ಇಂದಿನ ಡಿಜಿಟಲ್ ಯುಗದಲ್ಲಿ ಯುವಜನತೆ ಮತ್ತು ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಸ್ಮಾರ್ಟ್‌ಫೋನ್‌ಗಳು ಹಾಗೂ ವಿವಿಧ ಅಪ್ಲಿಕೇಶನ್‌ಗಳಲ್ಲಿ ಕಳೆಯುತ್ತಿದ್ದಾರೆ. ಮಧ್ಯರಾತ್ರಿಯವರೆಗೂ ಮೊಬೈಲ್ ಪರದೆಯನ್ನು ವೀಕ್ಷಿಸುವುದು, ರೀಲ್ಸ್ ಹಾಗೂ ವಿಡಿಯೋಗಳಲ್ಲಿ ಮುಳುಗಿ ಹೋಗುವುದು ಸಾಮಾನ್ಯ ಜೀವನಶೈಲಿಯಾಗಿದೆ. ಆದರೆ, ಈ ಅಭ್ಯಾಸವು ಯುವಕರ ಆರೋಗ್ಯದ ಮೇಲೆ ನಾವು ಊಹಿಸಲೂ ಸಾಧ್ಯವಿಲ್ಲದಷ್ಟು ಭೀಕರ ಪರಿಣಾಮಗಳನ್ನು ಬೀರುತ್ತಿದೆ ಎಂಬುದನ್ನು ವೈದ್ಯಕೀಯ ಜರ್ನಲ್ 'ದಿ ಲ್ಯಾನ್ಸೆಟ್'ನಲ್ಲಿ 13 ಜಾಗತಿಕ ತಜ್ಞರು ಪ್ರಕಟಿಸಿರುವ ನೂತನ ಅಧ್ಯಯನವು ಅಂಕಿ-ಅಂಶಗಳ ಸಹಿತ ಸ್ಪಷ್ಟಪಡಿಸಿದೆ.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಆಪ್‌ಗಳನ್ನು ಯುವಜನರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿಲ್ಲ. ಬದಲಾಗಿ, ಅವರ ಗಮನ, ಸಮಯ ಹಾಗೂ ಡೇಟಾವನ್ನು ಸಂಪೂರ್ಣವಾಗಿ ಸೆರೆಹಿಡಿಯುವ ರೀತಿಯಲ್ಲಿ ರೂಪಿಸಲಾಗಿದೆ. ಅನಂತ ಸ್ಕ್ರಾಲಿಂಗ್ (Infinite Scroll), ಆಟೋಪ್ಲೇ ಮತ್ತು ಬಳಕೆದಾರರ ಇಷ್ಟಗಳಿಗೆ ತಕ್ಕಂತೆ ವಿಡಿಯೋಗಳನ್ನು ಶಿಫಾರಸು ಮಾಡುವ ವೈಶಿಷ್ಟ್ಯಗಳು ಬಳಕೆದಾರರನ್ನು ತಂತ್ರಜ್ಞಾನಕ್ಕೆ ದಾಸರನ್ನಾಗಿ ಮಾಡುತ್ತಿವೆ. ಇದು ಕೇವಲ ವೈಯಕ್ತಿಕ ಸ್ವಯಂ ನಿಯಂತ್ರಣದ ವಿಷಯವಲ್ಲ, ತಾಂತ್ರಿಕ ವಿನ್ಯಾಸಗಳೇ ಜನರ ಬಳಕೆಯ ಮಾದರಿಯನ್ನು ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ಬದಲಾಯಿಸುತ್ತಿವೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
25 ವರ್ಷದೊಳಗಿನ ಸುಮಾರು 90 ಲಕ್ಷ ಯುವಜನರನ್ನು ಒಳಗೊಂಡ 121 ವಿಭಿನ್ನ ಅಧ್ಯಯನಗಳನ್ನು ಪರಿಶೀಲಿಸಿದಾಗ, ಡಿಜಿಟಲ್ ಮಾಧ್ಯಮದ ಅತಿಯಾದ ಬಳಕೆಯು ಯುವಕರ ಆರೋಗ್ಯದ ಮೇಲೆ ನಿರಂತರ ಋಣಾತ್ಮಕ ಪರಿಣಾಮ ಬೀರುವುದು ದೃಢಪಟ್ಟಿದೆ. ದಿನಕ್ಕೆ ಎರಡು ಗಂಟೆಗಿಂತ ಹೆಚ್ಚು ಸಮಯ ಪರದೆಯ ಮುಂದೆ ಕಳೆಯುವುದರಿಂದ ಜಾಗತಿಕವಾಗಿ ಲಕ್ಷಾಂತರ ಆರೋಗ್ಯಕರ ಜೀವನ ವರ್ಷಗಳು ಒತ್ತಡ, ಆತಂಕ, ಉದ್ವೇಗ, ನಿದ್ರಾಹೀನತೆ ಮತ್ತು ಸ್ಥೂಲಕಾಯತೆಯಂತಹ ಸಮಸ್ಯೆಗಳಿಂದಾಗಿ ಕಳೆದುಹೋಗುತ್ತಿವೆ. ಹೊರಾಂಗಣ ಕ್ರೀಡೆ ಮತ್ತು ವ್ಯಾಯಾಮದ ಕೊರತೆಯು ದೈಹಿಕ ಸಾಮರ್ಥ್ಯವನ್ನು ಕುಗ್ಗಿಸುತ್ತಿದೆ.
ಹಿಂದೆ ತಂಬಾಕು ಮತ್ತು ಇಂಧನ ಕಂಪನಿಗಳು ತಮ್ಮ ಉತ್ಪನ್ನಗಳ ದುಷ್ಪರಿಣಾಮಗಳನ್ನು ಮರೆಮಾಚಿದಂತೆಯೇ, ಇಂದಿನ ಬೃಹತ್ ಟೆಕ್ ಕಂಪನಿಗಳು ಸಹ ಸರ್ಕಾರದ ನಿಯಂತ್ರಣಗಳನ್ನು ಸ್ವಾತಂತ್ರ್ಯದ ಮೇಲಿನ ಬೆದರಿಕೆ ಎಂದು ಬಿಂಬಿಸುತ್ತಾ ನಿಯಮಗಳಿಂದ ನುಣುಚಿಕೊಳ್ಳಲು ಯತ್ನಿಸುತ್ತಿವೆ. ಆದರೆ ಸರಿಯಾದ ಸರ್ಕಾರದ ನಿಯಂತ್ರಣವು ಸುರಕ್ಷಿತ ತಂತ್ರಜ್ಞಾನದ ಸೃಷ್ಟಿಗೆ ಕಾರಣವಾಗುತ್ತದೆ. ಈ ಡಿಜಿಟಲ್ ಅಪಾಯಗಳನ್ನು ತಡೆಯಲು ಸರ್ಕಾರಗಳು ಸಂಪೂರ್ಣ ಸಾಕ್ಷ್ಯಕ್ಕಾಗಿ ಕಾಯದೆ, ವಯಸ್ಸಿನ ನಿರ್ಬಂಧಗಳಷ್ಟೇ ಅಲ್ಲದೆ ಯುವಜನರಿಗೆ ಸುರಕ್ಷಿತವಾದ ಆನ್‌ಲೈನ್ ವಾತಾವರಣವನ್ನು ನಿರ್ಮಿಸಲು ತಕ್ಷಣವೇ ಬಲವಾದ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.