ನವದೆಹಲಿ: ದಕ್ಷಿಣ ಭಾರತದ ಸುಂದರ ರಾಜ್ಯ ‘ಕೇರಳ’ ಇನ್ಮುಂದೆ ಅಧಿಕೃತವಾಗಿ ‘ಕೇರಳಂ’ (Keralam) ಎಂದು ಕರೆಯಲ್ಪಡಲಿದೆ. ಕೇರಳ ರಾಜ್ಯ ಸರ್ಕಾರ ಸಲ್ಲಿಸಿದ್ದ ಹೆಸರು ಬದಲಾವಣೆಯ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಇಂದು ಮಹತ್ವದ ಅನುಮೋದನೆ ನೀಡಿದೆ.
ದೆಹಲಿಯ ನೂತನ ಪ್ರಧಾನ ಮಂತ್ರಿ ಕಚೇರಿ ‘ಸೇವಾ ತೀರ್ಥ’ದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂಬುದು ವಿಶೇಷ
ಹೆಸರು ಬದಲಾವಣೆಯ ಹಿನ್ನೆಲೆ: ಮಲಯಾಳಂ ಮೂಲ: ಕೇರಳವನ್ನು ಸ್ಥಳೀಯ ಮಲಯಾಳಂ ಭಾಷೆಯಲ್ಲಿ ‘ಕೇರಳಂ’ ಎಂದೇ ಕರೆಯಲಾಗುತ್ತದೆ. ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಮಲಯಾಳಂ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ‘ಕೇರಳಂ’ ರಾಜ್ಯ ರಚಿಸಬೇಕು ಎಂಬ ಆಶಯವಿತ್ತು.
ವಿಧಾನಸಭೆಯ ನಿರ್ಣಯ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಡಿಸಿದ ಪ್ರಸ್ತಾವನೆಯನ್ನು ಕೇರಳ ವಿಧಾನಸಭೆಯು ಜೂನ್ 25, 2024 ರಂದು ಸರ್ವಾನುಮತದಿಂದ ಅಂಗೀಕರಿಸಿತ್ತು. ಸಂವಿಧಾನದ 8ನೇ ಅನುಸೂಚಿಯಲ್ಲಿರುವ ಎಲ್ಲಾ ಭಾಷೆಗಳಲ್ಲೂ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಬೇಕೆಂದು ಕೇಂದ್ರಕ್ಕೆ ಮನವಿ ಮಾಡಲಾಗಿತ್ತು.
ತಾಂತ್ರಿಕ ತಿದ್ದುಪಡಿ : 2023 ರ ಆಗಸ್ಟ್‌ನಲ್ಲೇ ಮೊದಲ ಬಾರಿಗೆ ನಿರ್ಣಯ ಅಂಗೀಕರಿಸಲಾಗಿತ್ತಾದರೂ, ಕೇಂದ್ರದ ಸೂಚನೆಯಂತೆ ಕೆಲವು ತಾಂತ್ರಿಕ ಬದಲಾವಣೆಗಳನ್ನು ಮಾಡಿ ಎರಡನೇ ಬಾರಿಗೆ ಕಳುಹಿಸಿಕೊಡಲಾಗಿತ್ತು.
ಸಂವಿಧಾನದ ತಿದ್ದುಪಡಿ: ಸಂವಿಧಾನದ 3ನೇ ವಿಧಿಯ ಅಡಿಯಲ್ಲಿ ರಾಜ್ಯದ ಹೆಸರನ್ನು ಬದಲಾಯಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇರಳ ಸರ್ಕಾರ ಒತ್ತಾಯಿಸಿತ್ತು. ಈಗ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿರುವುದರಿಂದ, ಸಂವಿಧಾನದ ಮೊದಲ ಅನುಸೂಚಿಯಲ್ಲಿ ತಿದ್ದುಪಡಿ ತರುವ ಪ್ರಕ್ರಿಯೆ ನಡೆಯಲಿದೆ.
Kerala renamed to Keralam