಹೋರಾಟ ಸಮಿತಿಯ ನಿಯೋಗ ಕರೆದೊಯ್ಯಲು ಹಿಂದೇಟು ಹಾಕುತ್ತಿದ್ದಾರೆ ಎಂದರು.

ಸುಂದರ್ ಸಿಂಗ್ ಮಾತನಾಡಿ ಡಿಸೆಂಬರ್.17ರಂದು ಸಾಗರ ಜಿಲ್ಲೆ ಮಾಡಬೇಕು ಎಂಬುದಾಗಿ ಒತ್ತಾಯಿಸಿ ಸಾಗರ ಬಂದ್ ಮಾಡಲಾಗುತ್ತಿದೆ. ಸಾಗರದ ಜನತೆ, ವರ್ತಕರು ನಮ್ಮ ಬಂದ್ ಗೆ ಬೆಂಬಲ ನೀಡಬೇಕು. ಸ್ವಯಂ ಪ್ರೇರಿತರಾಗಿ ಅಂಗಡಿ-ಮುಂಗಟ್ಟು ಮುಚ್ಚಿ ಸಾಗರ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಕಾಸಿಂ ಸಾಬ್ ಮಾತನಾಡಿ ಡಿ.17ರ ಸಾಗರ ಬಂದ್ ಗೆ ಸಾಗರ ತಾಲ್ಲೂಕಿನ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಕರ್ನಾಟಕ ರಕ್ಷಣಾ ವೇದಿಕೆ, ವಕೀಲರ ಸಂಘ ಸೇರಿದಂತೆ ವಿವಿಧ ಸಂಘಗಳು ಕೈ ಜೋಡಿಸಿದ್ದಾವೆ. ಸಾಗರದ ಜನತೆಯು ಡಿ.17ರ ಬಂದ್ ಗೆ ಸಂಪೂರ್ಣ ಸಹಕಾರ ನೀಡುವಂತೆ ಕೋರಿದರು.

ಈ ಸುದ್ದಿಗೋಷ್ಠಿಯಲ್ಲಿ ಜಯರಾಂ, ಅಕ್ಬರ್, ಡಿ.ಕೆ ವೆಂಕಟೇಶ್, ಮಂಜುನಾಥ ಆಚಾರ್, ದೇವು ಆಲನಹಳ್ಳಿ, ಮನೋಕ್ ಕುಗ್ವೆ, ಗುಡ್ಡೆ ಮಂಜಪ್ಪ ಸೇರಿದಂತೆ ಇತರರು ಉಪಸ್ಥಿತಿರಿದ್ದರು.