ತುಮಕೂರು: ತುಮಕೂರು ಜನತೆಯ ಬಹುದಿನಗಳ ಬೇಡಿಕೆಯಾದ ರೆಗ್ಯುಲರ್ ಪ್ಯಾಸೆಂಜರ್ ಫ್ರೆಂಡ್ಲಿ ಮೆಮು ಟ್ರೈನ್ ಸರ್ವಿಸ್ ಓಡಾಟಕ್ಕೆ ರೈಲ್ವೆ ಇಲಾಖೆ ಅನುಮೋದನೆ ನೀಡಿರುವುದಾಗಿ ಕೇಂದ್ರ ಸಚಿವ ವಿ. ಸೋಮಣ್ಣರವರು ತಿಳಿಸಿದ್ದಾರೆ.
ತುಮಕೂರುನಿಂದ ಬೆಂಗಳೂರು ಹಾಗೂ ಬೆಂಗಳೂರಿಂದ ತುಮಕೂರಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪ್ಯಾಸೆಂಜರ್ ರೈಲು ಓಡಾಡಿಸಲು ತುಮಕೂರು ಜನತೆಯ ಬಹಳ ದಿನಗಳ ಬೇಡಿಕೆ ಇತ್ತು. ಮಾನ್ಯ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರು ಹಾಗೂ ತುಮಕೂರಿನ ಸಂಸದರಾದ ವಿ.ಸೋಮಣ್ಣ ರವರ ಬಳಿ ತುಮಕೂರಿನ ಜನತೆ ತಮ್ಮ ಬೇಡಿಕೆಯನ್ನು ಇಟ್ಟಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು ಈ ಬಗ್ಗೆ ಕ್ರಮ ಜರುಗಿಸುವುದಾಗಿ ತುಮಕೂರಿನ ಜನತೆಗೆ ಅವರ ಮೊದಲ ಭೇಟಿಯಲ್ಲೇ ಭರವಸೆ ನೀಡಿದ್ದರು.
ಇದರ ಪ್ರತಿಫಲವಾಗಿ ಸೆಪ್ಟೆಂಬರ್ 02 ರಂದು ರೈಲ್ವೆ ಇಲಾಖೆ ತುಮಕೂರು-ಯಶವಂತಪುರ ಮಾರ್ಗವಾಗಿ ಮೆಮು (MEMU) ರೈಲು ಓಡಾಟಕ್ಕೆ ಅನುಮೋದನೆ ಹೊರಡಿಸಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವರು ವಿ. ಸೋಮಣ್ಣ ರವರು ತಿಳಿಸಿದ್ದಾರೆ.
ಮೆಮು ರೈಲು ಸೇವೆ ವಿವರ ತುಮಕೂರು-ಯಶವಂತಪುರ ಮೆಮು ಟ್ರೈನ್ 06201 (66561) – ಬೆಳಗ್ಗೆ 8.55ಕ್ಕೆ ತುಮಕೂರಿಂದ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ. ಟ್ರೈನ್ ಸಂಖ್ಯೆ 06202 (66562) – ಯಶವಂತಪುರದಿಂದ 5.40ಕ್ಕೆ ಹೊರಟು ಸಾಯಂಕಾಲ 7.05ಕ್ಕೆ ತುಮಕೂರು ತಲುಪಲಿದೆ. ಪ್ರತಿ ಸೋಮವಾರ ವಿಶೇಷ ಮೆಮು ಟ್ರೈನ್ ನಂಬರ್ 06205 (6565) ಬಾಣಸವಾಡಿ ರೈಲ್ವೆ ನಿಲ್ದಾಣದಿಂದ 6.15ಕ್ಕೆ ಹೊರಟು ತುಮಕೂರಿಗೆ 8.35ಕ್ಕೆ ತಲುಪಲಿದೆ. ಅದೇ ರೀತಿ ಪ್ರತಿ ಶನಿವಾರ ವಿಶೇಷ ಮೆಮು ಟ್ರೈನ್ ನಂಬರ್ 06206 (66566) ತುಮಕೂರಿನಿಂದ ಸಾಯಂಕಾಲ 7.40ಕ್ಕೆ ಹೊರಟು ರಾತ್ರಿ 10.05ಕ್ಕೆ ಬಾಣಸವಾಡಿ ತಲುಪಲಿದೆ.
