ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಸಾರ್ವಜನಿಕರು ಸೇವಿಸುವ ಆಹಾರದ ಗುಣಮಟ್ಟ ಮತ್ತು ಸುರಕ್ಷತಾ ಅಂಶಗಳನ್ನು ಖಾತರಿಪಡಿಸುವ ಮತ್ತು ಆ ಮೂಲಕ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.
ಅಕ್ಟೋಬರ್-2024ರ ಮಾಹೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಸೂಕ್ತ ಕ್ರಮಗಳನ್ನು ಜರುಗಿಸಲಾಗಿರುತ್ತದೆ.
ಮಾಧ್ಯಮಗಳಲ್ಲಿ ಚೀನಾ ದೇಶದಿಂದ ಸರಬರಾಜಾಗುತ್ತಿರುವುದಾಗಿ ಹೇಳಲಾದ ಕೃತಕ/ನಿಷೇಧಿತ ಬೆಳ್ಳುಳ್ಳಿಯು ರಾಜ್ಯಾದ್ಯಂತ ಮಾರಾಟವಾಗುತ್ತಿರುವ ಬಗ್ಗೆ ಪ್ರಚಾರವಾಗುತ್ತಿದ್ದ ಹಿನ್ನೆಲೆಯಲ್ಲಿ ವಿಶೇಷ ಆಂದೋಲನವನ್ನು ಕೈಗೊಳ್ಳುವ ಮೂಲಕ ರಾಜ್ಯಾದ್ಯಂತ 154 ಬೆಳ್ಳುಳ್ಳಿ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ಅವುಗಳಲ್ಲಿ 147 ಮಾದರಿಗಳು ಸುರಕ್ಷಿತ ಎಂದು. 07 ಮಾದರಿಗಳು Fungus ಬೆಳವಣಿಗೆಯಾಗಿದ್ದು, ಕೊಳೆತಿದ್ದ ಹಿನ್ನೆಲೆಯಲ್ಲಿ ಅಸುರಕ್ಷಿತ (Unsafe) ಎಂದು ವರದಿಯಾಗಿರುತ್ತದೆ.
ದೀಪಾವಳಿ ಹಬ್ಬದ ಸಮಯದಲ್ಲಿ ಹೆಚ್ಚಿನ ಸಿಹಿ ತಿಂಡಿಗಳು ಮಾರಾಟವಾಗುವ ಹಿನ್ನೆಲೆಯಲ್ಲಿ 151 ಸಿಹಿತಿಂಡಿಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ಅವುಗಳಲ್ಲಿ 143 ಮಾದರಿಗಳು ಸುರಕ್ಷಿತ ಎಂದು, 09 ಮಾದರಿಗಳಲ್ಲಿ ಕೃತಕ ಬಣ್ಣಗಳ ಬಳಕೆ ಕಂಡುಬಂದಿದ್ದು ಅಸುರಕ್ಷಿತ (Unsafe) ಎಂದು ವರದಿಯಾಗಿರುತ್ತದೆ.
ಹೊರ ರಾಜ್ಯಗಳಲ್ಲಿ ಗೋಲ್ ಗಪ್ಪಾ ರುಚಿಯನ್ನು ಹೆಚ್ಚಿಸಲು ಅದಕ್ಕೆ ಶೌಚಾಲಯ ಸ್ವಚ್ಛಗೊಳಿಸಲು ಬಳಸುವ ಹಾರ್ಪಿಕ್ ಮತ್ತು ಯೂರಿಯಾ ಗೊಬ್ಬರ ಬಳಸುತ್ತಿರುವ ಮತ್ತು ಗೋಲ್‍ಗಪ್ಪಾ ಹಿಟ್ಟನ್ನು ಕಾಲಿನಲ್ಲಿ ತುಳಿದು ತಯಾರಿಸುತ್ತಿರುವ ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಸಂಬಂಧಿಸಿದಂತೆ ರಾಜ್ಯಾದ್ಯಂತ ಗೋಲ್ ಗಪ್ಪಾಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸುವ ಕಾರ್ಯವು ಪುಗತಿಯಲ್ಲಿರುತ್ತದೆ.
