ಬೆಂಗಳೂರು : ರಾಜ್ಯದ ಸರ್ಕಾರಿ ಕಾಲೇಜು ಇಂಜಿನಿಯರಿಂಗ್ ಕಾಲೇಜು ಹಾಗೂ ಪಾಲಿಟೆಕ್ನಿಕ್‌ಗಳಲ್ಲಿ ಖಾಲಿಯಿರುವ 2,000 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನ ಭರ್ತಿ ಮಾಡುವ ಪ್ರಕ್ರಿಯೆಯನ್ನ ಈಗಾಗಲೇ ಆರಂಭಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇದನ್ನು ಮಿಸ್ ಮಾಡದೇ ಓದಿ : ಸಿಸಿಟಿವಿ ಸಾಕ್ಷ್ಯ ಬಯಲು ಮಾಡಿದ ಕಾವ್ಯ ಗೌಡ
ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಳೆದ 2 ದಶಕಗಳಿಂದ ಕಾಲಕಾಲಕ್ಕೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ನೇಮಕಾತಿ ಸರಿಯಾಗಿ ಆಗದಿರುವುದರಿಂದ ಶಿಕ್ಷಕರ ಕೊರತೆ ಕಾಡುತ್ತಿದೆ. ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಶೇ. 60-70 ರಷ್ಟು ಶಿಕ್ಷಕರ ಹುದ್ದೆಗಳು ಖಾಲಿಯಿರುವುದು ಸರ್ಕಾರದ ಗಮನದಲ್ಲಿದೆ. ಈ ಹಿನ್ನೆಲೆಯಲ್ಲಿ ನಾವು ಸರ್ಕಾರಿ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಹಾಗೂ ಪಾಲಿಟೆಕ್ನಿಕ್‌ಗಳಲ್ಲಿ ಖಾಲಿಯಿರುವ 2,000 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನ ಭರ್ತಿ ಮಾಡುವ ಪ್ರಕ್ರಿಯೆಯನ್ನ ಈಗಾಗಲೇ ಆರಂಭಿಸಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳ ಒಟ್ಟು ದಾಖಲಾತಿ ಅನುಪಾತ [GER) ರಾಷ್ಟೀಯ ಸರಾಸರಿಗಿಂತ ಹೆಚ್ಚಾಗಿದೆ. ಇದು ಎಲ್ಲರನ್ನೂ ಒಳಗೊಂಡ ಸಾಮಾಜಿಕ ವ್ಯವಸ್ಥೆಯನ್ನು ಪಾಲಿಸುತ್ತಿರುವುದರ ನಿದರ್ಶನವಾಗಿದೆ. 2030 ರ ವೇಳೆಗೆ 50% ಒಟ್ಟು ದಾಖಲಾತಿ ಅನುಪಾತ [GER) ಸಾಧಿಸಬೇಕಾಗಿದೆ. ಅಲ್ಲದೇ ನಮ್ಮ ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ಬಾಲಕಿಯರ ದಾಖಲಾತಿ ಬಾಲಕರಿಗಿಂತ ಹೆಚ್ಚಾಗಿದೆ. ರಾಜ್ಯದಲ್ಲಿ ಒಟ್ಟು ಉನ್ನತ ಶಿಕ್ಷಣ ದಾಖಲಾತಿಯಲ್ಲಿ ಹುಡುಗಿಯರು 51% ರಷ್ಟಿದ್ದಾರೆ ಹಾಗೂ ಸುಮಾರು 81% ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ಬಂದವರಾಗಿದ್ದಾರೆ ಎಂದು ತಿಳಿಸಿದ್ರು.

ಶಿಕ್ಷಣದ ಮೂಲಕ ಮಹಿಳೆಯರನ್ನ ಸಬಲೀಕರಣಗೊಳಿಸುವುದು ಪ್ರಮುಖ ಆದ್ಯತೆಯಾಗಿದೆ. ದೀಪಿಕಾ ವಿದ್ಯಾರ್ಥಿ ವೇತನ ಯೋಜನೆ ಅಡಿಯಲ್ಲಿ, ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ಸರ್ಕಾರಿ ಸಂಸ್ಥೆಗಳಲ್ಲಿ ಓದಿ ಯಾವುದೇ ಸಂಸ್ಥೆಯಲ್ಲಿ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ವರ್ಷಕ್ಕೆ 30,000 ರೂ. ಆರ್ಥಿಕ ಸಹಾಯವನ್ನು ಪಡೆಯುತ್ತಿದ್ದಾರೆ. ಯುನೈಟೆಡ್ ಕಿಂಗ್‌ಡಮ್‌ನ ಸಹಭಾಗಿತ್ವದಲ್ಲಿ ಚೆವೆನಿಂಗ್ ಕಾರ್ಯಕ್ರಮದ ಅಡಿಯಲ್ಲಿ, ಪ್ರತಿ ವರ್ಷ ಆಯ್ದ ಮಹಿಳಾ ಪದವೀಧರರಿಗೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ, ಒಂದು ವರ್ಷದ ಸ್ನಾತಕೋತ್ತರ ಅಧ್ಯಯನಕ್ಕಾಗಿ ಸಂಪೂರ್ಣ ವಿದ್ಯಾರ್ಥಿವೇತನದೊಂದಿಗೆ 3 ವರ್ಷಗಳ ಕಾಲ ಬೆಂಬಲ ನೀಡುತ್ತಿದ್ದೇವೆ. ಇದರಿಂದಾಗಿ ಅವರು ವಿಶ್ವದರ್ಜೆಯ ಶಿಕ್ಷಣ ಮತ್ತು ಜಾಗತಿಕ ಮಾನ್ಯತೆಯನ್ನ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಮ್ಮ ಸರ್ಕಾರವು ಭವಿಷ್ಯಕ್ಕೆ ಹೊಂದುವಂತಹ, ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯನ್ನ ನಿರ್ಮಿಸಲು ನಾವು ಸಿದ್ಧರಾಗಬೇಕಾಗಿದೆ. ಈ ದೃಷ್ಟಿಕೋನಕ್ಕೆ ಸ್ಪಷ್ಟ ನಿರ್ದೇಶನ ನೀಡುವ ಸಲುವಾಗಿ, ಆಯೋಗದ ಮಧ್ಯಂತರ ಶಿಫಾರಸುಗಳನ್ನ 2024-25 ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತಂದಿದ್ದೇವೆ. ಉಳಿದ ಶಿಫಾರಸ್ಸುಗಳನ್ನ ಕೂಡಲೇ ಅನುಷ್ಠಾನ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದರು.
2,000 assistant professor posts to be filled soon, CM Siddaramaiah