ಬೆಂಗಳೂರು: ಬೆಂಗಳೂರು ಅ : ಪೊಲೀಸರು ಮುಕ್ತವಾಗಿ, ಸ್ವತಂತ್ರವಾಗಿ ಕೆಲಸ ಮಾಡಲು ನಮ್ಮ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.ಪೊಲೀಸ್ ಸಂಸ್ಮರಣಾ ದಿನದಂದು ಹುತಾತ್ಮ ಪೊಲೀಸ್ ಸಿಬ್ಬಂದಿಗೆ ನಮನ ಸಲ್ಲಿಸಿ ಮಾತನಾಡಿದರು.
ಜನರ ಪ್ರಾಣ, ಆಸ್ತಿ ರಕ್ಷಿಸುವ ಪೊಲೀಸ್ ಸಿಬ್ಬಂದಿಯ ಹಿತ ರಕ್ಷಿಸಲು ಸರ್ಕಾರ ಬದ್ದವಾಗಿದೆ. ಇದಕ್ಕಾಗಿ 2025 ರಲ್ಲಿ 10 ಸಾವಿರ ಪೊಲೀಸ್ ವಸತಿ ಮನೆಗಳ ನಿರ್ಮಾಣಕ್ಕೆ 2000 ಕೋಟಿ ನೀಡಿದ್ದೇವೆ. 200 ಕೋಟಿ ವೆಚ್ಚದಲ್ಲಿ 100 ಹೊಸ ಠಾಣೆಗಳ ನಿರ್ಮಾಣ ಆಗುತ್ತಿವೆ
ಪೊಲೀಸ್ ಮಕ್ಕಳಿಗಾಗಿ 7 ಪ್ರಮುಖ ಸ್ಥಳಗಳಲ್ಲಿ 7 ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುತ್ತದೆ ಎಂದು ಘೋಷಿಸಿದರು.
ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ 216 ಮಂದಿ, ರಾಜ್ಯದಲ್ಲಿ 12 ಮಂದಿ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯದ ಮೇಲಿದ್ದಾಗಲೇ ಹುತಾತ್ಮರಾಗಿದ್ದಾರೆ. ಇವರ ಆತ್ಮಕ್ಕೆ ನಾನು ಶಾಂತಿ ಕೋರುತ್ತಲೇ ಕುಟುಂಬದವರ ದುಃಖದಲ್ಲಿ ಭಾಗಿ ಆಗುತ್ತೇನೆ. ದೇಶದಲ್ಲಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಾಗ, ಜನರ ಪ್ರಾಣ, ಮಾನ ಕಾಪಾಡುವ ಹೊತ್ತಲ್ಲಿ ಇವರೆಲ್ಲಾ ಹುತಾತ್ಮರಾಗಿದ್ದಾರೆ ಎಂದರು.
ದೇಶದಲ್ಲಿ ಆಂತರಿಕ ಭದ್ರತೆ ಕಾಪಾಡುವಲ್ಲಿ, ದೌರ್ಜನ್ಯ, ಅಪರಾಧ, ದುರಂತಗಳನ್ನು ತಡೆಯುವುದರಲ್ಲಿ ಪ್ರಮುಖ ಪಾತ್ರ ವಹಿಸುವುದು ನಮ್ಮ ಪೊಲೀಸ್ ಸಿಬ್ಬಂದಿ. ಹೀಗಾಗಿ ಇವರ ಜವಾಬ್ದಾರಿ ಬಹಳ ದೊಡ್ಡದು ಎಂದರು.
ಅಸಮಾನತೆ ಇರುವ ಸಮಾಜದಲ್ಲಿ ಶೋಷಣೆ, ದೌರ್ಜನ್ಯಗಳೂ ಇರುತ್ತವೆ. ಈ ಶೋಷಿತರ ಸಂವಿಧಾನಬದ್ದವಾದ ಹಕ್ಕುಗಳನ್ನು ಕಾಪಾಡಲು ಮುಖ್ಯ ಪಾತ್ರ ವಹಿಸುವವರು ನಮ್ಮ ಪೊಲೀಸರು. ಇವರ ಜೊತೆಗೆ ಸರ್ಕಾರ ಇರುತ್ತದೆ ಎಂದರು.
ಅಪರಾಧ ತಡೆಯಲು 6000 ಸಾವಿರ ಸಿಸಿ ಕ್ಯಾಮರಾಗಳು, 260 ಕ್ಕೂ ಹೆಚ್ಚು ಹೆದ್ದಾರಿ ಗಸ್ತು ವಾಹನಗಳು ಕರ್ತವ್ಯ ನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಗೃಹ ಸಚಿವ ಜಿ.ಪರಮೇಶ್ವರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯಕಾರ್ಯದರ್ಶಿ ಅತೀಕ್ ಎಲ್.ಕೆ., ಗೃಹ ಕಾರ್ಯದರ್ಶಿ ಉಮಾಶಂಕರ್ , ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
7 public schools to be opened at 7 prominent locations for police children: CM