ಎಡಪಕ್ಷಗಳ ಬೆಂಬಲದೊಂದಿಗೆ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆ

Tamil Nadu TVK Government Formation

ಚನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬೆನ್ನಲ್ಲೇ, ಈಗ ಎಡಪಕ್ಷಗಳು ತಮ್ಮ ಬೆಂಬಲವನ್ನು ಘೋಷಿಸಿವೆ. ಇದರೊಂದಿಗೆ ತಮಿಳುನಾಡಿನಲ್ಲಿ ವಿಜಯ್ ಅವರು ಮುಖ್ಯಮಂತ್ರಿಯಾಗುವ ಹಾದಿ ಸುಗಮವಾಗಿದೆ. ಭಾರತೀಯ ಕಮ್ಯುನಿಸ್ಟ್ ಪಕ್ಷ (CPI), ಸಿಪಿಐಎಂ (CPI-M) ಮತ್ತು ವಿಡುತಲೈ ಚಿರುತೈಗಲ್ ಕಚ್ಚಿ (VCK) ಪಕ್ಷಗಳು ಟಿವಿಕೆಗೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿವೆ ಎಂದು ಸುದ್ದಿ ಸಂಸ್ಥೆ ಎಎನ್ಐ (ANI) ವರದಿ ಮಾಡಿದೆ.

ಇದನ್ನೂ ಓದಿ : ರೈಲ್ವೆ ಇಲಾಖೆಯಲ್ಲಿ 11ಸಾವಿರಕ್ಕೂ ಅಧಿಕ ಹುದ್ದೆಗಳ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟ

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನೂ ಓದಿ : ರಾಜ್ಯದ ಸೂರ್ಯಕಾಂತಿ ಬೆಳೆಗಾರರ ಗಮನಕ್ಕೆ: ಪ್ರತಿ ಕ್ವಿಂಟಾಲ್‌ಗೆ 7,721 ರೂ ಬೆಂಬಲ ಬೆಲೆ ಖರೀದಿಗೆ ಸರ್ಕಾರದ ಆದೇಶ

ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ ಟಿವಿಕೆ ಪಕ್ಷವು ಏಕಾಂಗಿಯಾಗಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿತ್ತು. ಬಹುಮತಕ್ಕೆ ಕೇವಲ ಹತ್ತು ಸ್ಥಾನಗಳ ಕೊರತೆಯಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಐವರು ಶಾಸಕರು ಈಗಾಗಲೇ ತಮ್ಮ ಬೆಂಬಲವನ್ನು ಪತ್ರದ ಮೂಲಕ ವಿಜಯ್ ಅವರಿಗೆ ಹಸ್ತಾಂತರಿಸಿದ್ದರು. ಈಗ ಎಡಪಕ್ಷಗಳಾದ ಸಿಪಿಐ, ಸಿಪಿಐಎಂ ಮತ್ತು ವಿಸಿಕೆ ಪಕ್ಷಗಳು ತಲಾ ಎರಡು ಸ್ಥಾನಗಳನ್ನು ಹೊಂದಿದ್ದು, ಈ ಆರು ಸದಸ್ಯರ ಬೆಂಬಲ ಸೇರಿದಂತೆ ಟಿವಿಕೆ ಮೈತ್ರಿಕೂಟದ ಒಟ್ಟು ಸಂಖ್ಯಾಬಲವು 119ಕ್ಕೆ ತಲುಪಿದೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ಸಂಖ್ಯೆ (Magic Number) 118 ಆಗಿದ್ದು, ವಿಜಯ್ ಅವರ ಪಕ್ಷವು ಈ ಸಂಖ್ಯೆಯನ್ನು ಯಶಸ್ವಿಯಾಗಿ ದಾಟಿದೆ.

ರಾಜ್ಯದಲ್ಲಿ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ದಶಕಗಳ ಕಾಲದ ಪ್ರಾಬಲ್ಯಕ್ಕೆ ಈಗ ವಿಜಯ್ ಬ್ರೇಕ್ ಹಾಕಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ ವಿಜಯ್ ಅವರು ನೀಡಿದ್ದ ‘ಸಮಾನತೆ’ ಮತ್ತು ‘ಅವ್ಯವಸ್ಥೆಯ ವಿರುದ್ಧ ಬದಲಾವಣೆ’ ಎಂಬ ಘೋಷಣೆಗಳು ಯುವ ಸಮುದಾಯವನ್ನು ಸೆಳೆಯುವಲ್ಲಿ ಯಶಸ್ವಿಯಾದವು. ಎಡಪಕ್ಷಗಳು ಈಗ ಟಿವಿಕೆಗೆ ಬೆಂಬಲ ನೀಡಲು ಮುಖ್ಯ ಕಾರಣವೆಂದರೆ ಕೋಮು ಶಕ್ತಿಗಳನ್ನು ಅಧಿಕಾರದಿಂದ ದೂರ ಇಡುವುದು ಮತ್ತು ರಾಜ್ಯದಲ್ಲಿ ಪ್ರಗತಿಪರ ಆಡಳಿತಕ್ಕೆ ಅವಕಾಶ ಮಾಡಿಕೊಡುವುದು ಎಂದು ವಿಶ್ಲೇಷಿಸಲಾಗುತ್ತಿದೆ.

ಟಿವಿಕೆ ಹಿರಿಯ ಮುಖಂಡ ಕಾಮರಾಜ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಂಜೆ 4.30ಕ್ಕೆ ಪಕ್ಷದ ಮುಖ್ಯಸ್ಥ ವಿಜಯ್ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ತಮ್ಮ ಸಂಖ್ಯಾಬಲದ ಪತ್ರವನ್ನು ಸಲ್ಲಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಸಿಪಿಐ, ಸಿಪಿಐಎಂ ಮತ್ತು ವಿಸಿಕೆ ಪಕ್ಷಗಳ ನಾಯಕರು ವಿಜಯ್ ಅವರ ನಾಯಕತ್ವಕ್ಕೆ ಒಪ್ಪಿಗೆ ಸೂಚಿಸಿರುವುದು ನಮಗೆ ಅತ್ಯಂತ ಸಂತಸದ ವಿಷಯವಾಗಿದೆ. ರಾಜ್ಯದ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲು ತೀರ್ಮಾನಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಹರಡುತ್ತಿದ್ದಂತೆಯೇ ಚೆನ್ನೈನ ಪನೈಯೂರಿನಲ್ಲಿರುವ ಟಿವಿಕೆ ಕೇಂದ್ರ ಕಚೇರಿಯ ಮುಂಭಾಗದಲ್ಲಿ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದಾರೆ. ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದ ವಿಜಯ್ ಅವರು ಈಗ ರಾಜಕೀಯ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಸರ್ಕಾರ ರಚನೆಯ ಪ್ರಕ್ರಿಯೆ ಪೂರ್ಣಗೊಂಡ ನಂತರ ಶೀಘ್ರದಲ್ಲೇ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಇದು ದಕ್ಷಿಣ ಭಾರತದ ರಾಜಕೀಯದಲ್ಲಿ ಹೊಸ ಬದಲಾವಣೆಯ ಮುನ್ನುಡಿಯಾಗಲಿದೆ.