ಕಾರ್ಕಳ: ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಬುಧವಾರ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ಮಾಹಿತಿ ಹಂಚಿಕೊಂಡರು.
ನೇಮಕಾತಿ ಪ್ರಕ್ರಿಯೆ ಆರಂಭ : “ಉದ್ಯೋಗ ಒದಗಿಸುವ ಭರವಸೆಯನ್ನು ನಮ್ಮ ಸರ್ಕಾರ ನೀಡುತ್ತದೆ. ಒಳಮೀಸಲಾತಿ ಕಾರಣದಿಂದಾಗಿ ನೇಮಕಾತಿ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿತ್ತು. ಆದರೆ ಈಗ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು,” ಎಂದು ಸಿಎಂ ತಿಳಿಸಿದರು.
ಆನೆ ದಾಳಿ ತಡೆಗೆ ಬೃಹತ್ ಬ್ಯಾರಿಕೇಡ್ : ಚಿಕ್ಕಮಗಳೂರು ಮತ್ತು ಕಾಡಂಚಿನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಆನೆ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ವನ್ಯಪ್ರಾಣಿಗಳ ಸಂಖ್ಯೆ ಹೆಚ್ಚಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷ ಸಂಭವಿಸುತ್ತಿದೆ. ಇದನ್ನು ತಡೆಯಲು ಕಾಡಂಚಿನ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬ್ಯಾರಿಕೇಡ್ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ,” ಎಂದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ಪಷ್ಟನೆ : ಡಿಪಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಹಾಗೂ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ಬಗ್ಗೆ ಉತ್ತರಿಸಿದ ಸಿಎಂ, “ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52,000 ಕೋಟಿ ರೂ. ವೆಚ್ಚವಾಗುತ್ತಿದೆ. ಇದುವರೆಗೆ ಒಟ್ಟು 1,20,000 ಕೋಟಿ ರೂ.ಗಳನ್ನು ಜನರಿಗೆ ತಲುಪಿಸಲಾಗಿದೆ. ಆದರೂ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆಯಾಗಿಲ್ಲ, ಅಭಿವೃದ್ಧಿ ನಿರಂತರವಾಗಿ ಸಾಗಲಿದೆ,” ಎಂದು ಸ್ಪಷ್ಟಪಡಿಸಿದರು. ಸಚಿವ ಸ್ಥಾನದ ಆಕಾಂಕ್ಷಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಶಾಸಕರು ಸಚಿವರಾಗಲು ಬಯಸುವುದು ತಪ್ಪಲ್ಲ. ಆದರೆ ಮೊದಲ ಬಾರಿ ಶಾಸಕರಾದವರಿಗೆ ಸಚಿವ ಸ್ಥಾನ ನೀಡದಿರಲು ಪಕ್ಷ ನಿರ್ಧರಿಸಿದೆ,” ಎಂದು ತಿಳಿಸಿದರು.