ನವದೆಹಲಿ: ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ಭಾರತದ ಪ್ರಧಾನಿಯಾಗಿ ಒಟ್ಟು ೨೫ ವರ್ಷಗಳ ಸುದೀರ್ಘ ಹಾಗೂ ಅಡೆತಡೆಯಿಲ್ಲದ ಆಡಳಿತ ಪೂರೈಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜಾಗತಿಕ ನಾಯಕರು ಅಭಿನಂದನೆಗಳ ಮಳೆ ಹರಿಸಿದ್ದಾರೆ. ೨೦೦೧ ರ ಅಕ್ಟೋಬರ್ ೭ ರಂದು ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಮೋದಿ ಅವರು, ನಂತರ ೨೦೧೪ ರಲ್ಲಿ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ಇಂದಿಗೆ ಯಶಸ್ವಿ ಕಾಲು ಶತಮಾನದ ಆಡಳಿತ ಪೂರ್ಣಗೊಳಿಸಿದ್ದಾರೆ. ಈ ಐತಿಹಾಸಿಕ ಸಾಧನೆಯನ್ನು ಗೌರವಿಸಿ ಕೇಂದ್ರ ಸಚಿವ ಸಂಪುಟವು ಈಗಾಗಲೇ ಅಭಿನಂದನಾ ನಿರ್ಣಯವನ್ನು ಅಂಗೀಕರಿಸಿದೆ.
ಪ್ರಧಾನಿ ಮೋದಿ ಅವರ ಈ ಮೈಲಿಗಲ್ಲಿಗೆ ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೆವರ್, ಡೊಮಿನಿಕಾ ಪ್ರಧಾನಿ ರೂಸ್ವೆಲ್ಟ್ ಸ್ಕೆರಿಟ್ ಮತ್ತು ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರು ಅಭಿನಂದನೆ ಸಲ್ಲಿಸಿದ್ದಾರೆ. ಬೆಲ್ಜಿಯಂ ಮತ್ತು ಡೊಮಿನಿಕಾ ದೇಶಗಳೊಂದಿಗಿನ ನಿಕಟ ಬಾಂಧವ್ಯವನ್ನು ಸ್ಮರಿಸಿರುವ ನಾಯಕರು, ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಮೋದಿ ಅವರ ನಾಯಕತ್ವದ ಬಗ್ಗೆ ವಿಶೇಷ ಲೇಖನ ಬರೆದಿರುವ ಭೂತಾನ್ ಪ್ರಧಾನಿ ತ್ಶೆರಿಂಗ್ ಟೊಬ್ಗೆ, 'ಮೋದಿ ಅವರ ನಾಯಕತ್ವದಲ್ಲಿ ಜ್ಞಾನ, ಧೈರ್ಯ ಮತ್ತು ಕರುಣೆ ಎದ್ದು ಕಾಣುತ್ತದೆ' ಎಂದು ಬಣ್ಣಿಸಿದ್ದಾರೆ. ೨೦೪೭ ರ ವೇಳೆಗೆ 'ವಿಕಸಿತ ಭಾರತ' ನಿರ್ಮಿಸುವ ಮೋದಿ ಅವರ ದೂರದೃಷ್ಟಿ ಮತ್ತು 'ಭಾರತಕ್ಕಾಗಿ ಭೂತಾನ್, ಭೂತಾನ್‌ಗಾಗಿ ಭಾರತ' ಎನ್ನುವ ದ್ವಿಪಕ್ಷೀಯ ಬಾಂಧವ್ಯದ ತತ್ವವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಅಂತೆಯೇ, ಜಪಾನ್ ಪ್ರಧಾನಿ ಸನೇ ತಕೈಚಿ ಅವರು 'ಎಕ್ಸ್' ಪೋಸ್ಟ್ ಮೂಲಕ ಪ್ರಧಾನಿ ಮೋದಿಯವರಿಗೆ ಹೃತ್ಪೂರ್ವಕ ಶುಭ ಹಾರೈಸಿದ್ದಾರೆ. ಭಾರತದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಮೋದಿ ಅವರ ರಾಜಕೀಯ ನಾಯಕತ್ವ ಅತ್ಯಂತ ಪ್ರಮುಖವಾದದ್ದು ಎಂದು ಅವರು ಹೇಳಿದ್ದಾರೆ. ಮುಂಬರುವ ವರ್ಷದಲ್ಲಿ ಭಾರತ ಮತ್ತು ಜಪಾನ್ ರಾಜತಾಂತ್ರಿಕ ಬಾಂಧವ್ಯದ ೭೫ ನೇ ವರ್ಷಾಚರಣೆ ನಡೆಯಲಿದ್ದು, 'ಸ್ವತಂತ್ರ ಮತ್ತು ಮುಕ್ತ ಇಂಡೋ-ಪೆಸಿಫಿಕ್' ಪ್ರದೇಶದ ನಿರ್ಮಾಣಕ್ಕಾಗಿ ಎರಡೂ ದೇಶಗಳು ಒಟ್ಟಾಗಿ ಶ್ರಮಿಸಲಿವೆ ಎಂದು ತಕೈಚಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.