ಬಳ್ಳಾರಿ : ನಮ್ಮ ನಾಡು-ನುಡಿಯ ಕಲೆ ಮತ್ತು ಸಂಸ್ಕೃತಿಯು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಿರಂತರವಾಗಬೇಕು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಷು ಮೋದಿನ್ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಡಾ.ರಾಜ್ ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯದ ನಾಡೋಜ ಸುಭದ್ರಮ್ಮ ಮಾನ್ಸೂರ್ ಬಯಲು ರಂಗಮಂದಿರದಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಕಲಿಕಾ ತರಬೇತಿ ಪಡೆದ ವಿದ್ಯಾರ್ಥಿನಿಯರಿಂದ ಶನಿವಾರ ಹಮ್ಮಿಕೊಂಡಿದ್ದ ಜಾನಪದ ಸಂಗೀತ ಗಾಯನ ಮತ್ತು ಶಾಸ್ತ್ರೀಯ ನೃತ್ಯ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲೆಯು ಒಂದು ಕಲ್ಪನೆಯಿಂದ ಉಗಮವಾಗುವಂತಹದ್ದು. ಯಾವ ಕಲೆ ಯಾರಲ್ಲಿ ಅಡಗಿರುತ್ತದೆ ಎಂಬುದು ತಿಳಿಯುವುದಿಲ್ಲ. ಆಂತರಿಕ ಜ್ಞಾನದಿಂದ ಮಾತ್ರ ತನ್ನಲ್ಲಿರುವ ಕಲೆ ಹೊರಹಾಕಲು ಸಾಧ್ಯವಾಗಲಿದೆ ಎಂದರು.
ಕಲೆಯು ಎಲ್ಲರಿಗೂ ಒಲಿಯುವುದಿಲ್ಲ. ಕಲಾವಿದರು ಶಿಸ್ತಿನಿಂದ ಕೂಡಿರುತ್ತಾರೆ. ಕಲೆಗೆ ಬೆಲೆ ಕಟ್ಟಲೂ ಸಾಧ್ಯವಿಲ್ಲ. ಕಲೆಯನ್ನು ಅಂತರ್ಗತ ಮಾಡಿಕೊಂಡಾಗ ಮಾತ್ರ ತಮ್ಮಲ್ಲಿರುವ ಕಲೆಯನ್ನು ಪ್ರಸ್ತುತಪಡಿಸಲು ಸಾಧ್ಯವಾಗಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಶಿಸಿಹೋಗುತ್ತಿರುವ ಕಲೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ರಾಜ್ಯ ಸರ್ಕಾರ ಮಾಡುತ್ತಿದೆ. ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ 6 ತಿಂಗಳು ಕಾಲ ಪ್ರತಿದಿನ 3 ತಾಸಿನಂತೆ ಜಾನಪದ ಸಂಗೀತ ಗಾಯನ ಮತ್ತು ಶಾಸ್ತ್ರೀಯ ನೃತ್ಯ ಪ್ರದರ್ಶನ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ನಿಲಯಪಾಲಕರಾದ ಉಷಾರಾಣಿ ಅವರು ಮಾತನಾಡಿ,ಇಂದಿನ ದಿನಗಳಲ್ಲಿ ಕಲೆ- ಸಂಸ್ಕೃತಿ ನಶಿಸುತ್ತಿದೆ. ಅದನ್ನು ವಿದ್ಯಾರ್ಥಿಗಳಲ್ಲಿ ಕಲಿಕಾ ತರಬೇತಿಯ ಮೂಲಕ ಹೊರಹಾಕುವ ಪ್ರಯತ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕಾರ್ಯವಾಗುತ್ತಿದೆ ಎಂದರು.ಕಲಿಕಾ ತರಬೇತಿ ಪಡೆದ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕೀಯರ ವಸತಿ ನಿಲಯದ ವಿದ್ಯಾರ್ಥಿನಿಯರಿಂದ ಜಾನಪದ ಸಂಗೀತ ಗಾಯನ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನ ನೋಡುಗ ಜನರ ಮನಸೂರೆಗೊಂಡು ಚಪ್ಪಾಳೆ ಗಿಟ್ಟಿಸಿಕೊಂಡರು.ಈ ಸಂದರ್ಭದಲ್ಲಿ ತರಬೇತಿ ಗುರುಗಳಾದ ಜಾನಪದ ಗಾಯಕ ಎಸ್.ಎಂ ಹುಲುಗಪ್ಪ, ನೃತ್ಯ ಕಲಾವಿದರಾದ ಡಿ.ಇಂದ್ರಾಣಿ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Bellary Enchanted folk music singing, classical dance performance