ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ತಿರುವುಗಳು ಸಿಗುತ್ತಿವೆ. ಇದೀಗ ಪ್ರಕರಣದ ಮೂವರು ಆರೋಪಿಗಳು ಪೊಲೀಸರ ತನಿಖೆಯ ರೀತಿಗೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ತನಿಖಾಧಿಕಾರಿಗಳು ಸಾಕ್ಷ್ಯಗಳನ್ನು ತಿರುಚಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಪೊಲೀಸರ ವಿರುದ್ಧ ಆರೋಪಿಗಳ ಗಂಭೀರ ದೂರು : ಆರೋಪಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಮುಖವಾಗಿ ಎರಡು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ
ಇದನ್ನು ಮಿಸ್ ಮಾಡದೇ ಓದಿ : ಶಿವಮೊಗ್ಗದಲ್ಲಿ ದಾರುಣ ಅಂತ್ಯ : ಜಗಳ ಬಿಡಿಸಲು ಹೋದ SSLC ವಿದ್ಯಾರ್ಥಿ ಹಲ್ಲೆಗೆ ಬಲಿ
ಮೊಬೈಲ್ ವಶದ ಸ್ಥಳದ ಬಗ್ಗೆ ಗೊಂದಲ : ಪೊಲೀಸರು ನಮ್ಮ ಮೊಬೈಲ್ಗಳನ್ನು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ವಶಕ್ಕೆ ಪಡೆದಿಲ್ಲ. ಬೇರೆ ಯಾವುದೋ ಸ್ಥಳದಲ್ಲಿ ಮೊಬೈಲ್ ವಶಪಡಿಸಿಕೊಂಡು, ಮಹಜರು ವರದಿಯಲ್ಲಿ ಕಾಮಾಕ್ಷಿಪಾಳ್ಯ ಎಂದು ಸುಳ್ಳು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ವೈಟ್ ಟೈಲ್ಸ್ Vs ಮೊಜಾಕ್ ಫ್ಲೋರ್: ದೋಷಾರೋಪ ಪಟ್ಟಿಯಲ್ಲಿ (Charge Sheet) ಲಗತ್ತಿಸಲಾದ ಫೋಟೋಗಳಲ್ಲಿ ಬಿಳಿ ಬಣ್ಣದ ಟೈಲ್ಸ್ (White Tiles) ಕಂಡುಬರುತ್ತಿದೆ. ಆದರೆ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಹಳೆಯ ಮಾದರಿಯ ಮೊಜಾಕ್ ನೆಲವಿದೆ. ಈ ವ್ಯತ್ಯಾಸವು ಪೊಲೀಸರು ಪ್ರಕರಣದ ದಾರಿ ತಪ್ಪಿಸುತ್ತಿರುವುದಕ್ಕೆ ಸಾಕ್ಷಿ ಎಂದು ಆರೋಪಿಗಳು ವಾದಿಸಿದ್ದಾರೆ.

ನ್ಯಾಯಾಧೀಶರು ಜೈಲಿಗೆ ಬರಲಿ ಎಂದ ಆರೋಪಿಗಳು : ತನಿಖೆಯಲ್ಲಿ ಪಾರದರ್ಶಕತೆ ಇಲ್ಲದ ಕಾರಣ, ನ್ಯಾಯಾಧೀಶರೇ ಖುದ್ದಾಗಿ ಜೈಲಿಗೆ ಭೇಟಿ ನೀಡಬೇಕು ಮತ್ತು ಘಟನಾ ಸ್ಥಳಗಳನ್ನು ಪರಿಶೀಲಿಸಬೇಕು ಎಂದು ಆರೋಪಿಗಳು ಕೋರಿದ್ದಾರೆ. ಅಲ್ಲದೆ, ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡಲೇ ವಶಕ್ಕೆ ಪಡೆಯಬೇಕು, ಇಲ್ಲದಿದ್ದರೆ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕೋರ್ಟ್ ನೀಡಿದ ಮಹತ್ವದ ಸೂಚನೆ : ಆರೋಪಿಗಳ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು ವಿಚಾರಣೆಯನ್ನು ನಿಗದಿಪಡಿಸಿದೆ. ಅಷ್ಟೇ ಅಲ್ಲದೆ, ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಕೋರ್ಟ್, “ಮುಂದಿನ ವಿಚಾರಣೆ ತನಕ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಯಾವುದೇ ಕಾರಣಕ್ಕೂ ನಾಶಪಡಿಸಬಾರದು” ಎಂದು ಆದೇಶಿಸಿದೆ.
ಈ ಬೆಳವಣಿಗೆಯಿಂದಾಗಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ಸಲ್ಲಿಸಿರುವ ಸಾಕ್ಷ್ಯಾಧಾರಗಳ ಮೇಲೆ ಅನುಮಾನದ ಹುತ್ತ ಬೆಳೆಯುವಂತಾಗಿದ್ದು, ಮುಂದಿನ ವಿಚಾರಣೆ ಸಾಕಷ್ಟು ಕುತೂಹಲ ಮೂಡಿಸಿದೆ.
Renukaswamy case: Accused turned against the police! What is the secret of the ‘white tails’ that reached the court?