ಶಿವಮೊಗ್ಗ: ನಗರದ ಸೂಳೆಬೈಲು ಬಡಾವಣೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಶಾಲಾ ವಿದ್ಯಾರ್ಥಿಗಳ ನಡುವಿನ ಕ್ಷುಲ್ಲಕ ಜಗಳವನ್ನು ಬಿಡಿಸಲು ಹೋದ 16 ವರ್ಷದ ಎಸ್ಎಸ್ಎಲ್ಸಿ ವಿದ್ಯಾರ್ಥಿ ಸಂಕೇತ್, ಹಲ್ಲೆಗೊಳಗಾಗಿ ದಾರುಣವಾಗಿ ಸಾವನ್ನಪ್ಪಿದ್ದಾನೆ.
ನಡೆದಿದ್ದೇನು : ಸೂಳೆಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಸಂಕೇತ್, ಸೋಮವಾರ ಸಂಜೆ ಶಾಲೆಯಲ್ಲಿ ವಿಶೇಷ ತರಗತಿ (Special Class) ಮುಗಿಸಿ ಹೊರಬಂದಿದ್ದನು. ಈ ವೇಳೆ ಶಾಲೆಯ ಆವರಣದ ಬಳಿ ಇತರ ಕೆಲವು ವಿದ್ಯಾರ್ಥಿಗಳ ನಡುವೆ ತೀವ್ರ ಜಗಳ ನಡೆಯುತ್ತಿತ್ತು. ಇದನ್ನು ಕಂಡ ಸಂಕೇತ್, ಗಲಾಟೆ ಬಿಡಿಸಲು ಮಧ್ಯಪ್ರವೇಶಿಸಿದ್ದಾನೆ.
ಇದನ್ನು ಮಿಸ್ ಮಾಡದೇ ಓದಿ : ನೌಕರರೇ ಗಮನಿಸಿ : ಇನ್ಮುಂದೆ ಮೊಬೈಲ್ ಮೂಲಕವೇ ಹಾಜರಾತಿ ದಾಖಲಿಸುವುದು ಮಸ್ಟ್
ಆದರೆ, ಉದ್ರಿಕ್ತರಾಗಿದ್ದ ನಾಲ್ವರು ವಿದ್ಯಾರ್ಥಿಗಳು ಸಂಕೇತ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ ಪರಿಣಾಮ, ಸಂಕೇತ್ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ.
ಓದಿನಲ್ಲಿ ಚುರುಕಾಗಿದ್ದ ಬಾಲಕ : ಸಂಕೇತ್ ಓದಿನಲ್ಲಿ ಅತ್ಯಂತ ಚುರುಕಾಗಿದ್ದ ವಿದ್ಯಾರ್ಥಿಯಾಗಿದ್ದನು. ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಮಗ ಅಕಾಲಿಕವಾಗಿ ಸಾವನ್ನಪ್ಪಿರುವುದು ಕುಟುಂಬಸ್ಥರಲ್ಲಿ ತೀವ್ರ ಆಘಾತ ಮೂಡಿಸಿದೆ. ಮನೆಯವರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಸೂಳೆಬೈಲು ಬಡಾವಣೆಯಲ್ಲಿ ಶೋಕ ಸಾಗರ ಆವರಿಸಿದೆ.

ಇಬ್ಬರ ಬಂಧನ, ತನಿಖೆ ಚುರುಕು : ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಶಿವಮೊಗ್ಗ ಎಸ್ಪಿ ನಿಖಿಲ್ ಅವರು ಮಾಹಿತಿ ನೀಡಿ, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಉಳಿದವರಿಗಾಗಿ ಶೋಧ ಮುಂದುವರಿದಿದೆ, ಎಂದು ತಿಳಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ನಡೆದ ಈ ಗಲಾಟೆ ಒಂದು ಉದಯೋನ್ಮುಖ ಜೀವವನ್ನು ಬಲಿಪಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.
Tragic end in Shivamogga: SSLC student attacked while trying to resolve a fight