ತಮಿಳುನಾಡಿನಲ್ಲಿ ವಿಜಯ್‌ ನೇತೃತ್ವದ ಟಿವಿಕೆ ಸಾಧನೆ ಅಚ್ಚರಿ ತಂದಿದೆ : ಎಚ್.ಡಿ. ಕುಮಾರಸ್ವಾಮಿ

hd kumaraswamy

ಹಾಸನ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸಾಧನೆಯು ಇಡೀ ದೇಶದ ಗಮನ ಸೆಳೆದಿದ್ದು, ಇದು ಪ್ರಾದೇಶಿಕ ರಾಜಕಾರಣದ ಹೊಸ ದಿಕ್ಸೂಚಿಯಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು. ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ದಶಕಗಳ ಕಾಲ ಆಡಳಿತ ನಡೆಸಿವೆ. ಆದರೆ ಈ ಬಾರಿ ಜನ ಬದಲಾವಣೆಯನ್ನು ಬಯಸಿದ್ದಾರೆ. ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂಬ ಜನರ ಹಂಬಲವೇ ವಿಜಯ್ ಅವರ ಪಕ್ಷದ ಅಸಾಧಾರಣ ಸಾಧನೆಗೆ ಮೂಲ ಕಾರಣ. ಈ ಬೆಳವಣಿಗೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ, ಇದು ನಿಜಕ್ಕೂ ಅಚ್ಚರಿ ಮೂಡಿಸಿದೆ ಎಂದು ಅವರು ವಿಶ್ಲೇಷಿಸಿದರು.

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಇದನ್ನೂ ಓದಿ : ರಾಜ್ಯದ ಎಲ್ಲಾ ವಸತಿ ನಿಲಯಗಳ ನೋಂದಣಿ ಇನ್ನು ಮುಂದೆ ಕಡ್ಡಾಯ; ಕಟ್ಟುನಿಟ್ಟಿನ ಆದೇಶ

ಇದನ್ನೂ ಓದಿ : ಮೇ ತಿಂಗಳಲ್ಲೇ ಎರಡು ತಿಂಗಳ ಪಡಿತರ ಅಕ್ಕಿ ಒಟ್ಟಿಗೆ ವಿತರಣೆ ಮಾಡಲು ಅಧಿಕೃತ ಆದೇಶ

ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಲಿವೆ ಎಂಬ ವದಂತಿಗಳು ಸುಳ್ಳು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ತಮ್ಮ ರಾಜಕೀಯ ಅನುಭವದ ಪ್ರಕಾರ ಅಂತಹ ಸಾಧ್ಯತೆಗಳು ಅಲ್ಲಿ ಕಾಣಿಸುತ್ತಿಲ್ಲ. ರಾಜ್ಯಪಾಲರು ಸಂವಿಧಾನಾತ್ಮಕವಾಗಿ ಬಹುಮತದ ಸಂಖ್ಯೆಯನ್ನು ಪರಿಗಣಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ಕಾಂಗ್ರೆಸ್ ಪಕ್ಷವು ಟಿವಿಕೆ ಬೆಂಬಲಿಸುತ್ತಿರುವ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಸರ್ಕಾರಗಳನ್ನು ಅಸ್ಥಿರಗೊಳಿಸಿದ ಇತಿಹಾಸವಿದೆ ಎಂದು ಟೀಕಿಸಿದರು.

ವಿಜಯ್ ಘೋಷಿಸಿರುವ ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಕುಮಾರಸ್ವಾಮಿ, ತಮಿಳುನಾಡು ಬಜೆಟ್ ಸುಮಾರು 3.40 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಆದರೆ ಇವರು ಘೋಷಿಸಿರುವ ಯೋಜನೆಗಳಿಗೆ ಆರು ಲಕ್ಷ ಕೋಟಿ ರೂಪಾಯಿಗಳ ಅಗತ್ಯವಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಹೇಗೆ ಹೊಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಆರ್ಥಿಕ ದೃಷ್ಟಿಯಿಂದ ಇಂತಹ ಘೋಷಣೆಗಳು ಸವಾಲಿನ ಸಂಗತಿಯಾಗಿದ್ದು, ದೇವರೇ ಕಾಪಾಡಬೇಕು ಎಂದು ಮಾರ್ಮಿಕವಾಗಿ ನುಡಿದರು.

ಕರ್ನಾಟಕದ ರಾಜಕೀಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಲ್ಲಿ ಪ್ರಾದೇಶಿಕ ಪಕ್ಷಗಳು ಸ್ವತಂತ್ರವಾಗಿ ಅಧಿಕಾರ ಹಿಡಿಯುವ ವಾತಾವರಣ ಸದ್ಯಕ್ಕೆ ಪಕ್ವವಾಗಿಲ್ಲ. ಶೃಂಗೇರಿ ಮರುಎಣಿಕೆ ವಿಚಾರದಲ್ಲಿ ಕಾನೂನು ಚೌಕಟ್ಟಿನಲ್ಲಿ ಕ್ರಮಗಳು ನಡೆಯುತ್ತಿದ್ದು, ಚುನಾವಣಾ ಆಯೋಗದ ನಿರ್ಧಾರ ಮುಖ್ಯವಾಗಲಿದೆ ಎಂದು ತಿಳಿಸಿದರು.