ಈ ಮೆಮು ರೈಲು ಮಾರ್ಗ ಮಧ್ಯದಲ್ಲಿ ಕ್ಯಾತಸಂದ್ರ, ಹೀರೇಹಳ್ಳಿ, ದಾಬಸ್ ಪೇಟೆ, ನಿಡವಂದ, ಮುದ್ದಲಿಂಗನಹಳ್ಳಿ, ದೊಡ್ಡಬೆಲೆ, ಭೈರನಾಯಕನಹಳ್ಳಿ, ಗೊಲ್ಲಹಳ್ಳಿ, ಸೋಲದೇವನಹಳ್ಳಿ ಮತ್ತು ಚಿಕ್ಕಬಾಣಾವರ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಭಾನುವಾರ ಹೊರತುಪಡಿಸಿ ವಾರದ 6 ದಿನಗಳಲ್ಲಿ ತುಮಕೂರು-ಯಶವಂತಪುರ ಮಾರ್ಗದಲ್ಲಿ ಈ ಮೆಮು ರೈಲು ಚಲಿಸಲಿದೆ.
ಯಶವಂತಪುರ – ಹೊಸೂರು ಮೆಮು ರೈಲು ಓಡಾಟಕ್ಕು ಸಹ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಟ್ರೈನ್ ಸಂಖ್ಯೆ 06203 (66563) ಯಶವಂತಪುರ – ಹೊಸೂರು ಮಾರ್ಗವಾಗಿ ಮೆಮು ರೈಲು ಚಲಿಸಲಿದ್ದು ಬೆಳಗ್ಗೆ 10.45ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 12.30ಕ್ಕೆ ಹೊಸೂರು ತಲುಪಲಿದೆ. ಅದೇ ರೀತಿ ಟ್ರೈನ್ ಸಂಖ್ಯೆ 06204 (66564) ಹೊಸೂರು – ಯಶವಂತಪುರ ಮೆಮು ಸಾಯಂಕಾಲ 3.20ಕ್ಕೆ ಹೊಸೂರಿನಿಂದ ಹೊರಟು ಸಾಯಂಕಾಲ 5.15ಕ್ಕೆ ಯಶವಶವಂತಪುರ ತಲುಪಲಿದೆ.
ಈ ರೈಲು ಹೆಬ್ಬಾಳ, ಬಾಣಸವಾಡಿ, ಬೆಳ್ಳಂದೂರು ರಸ್ತೆ, ಕಾರ್ಮೆಲರಾಂ, ಹೀಲಲಿಗೆ ಮತ್ತು ಆನೆಕಲ್ ರಸ್ತೆ ಮಾರ್ಗ ಮದ್ಯದಲ್ಲಿನ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ಇನ್ನೂ ಕೆಲವೇ ದಿನಗಳಲ್ಲಿ ಈ ಎರಡು ಮಾರ್ಗ ಮಧ್ಯದಲ್ಲಿ ಮೆಮು (MEMU) ರೈಲುಗಳ ಓಡಾಟಕ್ಕೆ ಚಾಲನೆ ನೀಡುವುದಾಗಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣರವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ಮತ್ತು ತುಮಕೂರಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಮೆಮು ರೈಲುಗಳ ಸೇವೆಯನ್ನು ಒದಗಿಸಿದ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರಿಗೆ ರಾಜ್ಯದ ಜನತೆಯ ಪರವಾಗಿ ಕೇಂದ್ರ ಸಚಿವರಾದ ವಿ.ಸೋಮಣ್ಣ ರವರು ಅಭಿನಂದನೆ ತಿಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.