ಬೆಳಗಾವಿ: ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ 570 ಜನರನ್ನು ಬಂಧಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ. ಎಚ್. ಮುನಿಯಪ್ಪ ತಿಳಿಸಿದರು.
ಅವರು ವಿಧಾನ ಪರಿಷತ್‍ನಲ್ಲಿ ಸದಸ್ಯ ಸಿ.ಟಿ. ರವಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುತ್ತಾ, ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟಕ್ಕೆ ಸಂಬಂದಿಸಿದಂತೆ ಒಟ್ಟು 29603.15 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, 314 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಯಾದಗಿರಿ ಜಿಲ್ಲೆಯಲ್ಲಿ ಆಹಾರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅನ್ಯ ಇಲಾಖೆಯ ಅಧಿಕಾರಿಗಳನ್ನು ಇಲಾಖೆ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಹಾಗೂ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕೆ.ಎಫ್.ಸಿ.ಎಸ್.ಸಿ. ಗೋದಾಮು ಅಮಾನತ್ತುಗೊಳಿಸಲಾಗಿರುತ್ತದೆ.

ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಣೆ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ಇಲಾಖೆಯ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಸಿಬ್ಬಂದಿಗಳಿಗೆ ಕಾಲ ಕಾಲಕ್ಕೆ ಮೇಲ್ವಿಚಾರಣೆ ಮಾಡುವಂತೆ ನಿರ್ದೇಶನ ನೀಡಿ ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ.
ಪಡಿತರ ಚೀಟಿದಾರರು ಪಡಿತರ ಅಕ್ಕಿಯನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣಗಳು ಕಂಡುಬಂದಲ್ಲಿ ಸದರಿ ಪಡಿತರ ಚೀಟಿಗಳನ್ನು ರದ್ದುಪಡಿಸಿ ಅಂತವರ ವಿರುದ್ಧ ನಿಯಾಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.
ನ್ಯಾಯಬೆಲೆ ಅಂಗಡಿ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಜಾಗೃತಿ ಸಮಿತಿಗಳನ್ನು ರಚಿಸಿ ಪಡಿತರ ವಿತರಣೆಯನ್ನು ಪರಿಶೀಲಿಸಲಾಗುತ್ತಿದೆ. ಪ್ರತಿ ಮಾಹೆ ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಆಹಾರ ಅದಾಲತ್‍ಗಳನ್ನು ನಡೆಸಿ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ರಾಜ್ಯ ಮಟ್ಟದಲ್ಲಿ ಆಹಾರ ಜಾಗೃತ ದಳ ರಚಿಸಿ ಅಕ್ರಮಗಳ ಬಗ್ಗೆ ನಿಯಮಾನುಸಾರ ಕ್ರಮವಹಿಸಲಾಗುತ್ತಿದೆ ಎಂದರು.
570 people arrested in the state in connection with illegal storage and sale of Annabhagya rice: Minister Muniyappa












Follow Me