ಸಾಮಾನ್ಯವಾಗಿ ಬಹುತೇಕರ ಮನೆಗಳಲ್ಲಿ ಆಹಾರ ಪದಾರ್ಥಗಳು ಹಾಗೂ ಹಣ್ಣುಗಳು ಬೇಗನೆ ಹಾಳಾಗದಿರಲಿ ಮತ್ತು ತಾಜಾವಾಗಿರಲಿ ಎಂಬ ಕಾರಣಕ್ಕೆ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಡುವುದು ವಾಡಿಕೆ. ಆಹಾರವನ್ನು ಕಾಯ್ದುಕೊಳ್ಳಲು ಫ್ರಿಡ್ಜ್ ಅತ್ಯುತ್ತಮ ಸಾಧನವಾಗಿದ್ದರೂ, ಪ್ರತಿಯೊಂದು ಆಹಾರ ಹಾಗೂ ಹಣ್ಣುಗಳನ್ನು ತಂಪಾದ ವಾತಾವರಣದಲ್ಲಿ ಇಡುವುದು ಸೂಕ್ತವಲ್ಲ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಕೆಲವು ನಿರ್ದಿಷ್ಟ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅವುಗಳ ನೈಸರ್ಗಿಕ ರುಚಿ, ಮೆದುತನ ಮತ್ತು ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುವುದಲ್ಲದೆ, ಹಣ್ಣುಗಳು ಹಾಳಾಗುವ ಪ್ರಕ್ರಿಯೆಯೂ ವೇಗಗೊಳ್ಳಬಹುದು.
ಬಾಳೆಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ಅವುಗಳ ಸಿಪ್ಪೆ ಬೇಗನೆ ಕಪ್ಪಾಗುತ್ತದೆ, ಇದರಿಂದಾಗಿ ಮಕ್ಕಳು ತಿನ್ನಲು ಇಷ್ಟಪಡುವುದಿಲ್ಲ. ಹಾಗಾಗಿ ಬಾಳೆಹಣ್ಣನ್ನು ಕೋಣೆಯ ಉಷ್ಣಾಂಶದಲ್ಲಿಡುವುದು ಸೂಕ್ತ. ಇನ್ನು ಪಪ್ಪಾಯಿ, ಮಾವಿನಹಣ್ಣು, ಪೀಚ್, ಆವಕಾಡೊ ಹಾಗೂ ಹಣ್ಣಾಗದ ಬೇರ್ ಹಣ್ಣುಗಳನ್ನು ತಂಪಾದ ತಾಪಮಾನದಲ್ಲಿಟ್ಟರೆ ಅವು ಹಣ್ಣಾಗುವ ನೈಸರ್ಗಿಕ ಪ್ರಕ್ರಿಯೆಯು ನಿಧಾನಗೊಂಡು, ಅವುಗಳ ತಿರುಳಿನ ರಚನೆ ಮತ್ತು ರಸಭರಿತ ರುಚಿ ಹಾಳಾಗುತ್ತದೆ. ಆವಕಾಡೊ ಹಾಗೂ ಪೀಚ್ ಸಂಪೂರ್ಣವಾಗಿ ಹಣ್ಣಾದ ನಂತರವಷ್ಟೇ ಕೆಲವು ದಿನಗಳ ಕಾಲ ಫ್ರಿಡ್ಜ್‌ನಲ್ಲಿಡಬಹುದು.
ಅಂತೆಯೇ, ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್‌ನಲ್ಲಿಡುವುದರಿಂದ ಅದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಹಾಗೂ ಪೌಷ್ಟಿಕಾಂಶದ ಮೌಲ್ಯ ಕುಗ್ಗುತ್ತದೆ. ಲಿಚಿ ಹಣ್ಣಿನ ಸಿಪ್ಪೆ ಹೊರನೋಟಕ್ಕೆ ತಾಜಾವಾಗಿ ಕಂಡರೂ ಒಳಗಿನ ತಿರುಳು ಹಾಳಾಗುವ ಸಾಧ್ಯತೆ ಇರುತ್ತದೆ, ಆದ್ದರಿಂದ ಲಿಚಿಯನ್ನು ನೀರಿನಲ್ಲಿಟ್ಟು ಸಂಗ್ರಹಿಸುವುದು ಉತ್ತಮ ವಿಧಾನವಾಗಿದೆ. ಕಿತ್ತಳೆ ಹಣ್ಣುಗಳನ್ನು ರೆಫ್ರಿಜರೇಟರ್‌ನಲ್ಲಿಟ್ಟಾಗ ಅವು ತಮ್ಮ ರಸವನ್ನು ಕಳೆದುಕೊಂಡು ಒಣಗುತ್ತವೆ ಹಾಗೂ ಅತಿಯಾದ ಹುಳಿ ಅಥವಾ ಕಹಿ ರುಚಿಗೆ ತಿರುಗಬಹುದು.
ಅನಾನಸ್ ಅನ್ನು ಫ್ರಿಡ್ಜ್‌ನಲ್ಲಿಟ್ಟರೆ ಅದು ಅತಿಯಾಗಿ ಮೃದುವಾಗಿ ನೈಸರ್ಗಿಕ ರುಚಿ ಕಳೆದುಕೊಳ್ಳುತ್ತದೆ. ಅದೇ ರೀತಿ ಸೇಬು ಹಣ್ಣುಗಳು ತಂಪಾದ ವಾತಾವರಣದಲ್ಲಿ ತಮ್ಮ ಗರಿಗರಿತನವನ್ನು ಕಳೆದುಕೊಂಡು, ಫ್ರಿಡ್ಜ್‌ನಲ್ಲಿರುವ ಇತರ ಆಹಾರಗಳ ವಾಸನೆಯನ್ನು ಹೀರಿಕೊಳ್ಳುತ್ತವೆ. ಬ್ಲ್ಯಾಕ್‌ಬೆರಿಗಳಂತಹ ಹಣ್ಣುಗಳಲ್ಲಿ ತೇವಾಂಶ ಶೇಖರಣೆಯಾಗಿ ಬೇಗನೆ ಹಾಳಾಗುವುದರಿಂದ ಅವುಗಳನ್ನು ತಾಜಾವಾಗಿದ್ದಾಗಲೇ ಸೇವಿಸುವುದು ಒಳಿತು. ಹೀಗಾಗಿ, ಈ ಎಲ್ಲಾ ಹಣ್ಣುಗಳ ಸಂಪೂರ್ಣ ಪೌಷ್ಟಿಕಾಂಶ ಹಾಗೂ ನೈಸರ್ಗಿಕ ರುಚಿಯನ್ನು ಆನಂದಿಸಲು ಅವುಗಳನ್ನು ಕೋಣೆಯ ಉಷ್ಣಾಂಶದಲ್ಲೇ ಸಂಗ್ರಹಿಸುವುದು ಶ್ರೇಷ್ಠ.