ಬೆಂಗಳೂರು: ಏಪ್ರಿಲ್ 14ರಂದು ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದಲಿತ ಸಮುದಾಯದ ಹಿರಿಯ ನಾಯಕ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ಆರೋಪಿಸಿ ಮಾದಿಗ ಸಮುದಾಯದ ವಿವಿಧ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಾಳೆ ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ.
ಸಮಬಾಳು-ಸಮಪಾಲು ತತ್ವಕ್ಕೆ ವ್ಯತಿರಿಕ್ತ: ಸಂಘಟನೆಗಳ ಕಿಡಿ
“ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆಯ ಸಂಕೇತ. ಆದರೆ ಅವರ ಜಯಂತಿಯ ಕಾರ್ಯಕ್ರಮದಲ್ಲೇ ಸಮುದಾಯದ ಹಿರಿಯ ಸಚಿವರಿಗೆ ಸ್ಥಾನ ನೀಡದೆ ಕಡೆಗಣಿಸಿರುವುದು ವಿಷಾದನೀಯ,” ಎಂದು ಸಂಘಟನೆಗಳು ಅಸಮಾಧಾನ ಹೊರಹಾಕಿವೆ. ಆಹ್ವಾನ ಪತ್ರಿಕೆಯಲ್ಲಿ ಸಚಿವರುಗಳಾದ ಡಾ. ಹೆಚ್.ಸಿ. ಮಹದೇವಪ್ಪ, ಡಾ. ಜಿ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಕೆ.ಹೆಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ ಹಾಗೂ ಶಿವರಾಜ್ ತಂಗಡಗಿ ಅವರ ಹೆಸರನ್ನು ಮುದ್ರಿಸಲಾಗಿದೆ. ಆದರೆ ಹಿರಿಯ ಸಚಿವ ತಿಮ್ಮಾಪುರ ಹಾಗೂ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ಹೆಸರನ್ನು ಕೈಬಿಟ್ಟಿರುವುದು ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ : Viral : 3 ಅಡಿ ಎತ್ತರದ ವರನ ಕೈಹಿಡಿದ 5 ಅಡಿ ಯುವತಿ
ಅಧಿಕಾರಿಗಳ ವಿರುದ್ಧ ವಕೀಲ ಹನುಮೇಶ್ ಗುಂಡೂರು ಆರೋಪ
ಈ ಕುರಿತು ಮಾತನಾಡಿರುವ ವಕೀಲರಾದ ಹನುಮೇಶ್ ಗುಂಡೂರು, “ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಚಿವರು ಹಾಗೂ ಸಮುದಾಯದ ಪ್ರಮುಖ ಪ್ರತಿನಿಧಿಗಳ ಹೆಸರಿರುವುದು ಕನಿಷ್ಠ ಶಿಷ್ಟಾಚಾರ. ಈ ಬಗ್ಗೆ ಪ್ರಧಾನ ಕಾರ್ಯದರ್ಶಿಗಳನ್ನು ವಿಚಾರಿಸಿದರೆ, ಸಚಿವರ ವಿವೇಚನೆ ಹಾಗೂ ಸೀನಿಯಾರಿಟಿ ಆಧಾರದ ಮೇಲೆ ಪಟ್ಟಿ ಸಿದ್ಧಪಡಿಸಲಾಗಿದೆ ಎನ್ನುತ್ತಾರೆ. ಸಚಿವ ತಿಮ್ಮಾಪುರ ಅವರಿಗಿಂತ ಪ್ರಿಯಾಂಕ್ ಖರ್ಗೆ ಅವರು ಹಿರಿಯರೇ? ಇದಕ್ಕೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ಇಲ್ಲಿ ಎಲ್ಲಾ ಶಿಷ್ಟಾಚಾರಗಳನ್ನು ಗಾಳಿಗೆ ತೂರಲಾಗಿದೆ,” ಎಂದು ಕಿಡಿಕಾರಿದ್ದಾರೆ.
ಪ್ರಮುಖ ಬೇಡಿಕೆಗಳು ಮತ್ತು ಎಚ್ಚರಿಕೆ:
ಅಧಿಕಾರಿಗಳ ವರ್ಗಾವಣೆ: ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಂದೇ ಸಮುದಾಯದ ಅಧಿಕಾರಿಗಳು ಬೀಡುಬಿಟ್ಟಿರುವುದರಿಂದ ಇತರ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಈ ತಪ್ಪಿಗೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು.
ಹೊಸ ಆಹ್ವಾನ ಪತ್ರಿಕೆ: ಸಚಿವ ತಿಮ್ಮಾಪುರ ಅವರ ಹೆಸರನ್ನು ಒಳಗೊಂಡ ಹೊಸ ಆಹ್ವಾನ ಪತ್ರಿಕೆಯನ್ನು ಕೂಡಲೇ ಬಿಡುಗಡೆ ಮಾಡಬೇಕು.
ಹೋರಾಟದ ಎಚ್ಚರಿಕೆ: ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ತಪ್ಪನ್ನು ಸರಿಪಡಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಗಳ ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾದಿಗ ಸಮುದಾಯವನ್ನು ಪ್ರತಿನಿಧಿಸುವ ಹಿರಿಯ ಸಚಿವರಿಗೆ ಮಾಡಿರುವ ಈ ಅಪಮಾನವನ್ನು ಸಹಿಸುವುದಿಲ್ಲ ಎಂದು ಸಂಘಟನೆಗಳು ಹೇಳಿದ್ದು, ನಾಳೆಯ ಪ್ರತಿಭಟನೆ ಸರ್ಕಾರದ ಮಟ್ಟದಲ್ಲಿ ಸಂಚಲನ ಮೂಡಿಸುವ ಸಾಧ್ಯತೆಯಿದೆ.