ದಾವಣಗೆರೆ: ಮಾಜಿ ಸಚಿವರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪನವರು ನಿಧನರಾಗಿದ್ದು ಅವರ ಅಂತ್ಯ ಸಂಸ್ಕಾರವು ಸರ್ಕಾರಿ ಸಕಲ ಗೌರವಗಳೊಂದಿಗೆ ಹಾಗೂ ವೀರಶೈವ ಸಂಪ್ರದಾಯದಂತೆ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಅಪಾರ ಜನಸ್ತೋಮದೊಂದಿಗೆ ಸೋಮವಾರ ಸಂಜೆ ಜರುಗಿತು.
ಡಾ; ಶಾಮನೂರು ಶಿವಶಂಕರಪ್ಪನವರಿಗೆ 95 ವರ್ಷವಾಗಿದ್ದು ವಯೋಸಹಜ ಅನಾರೋಗ್ಯದಿಂದ ಡಿಸೆಂಬರ್ 14 ರಂದು ನಿಧನ ಹೊಂದಿದ್ದರು. 6 ಭಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ಸುಧೀರ್ಘ ರಾಜಕೀಯ ಸೇವೆಯಲ್ಲಿದ್ದ ಇವರು ರಾಜ್ಯ ಸೇರಿದಂತೆ ದಾವಣಗೆರೆಗೆ ಹೊಸ ರೂಪಕೊಟ್ಟಿದ್ದರು.
ಸೋಮವಾರ ಬೆಳಗ್ಗೆ 7.30 ಗಂಟೆಯಿಂದ ಪಾರ್ಥಿವ ಶರೀರಕ್ಕೆ ಸ್ವಗೃಹದಲ್ಲಿ ಕುಟುಂಬಸ್ಥರ ವಿವಿಧ ಪೂಜೆ ಪುನಸ್ಕಾರಗಳೊಂದಿಗೆ ವಿಧಿ ವಿಧಾನಗಳು ನಡೆದು, ಮಧ್ಯಾಹ್ನದಿಂದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಸಾವಿರಾರು ಜನರು ಆಗಮಿಸಿ ಸರತಿ ಸಾಲಿನಲ್ಲಿ ಅಂತಿಮ ದರ್ಶನ ಪಡೆದರು.

ಮಧ್ಯಾಹ್ನ 3.30 ರಿಂದ ಹೈಸ್ಕೂಲ್ ಮೈದಾನದಿಂದ ಹೊರಟು ಹಳೇ ದಾವಣಗೆರೆ ಮಂಡಿಪೇಟೆ, ಕಾಯಿಪೇಟೆ, ಅರಳಿವೃತ್ತದ ಮೂಲಕ ಕಲ್ಲೇಶ್ವರ ಮಿಲ್‍ಗೆ ಪಾರ್ಥಿವ ಶರೀರ ತಲುಪಿತು. ಸಂಜೆ 4.30 ರಿಂದ ಅಂತಿಮ ವಿಧಿ ವಿಧಾನಗಳು ನಡೆದವು.
ಅಂತಿಮ ಸಂಸ್ಕಾರದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಉಪ ಮುಖ್ಯಮಂತ್ರಿಯವರಾದ ಡಿ.ಕೆ.ಶಿವಕುಮಾರ್ ಅವರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಬೃಹತ್ ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್ ಅವರು, ಇಂಧನ ಸಚಿವರಾದ ಕೆ.ಜೆ.ಜಾರ್ಜ್‍ರವರು, ಸಮಾಜ ಕಲ್ಯಾಣ ಸಚಿವರಾದ ಡಾ; ಹೆಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ, ಅಲ್ಪಸಂಖ್ಯಾತರ ಕಲ್ಯಾಣ, ವಸತಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ ಪಾಟೀಲ, ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ.ಎಸ್.ಪಾಟೀಲ, ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ.ಸುಧಾಕರ್ ಸೇರಿದಂತೆ ಶಾಸಕರು ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿ ಪುಷ್ಪ ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು.

ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ರಾಷ್ಟ್ರಧ್ವಜವನ್ನು ಪಾರ್ಥಿವ ಶರೀರಕ್ಕೆ ಹೊದಿಸಿ ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ ಗೌರವ ಸಲ್ಲಿಸಲಾಯಿತು. ನಂತರ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿ ಅಂತಿಮವಾಗಿ ಶೋಕ ವ್ಯಕ್ತಪಡಿಸಲಾಯಿತು. ರಾಷ್ಟ್ರಧ್ವಜವನ್ನು ಅವರ ಪುತ್ರರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಸ್ತಾಂತರಿಸಿದರು. ನಂತರ ಸಾಂಪ್ರದಾಯಿಕ ಪೂಜೆ, ವಿಧಿ, ವಿಧಾನಗಳೊಂದಿಗೆ ಪಾರ್ಥಿವಶರೀರವನ್ನು ಐಕ್ಯ ಮಂಟಪದಲ್ಲಿ ಇಡಲಾಯಿತು.
ಡಾ; ಶಾಮನೂರು ಶಿವಶಂಕರಪ್ಪನವರ ಪುತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಸೊಸೆ ಹಾಗೂ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್, ಇನ್ನಿಬ್ಬರು ಪುತ್ರರಾದ ಎಸ್.ಎಸ್.ಬಕ್ಕೇಶ್, ಎಸ್.ಎಸ್.ಗಣೇಶ್ ಸೇರಿದಂತೆ ಶಾಮನೂರು ಶಿವಶಂಕರಪ್ಪನವರ ಕುಟುಂಬಸ್ಥರು ಅಂತಿಮ ವಿಧಿ ವಿಧಾನದಲ್ಲಿ ಭಾಗವಹಿಸಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಸ್.ಆರ್.ಬೊಮ್ಮಾಯಿ, ಗೃಹ ಸಚಿವರಾದ ಜಿ.ಪರಮೇಶ್ವರ್, ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ಕೃಷಿ ಸಚಿವರಾದ ಚಲುವರಾಯಸ್ವಾಮಿ, ಬಿ.ಜೆ.ಪಿ.ಪಕ್ಷದ ರಾಜ್ಯಾದ್ಯಕ್ಷರಾದ ಬಿ.ವೈ.ವಿಜಯೇಂದ್ರ ಸೇರಿದಂತೆ ಅನೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು ಅಂತಿಮ ದರ್ಶನ ಪಡೆದರು.













Follow Me