ಇದಲ್ಲದೆ, ಅಕ್ಟೋಬರ್-24ರ ಮಾಹೆಯ ಕೊನೆಯ ವಾರದಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳಲ್ಲಿ 1201 ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ಅವುಗಳಲ್ಲಿ 65 ಆಹಾರ ಮಾದರಿಗಳ ವಿಶ್ಲೇಷಣಾ ಕಾರ್ಯವು ಮುಕ್ತಾಯಗೊಂಡಿದ್ದು, ಎಲ್ಲಾ 65 ಮಾದರಿಗಳ ವಿಶ್ಲೇಷಣಾ ವರದಿಗಳು ಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿಕೆ ಮಾದರಿಗಳ ವಿಶ್ಲೇಷಣಾ ಪ್ರಕ್ರಿಯೆಯು ಚಾಲ್ತಿಯಲ್ಲಿರುತ್ತದೆ.
ಇದಲ್ಲದೆ ಕಳೆದ ಮೂರು ತಿಂಗಳುಗಳಲ್ಲಿ ಕೇರಳ ರಾಜ್ಯದಲ್ಲಿ ತಯಾರಿಸಲ್ಪಟ್ಟು ರಾಜ್ಯದ ಗಡಿ ಜಿಲ್ಲೆಯಾದ ಕೊಡಗು ಜಿಲ್ಲೆಯಲ್ಲಿ ಮಾರಾಟವಾಗುತ್ತಿದ್ದ ಖಾರಾ ಮಿಕ್ಸರ್, ಚಿಪ್ಸ್, ಹಲ್ಲಾ, ಮುರುಕು, ರಸ್ತೆ, ಡ್ರೈ ಫೂಟ್ಸ್‍ಗಳು, ಸಿಹಿತಿಂಡಿಗಳು ಸೇರಿದಂತೆ ಹಲವು ವಿಧದ ಆಹಾರ ಪದಾರ್ಥಗಳ 90 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ಅವುಗಳಲ್ಲಿ 31 ಮಾದರಿಗಳುAlura Red, Carmoisine, Tartrazine, Sunset Yellow ಸೇರಿದಂತೆ ಕೃತಕ ಬಣ್ಣಗಳನ್ನು ಬಳಸಿರುವುದು ವಿಶ್ಲೇಷಣಾ ಫಲಿತಾಂಶದಲ್ಲಿ ಖಚಿತವಾಗಿರುತ್ತದೆ. ಅಲ್ಲದೆ ಹಲವಾರು ಆಹಾರ ಪದಾರ್ಥಗಳ ಪೆÇಟ್ಟಣಗಳ ಮೇಲೆ ತಯಾರಿಕಾ ದಿನಾಂಕ, ತಯಾರಿಕೆ ಮಾಡುವವರ ವಿವರಗಳು ಇಲ್ಲದೆ ಇರುವುದು, ತಯಾರಿಕಾ ದಿನಾಂಕವನ್ನು ಮುಂಚಿತವಾಗಿ ನಮೂದು ಮಾಡಿರುವುದು, FSSAI ನೊಂದಣಿ/ಪರವಾನಿಗೆ ಸಂಖ್ಯೆ ಮುದ್ರಿತವಾಗಿಲ್ಲದಿರುವುದು ಸಹ ಕಂಡುಬಂದಿರುತ್ತದೆ.
ಆಹಾರ ಪದಾರ್ಥಗಳ ತಯಾರಿಕಾ ಘಟಕಗಳ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಲು ಆಯುಕ್ತರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಕೇರಳ ರಾಜ್ಯ ರವರಿಗೆ ಪತ್ರ ಸಹ ಬರೆಯಲಾಗಿರುತ್ತದೆ.ಸಾರ್ವಜನಿಕರ ಮತ್ತು ಆಹಾರ ಉದ್ದಿಮೆದಾರರ ಸುರಕ್ಷತೆಯ ದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಜರುಗಿಸಲಾಗುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Sale of artificial/banned garlic across the state: Food Safety and Standards Department