ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಆಪರೇಷನ್ ಕಮಲದ ಸದ್ದು ಜೋರಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರಕ್ಕೆ ಪ್ರಬಲ ಆಘಾತ ನೀಡುವಂತಹ ಹೇಳಿಕೆ ನೀಡಿದ್ದಾರೆ. ನಾಳೆಯೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದರೆ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಸಂಪುಟದ ಹಾಲಿ ಸಚಿವರೂ ಸೇರಿದಂತೆ ಸುಮಾರು 20 ರಿಂದ 25 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಎಂದು ವಿಜಯೇಂದ್ರ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಾವುದೇ ನಾಯಕರನ್ನು ಅಥವಾ ಶಾಸಕರನ್ನು ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿಲ್ಲ. ಆದರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಂತರಿಕ ವಾತಾವರಣ ಸಂಪೂರ್ಣವಾಗಿ ಹದಗೆಟ್ಟಿದೆ. ಮುಖ್ಯಮಂತ್ರಿಗಳ ಮೇಲೆ ಆಡಳಿತ ಪಕ್ಷದ ಶಾಸಕರಿಗೆ ಹಾಗೂ ನಾಯಕರಿಗೇ ವಿಶ್ವಾಸ ಇಲ್ಲದಂತಾಗಿದೆ. ಸ್ವತಃ ಡಿ. ಕೆ. ಶಿವಕುಮಾರ್ ಅವರೇ ತಮ್ಮದೇ ಪಕ್ಷದಲ್ಲಿ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಕಷ್ಟಕರ ವಾತಾವರಣ ನಿರ್ಮಾಣವಾಗಿದ್ದು, ಶಾಸಕರು ಪಕ್ಷ ತೊರೆಯಲು ಕಾದು ಕುಳಿತಿದ್ದಾರೆ ಎಂದು ಪ್ರತಿಪಾದಿಸಿದರು.
ಅಧಿಕಾರಕ್ಕಾಗಿ 'ಸ್ಟಿಂಗ್ ಆಪರೇಷನ್': ರಾಜಕೀಯ ವ್ಯಭಿಚಾರ ಎಂದ ವಿಜಯೇಂದ್ರ ಟೀಕೆ
ಕಾಂಗ್ರೆಸ್ ಆಂತರಿಕ ರಾಜಕೀಯದಲ್ಲಿ ನಡೆಯುತ್ತಿದೆ ಎನ್ನಲಾದ 'ಸ್ಟಿಂಗ್ ಆಪರೇಷನ್' ಚರ್ಚೆಗಳ ಕುರಿತು ಅತ್ಯಂತ ಕಟು ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ ವಿಜಯೇಂದ್ರ, ಅಧಿಕಾರವನ್ನು ಕಸಿದುಕೊಳ್ಳಲು ಇಂತಹ ಹಾದಿ ಹಿಡಿಯುವುದು 'ರಾಜಕೀಯ ವ್ಯಭಿಚಾರ'ಕ್ಕೆ ಸಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದೊಳಗೆ ಕೆಲವರು ಸಚಿವರಾಗಲು, ಇನ್ನು ಕೆಲವರು ಮುಖ್ಯಮಂತ್ರಿಯಾಗಲು ತಮ್ಮದೇ ನಾಯಕರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿಸುತ್ತಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ವ್ಯಾಪಕವಾಗಿ ನಡೆಯುತ್ತಿವೆ. ಇಂತಹ ಕೀಳುಮಟ್ಟದ ಬೆಳವಣಿಗೆಗಳು ಕರ್ನಾಟಕದ ಸುಸಂಸ್ಕೃತ ರಾಜಕಾರಣದ ದೃಷ್ಟಿಯಿಂದ ಅತ್ಯಂತ ದುರದೃಷ್ಟಕರ. ಯಾರು ಯಾರ ವಿರುದ್ಧ ಈ ಕುತಂತ್ರ ನಡೆಸಿದ್ದಾರೆ ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ. ಇಂತಹ '420 ಕೆಲಸ' ಮಾಡಿದವರು ಖಂಡಿತವಾಗಿಯೂ ಅದಕ್ಕೆ ತಕ್ಕ ಪರಿಣಾಮವನ್ನು ಅನುಭವಿಸಲಿದ್ದಾರೆ ಎಂದು ಎಚ್ಚರಿಸಿದರು.