ರಾಜ್ಯದಲ್ಲಿ ಜನಸಾಮಾನ್ಯರಿಗೆ ಒಂದಾದ ಮೇಲೊಂದು ಬೆಲೆ ಏರಿಕೆಯ ಬರೆ ಬೀಳುತ್ತಿದ್ದು, ಇದೀಗ ನಿತ್ಯಬಳಕೆಯ ಪ್ರಮುಖ ಆಹಾರ ಧಾನ್ಯವಾದ ಅಕ್ಕಿಯ ಬೆಲೆ ಸತತ ನಾಲ್ಕು ತಿಂಗಳಲ್ಲಿ ನಾಲ್ಕನೇ ಬಾರಿಗೆ ಏರಿಕೆಯಾಗಿದೆ. ಇತ್ತೀಚೆಗಷ್ಟೇ ಹಾಲಿನ ದರ ಮತ್ತು ಬಸ್ ಟಿಕೆಟ್ ದರ ಪರಿಷ್ಕರಣೆಯ ವರದಿಗಳ ನಡುವೆ, ಅಕ್ಕಿ ಬೆಲೆಯೂ ಗಗನಕ್ಕೇರಿರುವುದು ಸಾರ್ವಜನಿಕರ ಜೇಬಿಗೆ ದೊಡ್ಡ ಕತ್ತರಿ ಬಿದ್ದಂತಾಗಿದೆ. ಮಾರುಕಟ್ಟೆಯಲ್ಲಿ ಸತತ ಬೆಲೆ ಏರಿಕೆಯ ಪರಿಣಾಮ, ಅಕ್ಕಿ ಕೊಳ್ಳಲು ಬರುವ ಗ್ರಾಹಕರು ಹೊಸ ದರವನ್ನು ಕೇಳಿ ದಿಗ್ರಮೆಗೊಂಡು ಬರಿಗೈಯಲ್ಲಿ ಹಿಂತಿರುಗುವ ಸ್ಥಿತಿ ನಿರ್ಮಾಣವಾಗಿದೆ.
ವಿವಿಧ ತಳಿಯ ಅಕ್ಕಿ ದರಗಳಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಪ್ರಮುಖವಾಗಿ ಸೋನಾ ಮಸೂರಿ ಅಕ್ಕಿಯ ಬೆಲೆ ಕೆಜಿಗೆ 100 ರೂಪಾಯಿಯ ಗಡಿ ತಲುಪಿದೆ. ಯಶವಂತಪುರ ಸಗಟು ಮಾರುಕಟ್ಟೆಯಲ್ಲಿ 25 ಕೆಜಿಯ ಸೋನಾ ಮಸೂರಿ ಅಕ್ಕಿ ಚೀಲದ ದರ 1,430 ರೂಪಾಯಿಯಿಂದ 1,820 ರೂಪಾಯಿಗೆ ಜಿಗಿದಿದ್ದು, ಕಳೆದ ಎರಡು ತಿಂಗಳಲ್ಲೇ ಚೀಲಕ್ಕೆ 390 ರಿಂದ 400 ರೂಪಾಯಿ ಹೆಚ್ಚಳವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ಇದರ ದರ ಕೆಜಿಗೆ 90 ರೂಪಾಯಿವರೆಗೆ ತಲುಪಿದೆ. ಇನ್ನುಳಿದಂತೆ ಕೋಲಂ ಅಕ್ಕಿ ದರ ಕೆಜಿಗೆ 75 ರೂಪಾಯಿಯಿಂದ 110 ರೂಪಾಯಿಗೆ, ರಾಜಮುಡಿ ಅಕ್ಕಿ ದರ 125 ರೂಪಾಯಿಯಿಂದ 150 ರೂಪಾಯಿಗೆ ಹಾಗೂ ಸ್ಟೀಮ್ ಅಕ್ಕಿ ದರ 60 ರೂಪಾಯಿಯಿಂದ 88 ರೂಪಾಯಿಗೆ ಏರಿಕೆಯಾಗಿದೆ. ಜೊತೆಗೆ ಪ್ರೀಮಿಯಂ ತಳಿಗಳಾದ ಬಾಸುಮತಿ ಅಕ್ಕಿ ದರ 105 ರಿಂದ 120 ರೂಪಾಯಿಗೆ ಮತ್ತು ಜೀರಾ ರೈಸ್ ದರ 115 ರಿಂದ 125 ರೂಪಾಯಿಗೆ ಏರಿಕೆಯಾಗಿದೆ.
ಈ ರೀತಿ ಸತತವಾಗಿ ಅಕ್ಕಿ ಬೆಲೆ ಹೆಚ್ಚಳವಾಗುತ್ತಿರುವುದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗದಿರುವುದೇ ಮುಖ್ಯ ಕಾರಣವಾಗಿದೆ. ರಾಜ್ಯದ ಪ್ರಮುಖ ಭತ್ತ ಬೆಳೆಯುವ ಪ್ರದೇಶಗಳಾದ ರಾಯಚೂರು, ಸಿಂಧನೂರು, ಸಿರಗುಪ್ಪ ಮತ್ತು ಭದ್ರಾವತಿ ಭಾಗಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಭತ್ತದ ಉತ್ಪಾದನೆ ತೀವ್ರವಾಗಿ ಕುಸಿದಿದೆ. ಇದರ ಜೊತೆಗೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ ಕೇವಲ ಶೇಕಡಾ 50 ರಷ್ಟು ಮಾತ್ರ ಇಳುವರಿ ಬಂದಿರುವುದರಿಂದ ಅಕ್ಕಿಗೆ ಭಾರಿ ಅಭಾವ ಸೃಷ್ಟಿಯಾಗಿದೆ. ಮಾರುಕಟ್ಟೆಯಲ್ಲಿ ಬೆಳೆ ಕೊರತೆ ಮುಂದುವರಿದಿರುವುದರಿಂದ ಮುಂಬರುವ ದಿನಗಳಲ್ಲಿ ಅಕ್ಕಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.